ಹುಬ್ಬಳ್ಳಿ: ಬುಧವಾರ ಸುರಿದ ಭಾರಿ ಮಳೆಯು ಗ್ರಾಮೀಣ ಪ್ರದೇಶದ ಜನಜೀವನ ಅಸ್ತವ್ಯಸ್ತಗೊಳಿಸಿತ್ತು. ನಡುಗಡ್ಡೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಆರು ಜನರು ಹಾಗೂ ನೂರಾರು ಕುರಿಗಳನ್ನು ರಕ್ಷಿಸಲಾಗಿದೆ.
ತಾಲೂಕಿನ ಬ್ಯಾಹಟ್ಟಿ ಬಳಿ ನಿಗರಿ ಹಳ್ಳದಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಮೂವರನ್ನು ಹಾಗೂ 300 ಕುರಿಗಳನ್ನು ರಕ್ಷಿಸಲಾಗಿದೆ.
ಬ್ಯಾಹಟ್ಟಿ ಕುಸುಗಲ್ ರಸ್ತೆಯಲ್ಲಿನ ಹಳ್ಳದಲ್ಲಿ ಹನಮಂತಪ್ಪ ಬೇವೂರ, ಹಜರೇಸಾಬ ನೂಲ್ವಿ ಮತ್ತು ರಾಯಪ್ಪ ಕಬ್ಬೇರ ಅವರು ಸಿಲುಕಿದ್ದರು.
ಈ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಎಸ್ಪಿ, ಡಿವೈಎಸ್ಪಿ, ತಹಸೀಲ್ದಾರ್ ಸೇರಿದಂತೆ ಹಲವರು ರಕ್ಷಣೆ ಕಾರ್ಯಾಚರಣೆ ನಡೆಸಿದರು.
ಅಗ್ನಿಶಾಮಕ ದಳ, ಪೊಲೀಸ್ ಇಲಾಖೆ, ಕಂದಾಯ ಇಲಾಖೆ ಸಿಬ್ಬಂದಿ ನೆರವಿನೊಂದಿಗೆ ಕಾರ್ಯಾಚರಣೆ ನಡೆಸಿ ಹಳ್ಳದ ಮಧ್ಯೆ ನಡುಗಡ್ಡೆಯಲ್ಲಿ ಸಿಕ್ಕಿಕೊಂಡಿದ್ದವರನ್ನು ಬೋಟ್ ಮೂಲಕ ಹೊರಗೆ ಕರೆತರಲಾಗಿದೆ ಎಂದು ತಹಸೀಲ್ದಾರ್ ಜೆ.ಬಿ. ಮಜ್ಜಗಿ ತಿಳಿಸಿದ್ದಾರೆ.
ಇದೇ ರೀತಿ ಇಂಗಳಹಳ್ಳಿ ಬಳಿಯೂ ಮೂವರು ನಡುಗಡ್ಡೆಯಲ್ಲಿ ಸಿಲುಕಿಕೊಂಡಿದ್ದರು. ಅಲ್ಲದೇ 240ಕ್ಕೂ ಹೆಚ್ಚು ಕುರಿಗಳು ಇದ್ದವು. ಅವರೆಲ್ಲರನ್ನೂ ಬೋಟ್ ಮೂಲಕ ಕರೆತರಲಾಗಿದೆ ಎಂದು ತಿಳಿಸಿದರು.
ಕೋಡಿ ಹರಿದ ಉಣಕಲ್ಲ ಕೆರೆ:
ಹುಬ್ಬಳ್ಳಿಯ ಉಣಕಲ್ಲ ಕೆರೆ ಇದೇ ವರ್ಷದಲ್ಲಿ ಮತ್ತೊಮ್ಮೆ ಕೋಡಿ ಹರಿದಿದೆ. ಕಳೆದ ತಿಂಗಳಷ್ಟೇ ಭಾರಿ ಮಳೆ ಬಂದ ಸಂದರ್ಭದಲ್ಲಿ ಉಣಕಲ್ಲ ಕೆರೆಯು ತುಂಬಿ ಹರಿದಿತ್ತು. ಇದೀಗ ಮತ್ತೊಮ್ಮೆ ಭರ್ಜರಿಯಾಗಿ ತುಂಬಿದ್ದು, ಕೋಡಿ ಬೀಳುವ ದೃಶ್ಯ ಮನಮೋಹಕವಾಗಿದೆ. ಆದರೆ, ಕೆರೆ ನೀರು ಸಂರ್ಪೂಣ ಹಸಿರುಮಯವಾಗಿದ್ದು, ಒಂದಿಷ್ಟು ಬೇಸರ ತರಿಸುತ್ತದೆ ಎಂದು ಪರಿಸರ ಪ್ರೇಮಿಗಳು ಹೇಳುತ್ತಾರೆ.