ಜಿಲ್ಲೆ

ಮೊದಲ ಪತಿಯ ಮೇಲಿನ ದ್ವೇಷಕ್ಕೆ 2ನೇ ಗಂಡನ ಜತೆ ಸೇರಿ ಹೆತ್ತ ಮಗಳನ್ನೇ ಕೊಲೆಗೈದ ತಾಯಿ!

ಮೈಸೂರು: ಎರಡನೇ ಗಂಡ ಹಾಗೂ ಅತ್ತೆ ಜತೆ ಸೇರಿಕೊಂಡು ಮಹಿಳೆಯೊಬ್ಬಳು ಹೆತ್ತ ಮಗುವನ್ನೇ ಕೊಲೆಗೈದಿರುವ ಅಮಾನವೀಯ ಘಟನೆ ಮೈಸೂರಿನ ಮೇಟಗಳ್ಳಿಯಲ್ಲಿ ನಡೆದಿದೆ.

ಜಯಲಕ್ಷ್ಮಿ(6) ಹತ್ಯೆಯಾದ ಬಾಲಕಿ. ಆರೋಪಿ ತಾಯಿ ಪವಿತ್ರಾ, ಎರಡನೇ ಗಂಡ ಸೂರ್ಯ ಹಾಗೂ ಅತ್ತೆ ಗೌರಮ್ಮನನ್ನು ಪೊಲೀಸರು ಬಂಧಿಸಿದ್ದಾರೆ. 8 ವರ್ಷಗಳ ಹಿಂದೆ ಸಿದ್ದೇಶ್ ಎಂಬಾತನನ್ನು ಪವಿತ್ರಾ ಮದುವೆಯಾಗಿದ್ದಳು. ಆತ ಬದುಕಿರುವಾಗಲೇ ಮತ್ತೊಂದು ವಿವಾಹವಾಗಿದ್ದಳು.

ಜಯಲಕ್ಷ್ಮೀ ಮೊದಲ ಪತಿಗೆ ಜನಿಸಿದ ಮಗು. ಇದೇ ಕಾರಣಕ್ಕೆ ಆಕೆಯ ಮೇಲೆ ದ್ವೇಷ ಬೆಳೆಸಿಕೊಂಡಿದ್ದಳು. ಹೊಂಚ ಹಾಕಿದ್ದ ಪವಿತ್ರಾ ಎರಡನೇ ಗಂಡ ಮತ್ತು ಅತ್ತೆಯ ಜತೆ ಸೇರಿ ಮಲಗಿದ್ದ ಬಾಲಕಿಯ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ.

ಬಳಿಕ ಅನುಮಾನ ಬಾರದಂತೆ ಬಾಲಕಿಯ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ. ಆದರೆ, ಸಂಶಯಗೊಂಡ ಮೊದಲ ಪತಿ ಸಿದ್ದೇಶ್ ದೂರು ನೀಡಿದ್ದ. ಹೀಗಾಗಿ ಮೇಟಗಳ್ಳಿ‌ ಪೊಲೀಸರು ಹೂತಿದ್ದ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿದ್ದರು. ವರದಿಯಲ್ಲಿ ಇದು ಅಸಹಜ ಸಾವು ಎಂದು ಧೃಡವಾಗಿತ್ತು.

ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ನಿಜಾಂಶವನ್ನು ಬಾಯ್ಬಿಟ್ಟಿದ್ದಾರೆ. ಈ ಸಂಬಂಧ ಮೇಟಗಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)