ಅಗ್ನಿ ಅವಘಡದಿಂದ ಹಾನಿಗೀಡಾಗಿರುವ ಶಂಕರಮಠ ರಸ್ತೆಯ ಹುಂಡೈ ಕಾರು ಶೋರೂಮ್. 
ಜಿಲ್ಲೆ

ಬೆಂಕಿ ಅನಾಹುತದಲ್ಲಿ ಆರು ಕಾರು ಭಾಗಶಃ ಭಸ್ಮ

ಶಿವಮೊಗ್ಗ: ಅಗ್ನಿಶಾಮಕದಳದ ಸಿಬ್ಬಂದಿ ಶುಕ್ರವಾರ ತಡರಾತ್ರಿವರೆಗೆ ಕಾರ್ಯಾಚರಣೆ ನಡೆಸಿದ ಬಳಿಕ ಶಂಕರಮಠ ರಸ್ತೆಯ ಹುಂಡೈ ಶೋರೂಮ್‌ಗೆ ಆವರಿಸಿದ್ದ ಬೆಂಕಿ ನಂದಿದ್ದು ಶೋರೂಮ್‌ನಲ್ಲಿದ್ದ ಎರಡು ಡೆಮೋ ಕಾರು, ಪಕ್ಕದ ಟಾಟಾ ಶೋ ರೂಮ್ ಸರ್ವಿಸ್‌ಗೆ ಬಂದಿದ್ದ ನಾಲ್ಕು ಕಾರುಗಳು ಭಾಗಶಃ ಸುಟ್ಟು ಹೋಗಿವೆ. ಜತೆಗೆ ಕಂಪ್ಯೂಟರ್ ಉಪಕರಣಗಳು, ಕಾರುಗಳ ಬಿಡಿ ಭಾಗಗಳು, ಶೋರೂಮ್‌ನ ಒಂದು ಭಾಗ ಸಂಪೂರ್ಣ ಸುಟ್ಟು ಹೋಗಿವೆ.

ಶೋರೂಮ್‌ಗೆ ಬೆಂಕಿ ಹೊತ್ತಿದ್ದೇಗೆ ಎಂಬುದಕ್ಕೆ ನಿಖರ ಕಾರಣ ಗೊತ್ತಾಗಿಲ್ಲ. ಶಾರ್ಟ್ ಸರ್ಕ್ಯೂಟ್‌ನಿಂದ ಅವಘಡ ಸಂಭವಿಸಿದೆ ಎಂದು ಶಂಕಿಸಲಾಗಿದ್ದು ಅವಘಡದಿಂದ ಉಂಟಾದ ನಷ್ಟದ ಅಂದಾಜು ಮಾಡಬೇಕಿದೆ. ಅಗ್ನಿಶಾಮಕ ಸಿಬ್ಬಂದಿ, ಪೊಲೀಸ್ ಇಲಾಖೆ, ಶೋರೂಮ್ ಆಡಳಿತ ಈ ಕುರಿತು ಪರಿಶೀಲಿಸಿದ ಬಳಿಕ ನಷ್ಟದ ಅಂದಾಜು ಸಿಗಲಿದೆ.
ಶುಕ್ರವಾರ ರಾತ್ರಿ 8.30ರ ಸುಮಾರಿಗೆ ಸಣ್ಣದಾಗಿ ಕಟ್ಟಡದ ಬಲಭಾಗದಲ್ಲಿ ಕಾಣಿಸಿಕೊಂಡ ಬೆಂಕಿ ಕೆಲವೇ ಕ್ಷಣದಲ್ಲಿ ಇಡೀ ಕಟ್ಟಡಕ್ಕೆ ಆವರಿಸಿತ್ತು. ಕಟ್ಟಡದಲ್ಲಿ ದಟ್ಟ ಹೊಗೆ ಆವರಿಸಿತ್ತು. ಅಗ್ನಿಶಾಮಕ ಸಿಬ್ಬಂದಿ ಸತತ ನಾಲ್ಕೈದು ಗಂಟೆ ಕಾರ್ಯಾಚರಣೆ ನಡೆಸಿದರು. ಅವರಿಗೆ ಸ್ಥಳೀಯರು ಮತ್ತು ಕಾರು ಶೋರೂಮ್ ಸಿಬ್ಬಂದಿ ಸಾಥ್ ನೀಡಿದರು. ಕಟ್ಟಡದ ಸರ್ವಿಸ್ ಸೆಂಟರ್‌ನಲ್ಲಿ ಬೆಂಕಿ ಹೊತ್ತಿ ಉರಿಯುತ್ತಿತ್ತು. ಈ ಹಿನ್ನೆಲೆ ಅಗ್ನಿಶಾಮಕ ಸಿಬ್ಬಂದಿ ಆಕ್ಸಿಜನ್ ಸಿಲಿಂಡರ್ ಮತ್ತು ಮಾಸ್ಕ್ ಧರಸಿ ತಳಮಹಡಿಗೆ ಇಳಿದು ಬೆಂಕಿ ನಂದಿಸಿದರು. ಪೆಟ್ರೋಲ್, ಡೀಸೆಲ್ ಅಥವಾ ಸಿಎನ್‌ಜಿ ಇರುವ ಸಾಧ್ಯತೆ ಇದ್ದಿದ್ದರಿಂದ ಕಾರ್ಯಾಚರಣೆ ವೇಳೆ ಎಚ್ಚರ ವಹಿಸಲಾಗಿತ್ತು. ಸುತ್ತಮುತ್ತಲ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು. ತಡರಾತ್ರಿವರೆಗೂ ನೀರು ಹಾಯಿಸಿ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು.

ಕಾರ್ಯಾಚರಣೆ ವೀಕ್ಷಣೆಗೆ ಜನವೋ ಜನ
ಶೋರೂಮ್‌ನಲ್ಲಿ ಬೆಂಕಿ ಬಿದ್ದ ವಿಚಾರ ಕಾಡ್ಗಿಚ್ಚಿನಂತೆ ಹರಡುತ್ತಿದ್ದಂತೆ ಸುತ್ತಮುತ್ತಲ ನಿವಾಸಿಗಳು ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿ ಅಗ್ನಿಶಾಮಕ ಸಿಬ್ಬಂದಿಯ ಕಾರ್ಯಾಚರಣೆ ವೀಕ್ಷಿಸಿದರು. ಈ ಹಿನ್ನೆಲೆಯಲ್ಲಿ ಶಂಕರಮಠ ರಸ್ತೆಯನ್ನು ಸಂಪೂರ್ಣ ಬಂದ್ ಮಾಡಲಾಗಿತ್ತು. ಇನ್ನು, ಜನರು ಶೋ ರೂಂ ಸಮೀಪ ಬಾರದಂತೆ ತಡೆಯಲು ಪೊಲೀಸರು ಆಗಾಗ ಲಾಠಿ ಬೀಸಿ ಗುಂಪು ಚದುರಿಸುತ್ತಿದ್ದರು. ಸದ್ಯ ಕಾರು ಶೋರೂಮ್ ಸುಟ್ಟು ಕರಕಲಾಗಿದ್ದು ಶನಿವಾರ ಬೆಳಗ್ಗೆಯಿಂದಲೇ ಜನರು ಆಗಮಿಸಿ ಫೋಟೋ, ವಿಡಿಯೋ ತೆಗೆದರು. ಬಂದೋಬಸ್ತ್ ಮತ್ತು ಸಂಚಾರ ದಟ್ಟಣೆ ತಡೆಗೆ ಕೋಟೆ ಠಾಣೆ ಪೊಲೀಸರನ್ನು ನಿಯೋಜಿಸಲಾಗಿತ್ತು.