ತಿ.ನರಸೀಪುರ: ಸುತ್ತೂರು ಮಠದ ಹಿರಿಯ ಶ್ರೀಗಳಾದ ಮಂತ್ರ ಮಹರ್ಷಿ ಡಾ.ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರೊಂದಿಗೆ ಉತ್ತಮ ಒಡನಾಟವಿಟ್ಟುಕೊಂಡು ಹಲವಾರು ಸಮಾಜಮುಖಿ ಕಾರ್ಯಗಳಲ್ಲಿ ಭಾಗಿಯಾಗಿದ್ದವರು ನೆರಗ್ಯಾತನಹಳ್ಳಿ ವಿರಕ್ತ ಮಠದ ಹಿರಿಯ ಶ್ರೀ ಶಿವಕುಮಾರ ಸ್ವಾಮೀಜಿ ಎಂದು ವಾಟಾಳು ಸೂರ್ಯ ಸಿಂಹಾಸನ ಮಠದ ಪೀಠಾಧ್ಯಕ್ಷ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಬಣ್ಣಿಸಿದರು.
ತಾಲೂಕಿನ ನೆರಗ್ಯಾತನಹಳ್ಳಿ ಗ್ರಾಮದ ವಿರಕ್ತ ಮಠದಲ್ಲಿ ಭಾನುವಾರ ಆಯೋಜಿಸಿದ್ದ ಲಿಂಗೈಕ್ಯ ಶ್ರೀ ಶಿವಕುಮಾರಸ್ವಾಮೀಜಿ ಅವರ 52ನೇ ಪುಣ್ಯ ಸ್ಮರಣೆ, ಲಿಂಗೈಕ್ಯ ಶ್ರೀ ರಾಜಶೇಖರ ಸ್ವಾಮೀಜಿ ಅವರ ಪ್ರಥಮ ಪುಣ್ಯ ಸ್ಮರಣೆ ಹಾಗೂ ಶ್ರೀಗಳ ನೂತನ ಗದ್ದುಗೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಸುತ್ತೂರು ಮಠದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದ ಶಿವಕುಮಾರ ಸ್ವಾಮೀಜಿ ಉಪಯುಕ್ತ ಮಾರ್ಗದರ್ಶವನ್ನೂ ನೀಡುತ್ತಿದ್ದರು. ಅವರ ಆಶೀರ್ವಾದಿಂದ ಮಠ ಅಭಿವೃದ್ಧಿ ಪಥದತ್ತ ಮುನ್ನಡೆಯುತ್ತಿರುವುದು ಸಂತಸದ ಸಂಗತಿ ಎಂದರು.
ಶ್ರೀಗಳ ಪುಣ್ಯ ಸ್ಮರಣೆ ಹಾಗೂ ಗದ್ದುಗೆ ಉದ್ಘಾಟನೆ ಹಿನ್ನೆಲೆ ಬೆಳಗ್ಗೆಯಿಂದಲೇ ಮಠದ ಶ್ರೀಗಳಾದ ಇಮ್ಮಡಿ ಶಿವಕುಮಾರ ಸ್ವಾಮೀಜಿ ನೇತೃತ್ವದಲ್ಲಿ ಹಾಗೂ ಇನ್ನಿತರ ಮಠಗಳ ಸ್ವಾಮೀಜಿಗಳ ಸಹಕಾರದೊಂದಿಗೆ ವಿವಿಧ ಪೂಜಾ ಕಾರ್ಯಗಳು ಹಾಗೂ ಕನಕಪುರ ದೇಗುಲ ಮಠದ ಶ್ರೀ ಚನ್ನಬಸವ ಸ್ವಾಮೀಜಿ ಅವರ ಪಾದಪೂಜೆ ನೆರವೇರಿಸಲಾಯಿತು.
ತಿ.ನರಸೀಪುರ ಸೇತುವೆ ಮಠದ ಶ್ರೀ, ಮುಡುಕುತೊರೆ ಕಲ್ಮಠದ ಶ್ರೀ, ಮಾಡ್ರಳ್ಳಿ ಮಠ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಮಠಾಧೀಶರು, ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕೋತಕಾರಿಯ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಭೋಜರಾಜು ಇತರರು ಇದ್ದರು. ಸಾವಿರಾರು ಭಕ್ತರಿಗೆ ಅನ್ನ ದಾಸೋಹ ಏರ್ಪಡಿಸಲಾಗಿತ್ತು.