ಚಿಕ್ಕಮಗಳೂರು: ಕರೊನಾ ಭೀತಿ ನಡುವೆಯೇ ಜಿಲ್ಲೆಯ ಆರು ಕೇಂದ್ರಗಳಲ್ಲಿ ಜೀವಶಾಸ್ತ್ರ ಹಾಗೂ ಗಣಿತಶಾಸ್ತ್ರ ವಿಷಯಗಳಿಗೆ ಗುರುವಾರ ಪದವಿ ಪೂರ್ವ ಶಿಕ್ಷಣ ಇಲಾಖೆ ವಹಿಸಿದ ಸುರಕ್ಷತೆಯ ನಡುವೆ ವಿದ್ಯಾರ್ಥಿಗಳು ಸಾಮಾನ್ಯ ಪ್ರವೇಶ ಪರೀಕ್ಷೆ ಬರೆದರು. ಮೂಡಿಗೆರೆ ಕರೊನಾ ಸೋಂಕಿತ ವಿದ್ಯಾರ್ಥಿಗೆ ನಗರದ ಕರೊನಾ ಕೇರ್ ಸೆಂಟರ್ನಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಯಿತು.
ನೋಂದಣಿಯಾದ 2588 ವಿದ್ಯಾರ್ಥಿಗಳಲ್ಲಿ 2146 ವಿದ್ಯಾರ್ಥಿಗಳು ಜೀವಶಾಸ್ತ್ರ ವಿಷಯದ ಪರೀಕ್ಷೆ ಬರೆದರು. ಮಧ್ಯಾಹ್ನ ನಡೆದ ಗಣಿತಶಾಸ್ತ್ರ ಪರೀಕ್ಷೆಗೆ 2394 ವಿದ್ಯಾರ್ಥಿಗಳು ಹಾಜರಾಗಿದ್ದರು.
ನಗರದ ಬೇಲೂರು ರಸ್ತೆ ಪಪೂ ಕಾಲೇಜು, ಎಂಇಎಸ್ ಕಾಲೇಜು, ಬಸವನಹಳ್ಳಿ ಸಪಪೂ ಕಾಲೇಜು, ಮೌಂಟೆನ್ ವ್ಯೂ ಕಾಲೇಜು ಹಾಗೂ ಕಡೂರು ಬಾಲಕಿಯರ ಮತ್ತು ಬಾಲಕರ ಪಪೂ ಕಾಲೇಜು ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದ್ದು, ಅಗತ್ಯ ಮುನ್ನೆಚ್ಚರಿಕೆ ವಹಿಸಲಾಗಿತ್ತು.
ಕರೊನಾ ಹಿನ್ನೆಲೆಯಲ್ಲಿ ಸುರಕ್ಷತಾ ಕ್ರಮ ಕೈಗೊಳ್ಳುವ ಸಲುವಾಗಿ ಪರೀಕ್ಷೆ ಆರಂಭಗೊಳ್ಳುವ ಮುಂಚೆ ಬೆಳಗ್ಗೆ 8 ಗಂಟೆಗೆ ಬರುವಂತೆ ತಿಳಿಸಲಾಗಿದ್ದ ಹಿನ್ನೆಲೆಯಲ್ಲಿ ಬೆಳಗ್ಗೆ 7.45 ರಿಂದಲೇ ವಿದ್ಯಾರ್ಥಿಗಳು ಬರತೊಡಗಿದ್ದರು. 9 ಗಂಟೆಯ ವೇಳೆಗೆ ಎಲ್ಲ ವಿದ್ಯಾರ್ಥಿಗಳೂ ಹಾಜರಾಗಿದ್ದರಿಂದ ಸುರಕ್ಷತಾ ಕ್ರಮಗಳನ್ನು ಅನುಸರಿಸಲು ಅನುಕೂಲವಾಯಿತು ಎಂದು ಡಿಡಿಪಿಯು ಕೆ.ನಾಗರಾಜ್ ತಿಳಿಸಿದರು.
ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ಸಕಾಲಕ್ಕೆ ಬರಲು ಅನುಕೂಲವಾಗುವಂತೆ ಪ್ರತಿ ತಾಲೂಕು ಕೇಂದ್ರಗಳಿಂದ ಕೆಎಸ್ಆರ್ಟಿಸಿಯು ವಿಶೇಷ ಸಾರಿಗೆ ವ್ಯವಸ್ಥೆ ಕಲ್ಪಿಸಿತ್ತು.
ಮಾಸ್ಕ್, ಸ್ಯಾನಿಟೈಸಿಂಗ್: ವಿದ್ಯಾರ್ಥಿಗಳು ಮಾಸ್ಕ್ ಧರಿಸಿರುವುದನ್ನು ಖಚಿತಪಡಿಸಿಕೊಂಡು ಪ್ರವೇಶ ದ್ವಾರದಲ್ಲೇ ಸ್ಯಾನಿಟೈಸರ್ ಹಾಕಿ ಥರ್ಮಲ್ ಸ್ಕ್ರೀನಿಂಗ್ಗೆ ಒಳಪಡಿಸಿ ಪರೀಕ್ಷಾ ಕೊಠಡಿಗೆ ಕಳುಹಿಸಲಾಯಿತು. ಪರೀಕ್ಷಾ ಕೇಂದ್ರದ ಆವರಣದಲ್ಲಿ ವಿದ್ಯಾರ್ಥಿಗಳು ಪರಸ್ಪರ ಅಂತರ ಕಾಯ್ದುಕೊಳ್ಳಲು ಸೂಚಿಸಲಾಗಿದ್ದು, ಸ್ವತಂತ್ರವಾಗಿ ಗುಂಪು ಸೇರಲು ಅಥವಾ ಬೇರೆ ಕಡೆಗೆ ತೆರಳಲು ಅವಕಾಶ ನೀಡಲಿಲ್ಲ. ಪ್ರತಿ ಕೊಠಡಿಯಲ್ಲಿ 24 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿತ್ತು.
ಸೋಂಕಿತನಿಗೆ ಅವಕಾಶ: ಸೋಂಕು ದೃಢಪಟ್ಟ ಮೂಡಿಗೆರೆ ವಿದ್ಯಾರ್ಥಿಯೊಬ್ಬನಿಗೆ ನಗರದ ಸಾಯಿ ಮಧುವನ ಬಡಾವಣೆಯ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದ ಕರೊನಾ ಕೇರ್ ಸೆಂಟರ್ನಲ್ಲಿ ಡಾ. ಹರೀಶ್ ಬಾಬು ಉಸ್ತುವಾರಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಯಿತು. ಸೋಂಕಿತ ವಿದ್ಯಾರ್ಥಿಯನ್ನು ಮೂಡಿಗೆರೆಯಿಂದ ಆಂಬುಲೆನ್ಸ್ನಲ್ಲಿ ಕರೆತಂದು ಪರೀಕ್ಷೆ ನಂತರ ಮರಳಿ ಕಳುಹಿಸಲಾಗಿದೆ. ಶುಕ್ರವಾರ ಮತ್ತೆ ಆಂಬುಲೆನ್ಸ್ನಲ್ಲಿ ಕರೆತಂದು ಪರೀಕ್ಷೆ ನಂತರ ವಾಪಸ್ ಮನೆಗೆ ಬಿಡಲಾಗುತ್ತದೆ.
ವಿದ್ಯಾರ್ಥಿ ತಂದೆ ಶಿಕ್ಷಕರಾಗಿದ್ದು, ಹಾಸನದಲ್ಲಿ 15 ದಿನದಿಂದ ಎಸ್ಎಸ್ಎಲ್ಸಿ ಉತ್ತರ ಪತ್ರಿಕೆ ಮೌಲ್ಯಮಾಪನ ಮಾಡಿ ಜು.25 ರಂದು ಮನೆಗೆ ಬಂದಿದ್ದರು. ಬಳಿಕ ಅವರಿಗೆ ಮತ್ತು ಅವರ ಪುತ್ರನಿಗೆ ಜ್ವರ ಕಾಣಿಸಿಕೊಂಡಿದ್ದು, ತಪಾಸಣೆ ಮಾಡಿಸಿಕೊಂಡಾಗ ಸೋಂಕು ಇರುವುದು ದೃಢಪಟ್ಟಿತ್ತು.
ಚೇತರಿಸಿಕೊಂಡು ಬಂದವರು ನಾಲ್ಕು ಮಂದಿ: ನಗರದಲ್ಲಿ ಸೀಲ್ಡೌನ್ ಆಗಿರುವ ಯಾವುದೇ ಬಡಾವಣೆಗಳ ವಿದ್ಯಾರ್ಥಿಗಳಿರಲಿಲ್ಲ. ಆದರೆ ಸೋಂಕು ತಗುಲಿ ಗುಣಮುಖರಾದ ಚಿಕ್ಕಮಗಳೂರಿನ ಇಬ್ಬರು ಹಾಗೂ ಕಡೂರಿನ ಇಬ್ಬರು ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿತ್ತು.