ಮೈಸೂರು: ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಭಾನುವಾರ ಸಂವಹನ ಪ್ರಕಾಶನ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸಾಹಿತಿ ಶಿವರಾಮು ಕಾಡನಕುಪ್ಪೆ ಸಂಸ್ಮರಣ ಗ್ರಂಥ ಬಿಡುಗಡೆ ಸಮಾರಂಭ ನಡೆಯಿತು.
ಕೃತಿ ಬಿಡುಗಡೆ ಮಾಡಿ ಮಾತನಾಡಿದ ಸಾಹಿತಿ ಜಿ.ಪಿ.ಬಸವರಾಜು, ಈ ಕೃತಿಯಲ್ಲಿ ಶಿವರಾಮು ಅವರ ವಿವಿಧ ಮುಖಗಳ ಪರಿಚಯ ಇದೆ. ಕೃತಿ ಓದಿದರೆ ಅವರ ಕಾಲಘಟ್ಟದ ಚಳವಳಿ, ಮೌಲ್ಯಗಳನ್ನು ತಿಳಿಯಬಹುದು. ಶಿವರಾಮು ಕಾಡನಕುಪ್ಪೆ ಅವರ ವಿಮರ್ಶಾ ಲೇಖನಗಳು, ಪ್ರೇಮಪತ್ರಗಳು ಇದ್ದು, ಅವುಗಳನ್ನು ಒಟ್ಟು ಸೇರಿಸಿ ಪುಸ್ತಕ ಹೊರ ತರಬೇಕು ಎಂದು ಸಲಹೆ ನೀಡಿದರು.
ಸಮಾಜವಾದಿ ಚಿಂತಕ ಪ.ಮಲ್ಲೇಶ್ ಮಾತನಾಡಿ, ಬೆಳಗಾವಿ ಗಡಿ ವಿವಾದ ಮತ್ತೆ ಕಾಣಿಸಿಕೊಂಡಿದ್ದು, ಬೆಳಗಾವಿ ಗಡಿ ವಿವಾದಕ್ಕೆ ಮೈಸೂರಿನಲ್ಲಿ ದನಿ ಎತ್ತುವ ಮೂಲಕ ಶಿವರಾಮು ಕಾಡನಕುಪ್ಪೆ ಅವರಿಗೆ ಗೌರವ ಸಲ್ಲಿಸೋಣ ಎಂದರು.
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ವಿಶ್ರಾಂತ ಪ್ರಾಧ್ಯಾಪಕ ಡಾ.ರಾಗೌ, ಕಸಾಪ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ಮಹಾರಾಜ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ಕೆ.ಕಾಳಚನ್ನೇಗೌಡ, ಲೇಖಕ ಪ್ರೊ.ಜಿ.ಚಂದ್ರಶೇಖರ್, ಪತ್ರಕರ್ತ ಬಿ.ಎಂ.ಹನೀಫ್, ಶಿವರಾಮು ಕಾಡನಕುಪ್ಪೆ ಪತ್ನಿ ಸುವರ್ಣ ಕಾಡನಕುಪ್ಪೆ ಹಾಗೂ ಇತರರು ಇದ್ದರು.