ಶಿರಾ: ಒಂದೇ ಕುಟುಂಬದ 6 ಮಂದಿಗೆ ಕರೊನಾ ಸೋಂಕು ತಗುಲಿದೆ. ಇತ್ತೀಚೆಗೆ ಹಿಂದೂಪುರಕ್ಕೆ ಹೋಗಿಬಂದಿದ್ದ ಶಿರಾ ನಗರದ ಪಾರ್ಕ್ ಮೊಹಲ್ಲಾದ ಪಾತ್ರೆ ವ್ಯಾಪಾರಿಗೆ ಮಂಗಳವಾರ ಸೋಂಕು ಕಾಣಿಸಿಕೊಂಡಿದ್ದು, ಪ್ರಾಥಮಿಕ ಸಂಪರ್ಕದಲ್ಲಿದ್ದ ಪತ್ನಿ, ಮೂವರು ಮಕ್ಕಳು ಹಾಗೂ ಸಂಬಂಧಿಕರಿಬ್ಬರಿಗೂ ದೃಢಪಟ್ಟಿದೆ.
ಲಾಕ್‌ಡೌನ್ ಜಾರಿ ಸಂದರ್ಭದಲ್ಲಿ ಆಂಧ್ರದ ಹಿಂದೂಪುರದಲ್ಲಿ ನೆಲೆಸಿದ್ದ ಪತ್ನಿ, ಮೂವರು ಮಕ್ಕಳನ್ನು ಕರೆತರಲು ಮೇ 30ರಂದು ಬೈಕ್‌ನಲ್ಲಿ ತೆರಳಿದ್ದ ವ್ಯಕ್ತಿ ಜೂ.2 ರಂದು ಬೈಕ್‌ನಲ್ಲೇ ಎಲ್ಲರೊಂದಿಗೆ ವಾಪಸಾಗಿದ್ದ. ನಗರಕ್ಕೆ ಮರಳಿದ ಬಳಿಕ ಜ್ವರ ಕಾಣಿಸಿಕೊಂಡಿದ್ದು, ಖಾಸಗಿ ಆಸ್ಪತ್ರೆಗೆ ತೆರಳಿದ ವೇಳೆ ಸರ್ಕಾರಿ ಆಸ್ಪತ್ರೆಗೆ ತೆರಳಲು ಸೂಚಿಸಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಜೂ.6ರಂದು ಆತನ ಗಂಟಲು ದ್ರವ ಮಾದರಿ ಸಂಗ್ರಹಿಸಲಾಗಿತ್ತು.
ಜೂ.8ರಂದು ಸೋಂಕು ದೃಢವಾದ ಹಿನ್ನೆಲೆಯಲ್ಲಿ ಆತನನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಶಿರಾ ಆಸ್ಪತ್ರೆಯಲ್ಲಿ ಐಸೋಲೇಷನ್‌ನಲ್ಲಿ ಇರಿಸಲಾಗಿತ್ತು. ಈ ವೇಳೆ ಎಲ್ಲರ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಗುರುವಾರ ಎಲ್ಲರಲ್ಲೂ ಪಾಸಿಟಿವ್ ದೃಢಪಟ್ಟಿದೆ. ಕಂಟೇನ್ಮೆಂಟ್ ವಲಯಕ್ಕೆ ಡಿಸಿ ಭೇಟಿ: ಒಂದೇ ಕುಟುಂಬದ 6 ಮಂದಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಗುರುವಾರ ಬೆಳಗ್ಗೆ ಸೋಂಕಿತರು ವಾಸವಿದ್ದ ಪಾರ್ಕ್ ಮೊಹಲ್ಲಾಗೆ ಭೇಟಿ ನೀಡಿ ಪರಿಶೀಲಿಸಿದರು. ಸೋಂಕಿತರ ಮನೆಯ ಸುತ್ತಮುತ್ತಲ ಪ್ರದೇಶವನ್ನು ಕಂಟೇನ್ಮೆಂಟ್ ವಲಯ ಎಂದು ಘೋಷಿಸಿದ್ದು, ಎಲ್ಲ ಮನೆಗಳಲ್ಲಿಯೂ ಸರ್ವೇ ನಡೆಸಲಾಗುತ್ತಿದೆ.
ಈತ ಹಿಂದೂಪುರದಿಂದ ವಾಪಸಾದ ಬಳಿಕ ಒಂದೆರಡು ದಿನ ವ್ಯಾಪಾರ ಮಾಡಿದ್ದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ತಹಸೀಲ್ದಾರ್ ನಾಹಿದಾ ಜಂಜಂ, ಡಾ.ಶ್ರೀನಾಥ್, ಇಒ ಮೋಹನ್‌ಕುಮಾರ್, ನಗರಸಭೆ ಆಯುಕ್ತ ಸಿ.ಆರ್.ಪರಮೇಶ್ವರಪ್ಪ, ಕಂದಾಯ ಅಧಿಕಾರಿ ಮಂಜುನಾಥ್, ಕಾಂಗ್ರೆಸ್ ಮುಖಂಡ ಅಬ್ದುಲ್ಲಾ ಉಪಸ್ಥಿತರಿದ್ದರು.
ಕಾರ್ಪೆಂಟರ್‌ಗೆ ಕರೊನಾ !: ಮಧುಗಿರಿ ತಾಲೂಕಿನ ಕೆ.ಸಿ.ರೊಪ್ಪದ 40 ವರ್ಷದ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ. ಗೌರಿಬಿದನೂರು ತಾಲೂಕಿನ ಅಲಿಪುರದಿಂದ ಮರಳಿದ ಬಳಿಕ ಜೂ.9ರಂದು ಜ್ವರ ಕಾಣಿಸಿಕೊಂಡಿದೆ. ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ತೆರಳಿದಾಗ ಗಂಟಲುದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ. ಗುರುವಾರ ಸೋಂಕು ದೃಢವಾಗಿದೆ. ತಕ್ಷಣವೇ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಆತನ ಪ್ರಾಥಮಿಕ ಸಂಪರ್ಕದಲ್ಲಿ 6 ಮಂದಿಯನ್ನು ಕ್ವಾರಂಟೈನ್‌ನಲ್ಲಿರಿಸಲಾಗಿದೆ. ದ್ವಿತೀಯ ಸಂಪರ್ಕದಲ್ಲಿದ್ದವರ ಪತ್ತೆ ಮಾಡಲಾಗುತ್ತಿದೆ. ಕೆ.ಸಿ.ರೊಪ್ಪ ಗ್ರಾಮವನ್ನು ಕಂಟೇನ್ಮೆಂಟ್ ವಲಯ ಮಾಡಿದ್ದು ಉಪವಿಭಾಗಾಧಿಕಾರಿ ಡಾ.ಕೆ.ನಂದಿನಿದೇವಿ, ಡಿವೈಎಸ್ಪಿ ಎಂ.ಪ್ರವೀಣ್, ತಹಸೀಲ್ದಾರ್ ಡಾ.ಜಿ.ವಿಶ್ವನಾಥ್, ಡಾ.ರಮೇಶ್‌ಬಾಬು ಮತ್ತಿತರರು ಗ್ರಾಮಕ್ಕೆ ಭೇಟಿ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.