ಜಿಲ್ಲೆ

ಆರರಿಂದ ಎಂಟು ಹುಲಿಗಳು ಕಾಡಿನಿಂದ ಹೊರಬಂದಿವೆ: ಸಚಿವ ಡಾ.ಎಚ್.ಸಿ.ಮಹದೇವಪ್ಪ

ಮೈಸೂರು: ಹುಲಿ ದಾಳಿ ಪ್ರಕರಣದಲ್ಲಿ ನಿರ್ಲಕ್ಷೃ ವಹಿಸಿದ ಅರಣ್ಯ ಇಲಾಖೆಯ ಒಬ್ಬರನ್ನು ಅಮಾನತುಗೊಳಿಸಲಾಗಿದೆ. ಇನ್ನೂ ಕೆಲ ಅಧಿಕಾರಿಗಳನ್ನು ಅಮಾನತು ಪಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.

ಹುಲಿ ಸಂಚರಿಸುವ ಕಾಡಂಚಿನ ಗ್ರಾಮಗಳಲ್ಲಿ ಪರಿಶೀಲನೆ ವೇಳೆ ಅಧಿಕಾರಿಗಳು ಸ್ಥಳಕ್ಕೆ ಸಕಾಲಕ್ಕೆ ಆಗಮಿಸದೆ ಇರುವುದು, ಗ್ರಾಮಸ್ಥರು ಕೇಳಿಕೊಂಡರೂ ಬೋನ್ ಇಡದೇ ಇರುವುದು ಕಂಡುಬಂದಿದೆ. ಹೀಗಾಗಿ ಒಬ್ಬರನ್ನು ಅಮಾನತುಗೊಳಿಸಲಾಗಿದೆ. ವರದಿ ಬಂದ ನಂತರ ಇನ್ನಷ್ಟು ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದರು.

ಘಟನೆಗಳಿಗೆ ಸಂಬಂಧಿಸಿದಂತೆ ಇನ್ನೂ ವರದಿಗಳು ಬರಬೇಕಾಗಿದ್ದು, ಅವುಗಳು ಬಂದರೆ ಕೆಲವು ಅಧಿಕಾರಿಗಳು ಸಸ್ಪೆಂಡ್ ಆಗಲಿದ್ದಾರೆ ಎಂದು ಹೇಳಿದರು.

ಮೈಸೂರು ಜಿಲ್ಲೆಯಲ್ಲಿ ಹುಲಿ ದಾಳಿ ಪ್ರಕರಣ ತೀವ್ರ ಸ್ವರೂಪ ಪಡೆದಿದೆ. ಹಾಗಾಗಿ ಶುಕ್ರವಾರ ಶಾಸಕ ಅನಿಲ್ ಚಿಕ್ಕಮಾದು, ಸಂಸದ ಸುನೀಲ್ ಬೋಸ್ ಅವರು ಅಧಿಕಾರಿಗಳ ತಂಡದ ಜತೆ ಹುಲಿ ದಾಳಿ ನಡೆಸಿದ್ದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈಗಾಗಲೇ ಹುಲಿ ದಾಳಿಯಿಂದ ಇಬ್ಬರು ಮೃತಪಟ್ಟಿದ್ದಾರೆ. ಒಬ್ಬ ವ್ಯಕ್ತಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿಸಿದರು.

ಎಚ್.ಡಿ.ಕೋಟೆಯಲ್ಲಿ ಸದ್ಯ ದಾಳಿ ನಡೆದಿರುವ ಭಾಗದಲ್ಲಿ ಆರರಿಂದ ಎಂಟು ಹುಲಿಗಳು ಕಾಡಿನಿಂದ ಹೊರಬಂದಿವೆ. ಇವುಗಳನ್ನು ಸೆರೆ ಹಿಡಿಯಲು ಸರ್ಕಾರ ಆದೇಶಿಸಿದೆ. ಅದಕ್ಕಾಗಿ ನಾಲ್ಕು ಕಡೆಗಳಲ್ಲಿ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಹೇಳಿದರು.

ಚಾ.ನಗರದಲ್ಲಿ ವಿಶೇಷ ಸಭೆ: ಸ್ಥಳೀಯ ಆರೋಗ್ಯ ಕೇಂದ್ರಗಳಲ್ಲಿ ಅಂಬುಲೆನ್ಸ್ ವ್ಯವಸ್ಥೆ ಇಲ್ಲದಿರುವುದು, ಸಫಾರಿಯಿಂದ ಪ್ರಾಣಿಗಳಿಗೆ ಆಗುತ್ತಿರುವ ಕಿರಿಕಿರಿ, ರೆಸಾರ್ಟ್‌ಗಳು ಹೆಚ್ಚಾಗಿರುವುದು ಪರಿಶೀಲನೆಯಲ್ಲಿ ತಿಳಿದು ಬಂದಿದೆ ಎಂದರು.

ಈ ಎಲ್ಲ ವಿಷಯವನ್ನು ಗುರುವಾರ ನಡೆದ ಸಚಿವ ಸಂಪುಟ ಸಭೆಯ ಗಮನಕ್ಕೆ ತಂದಿದ್ದೇನೆ. ಅರಣ್ಯ ಸಚಿವರು, ಅರಣ್ಯ ಅಧಿಕಾರಿಗಳು, ಇನ್ನಿತರ ಜನಪ್ರತಿನಿಧಿಗಳನ್ನು ಒಳಗೊಂಡಂತೆ ಹುಲಿ ದಾಳಿ ಕುರಿತು ಸಮಗ್ರವಾಗಿ ಚರ್ಚಿಸಲು ಚಾಮರಾಜನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನ.2ರ ಭಾನುವಾರ ಮಧ್ಯಾಹ್ನ ವಿಶೇಷ ಸಭೆ ಕರೆಯಲಾಗಿದೆ ಎಂದರು.

ಅಧಿಕಾರ ಯಾರಪ್ಪನ ಮನೆ ಆಸ್ತಿಯಲ್ಲ

ಮೈಸೂರು: ಸಚಿವ ಸ್ಥಾನ ಯಾವಾಗ ಬರುತ್ತದೆ, ಯಾವಾಗ ಹೋಗುತ್ತದೆ ಎಂಬುದನ್ನು ನಾನು ತಲೆಕೆಡಿಸಿಕೊಳ್ಳೊದಿಲ್ಲ. ಆದರೆ ವೈಯಕ್ತಿವಾಗಿ ಹೇಳುವುದಾದರೇ ನಾನಂತೂ ಸೇಫ್ ಎಂದು ಸಚಿವ ಡಾ.ಎಚ್.ಸಿ.ಮಹದೇವಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಅಧಿಕಾರ ಯಾರಪ್ಪನ ಮನೆ ಆಸ್ತಿಯಲ್ಲ. ಎಂಎಲ್‌ಎ ಆಗಿಯೂ ಕೆಲಸ ಮಾಡಬಹುದು, ಸಚಿವರಾದಾಗಲೂ ಮಾಡಬಹುದು. ಎಲ್ಲರೊಂದಿಗೆ ಸೇರಿ ಅಭಿವೃದ್ಧಿ ಕೆಲಸ ಮಾಡಬಹುದು. ಅಧಿಕಾರದ ವಿಚಾರದಲ್ಲಿ ನಾನು ಯಾವಾಗಲೂ ತಲೆಕೆಡಿಸಿಕೊಳ್ಳುವುದಿಲ್ಲ ಎಂದರು.

ದಲಿತ ಸಮಾವೇಶ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವರು, ಪಕ್ಷಕ್ಕೆ ಪೂರಕವಾದ ಚಟುವಟಿಕೆಗಳಿಗೆ ಅನುಮತಿ ಬೇಕಾಗಿಲ್ಲ. ಪಕ್ಷಕ್ಕೆ ವಿರುದ್ಧವಾದ ಸಮಾವೇಶವಾದರೆ ಪಕ್ಷವೇ ಮಧ್ಯಪ್ರವೇಶಿಸುತ್ತದೆ. ದಲಿತ ಸಮಾವೇಶದ ರೂಪುರೇಷೆಗಳು ನಿರಂತರವಾಗಿ ನಡೆಯುತ್ತಿರುತ್ತವೆ. ಯಾವಾಗ ದಲಿತರಿಗೆ ನೋವು ಆಗುತ್ತದೆ ಅಗೆಲ್ಲ ಸಮಾವೇಶ ನಡೆಯುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.