ಜಿಲ್ಲೆ

ಕಳೆಗುಂದಿದ ಶಿವಗಂಗೆ ದನಗಳ ಜಾತ್ರೆ

ಶಿವರಾಜ.ಎಂ

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ನೆಲಮಂಗಲ ತಾಲೂಕಿನ ಶಿವಗಂಗೆಯ ದನಗಳ ಜಾತ್ರೆ ವರ್ಷದಿಂದ ವರ್ಷಕ್ಕೆ ಕಳೆಗುಂದುತ್ತಿದೆ. ವರ್ಷಾನುವರ್ಷದ ಇತಿಹಾಸ ಹೊಂದಿರುವ ಜಾತ್ರೆಯ ಸೊಬಗು ಮಂಕಾಗುತ್ತಿದೆ. ಮೂರ‌್ನಾಲ್ಕು ದಿನದಿಂದ ವಾರಗಟ್ಟಲೆ ನಡೆಯುತ್ತಿದ್ದ ದನಗಳ ಜಾತ್ರೆ ಈ ಬಾರಿ ಒಂದೇ ದಿನಕ್ಕೆ ಸೀಮಿತವಾಗಿರುವುದು ಕಂಡುಬಂದಿದೆ.

ಪ್ರತಿ ವರ್ಷ ಮಕರ ಸಂಕ್ರಾಂತಿ ವೇಳೆ (ಜ.14) ನಡೆಯುವ ಶ್ರೀ ಗಿರಿಜಾಕಲ್ಯಾಣ ಮಹೋತ್ಸವದ ನಿಮಿತ್ತ ದನಗಳ ಜಾತ್ರೆ ನಡೆಯುತ್ತಿತ್ತು, ಈ ಬಾರಿ ಜಾತ್ರೆಯಲ್ಲಿ ಕೇವಲ ಹತ್ತಿಪ್ಪತ್ತು ಜೋಡಿ ದನಗಳು ಕಂಡುಬಂದ ಹಿನ್ನೆಲೆಯಲ್ಲಿ ಒಂದೇ ದಿನಕ್ಕೆ ಜಾತ್ರೆ ಸಮಾರೋಪಗೊಂಡಿದೆ. ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ, ನಾಗಮಂಗಲ, ಪಾಂಡವಪುರ, ತುಮಕೂರು, ಮಂಡ್ಯ, ಮಾಗಡಿ, ಮಧುಗಿರಿ ಸೇರಿ ನೆರೆಯ ರಾಜ್ಯಗಳಿಂದಲೂ ಜಮಾವಣೆಯಾಗುತ್ತಿದ್ದ ತರಹೇವಾರಿ ಜಾನುವಾರು ಕಣ್ಮರೆಯಾಗಿವೆ. ಹಳ್ಳಿಕಾರ್, ಅಮೃತಮಹಲ್ ಸೇರಿ ವಿಶಿಷ್ಟ ತಳಿಯ ನಾಟಿ ದನಗಳ ಸಂಖ್ಯೆ ತೀವ್ರವಾಗಿ ಕ್ಷೀಣಿಸಿದ್ದು ದನಗಳ ಜಾತ್ರೆ ಮಹತ್ವ ಕಳೆದುಕೊಳ್ಳುವಂತಾಗಿದೆ.

ಬದಲಾದ ವಿದ್ಯಮಾನ: ಗ್ರಾಮಾಂತರ ಜಿಲ್ಲೆಗಳ ವ್ಯಾಪ್ತಿಯಲ್ಲಿ ಕೈಗಾರಿಕೆಗಳು ಹೆಚ್ಚುತ್ತಿದ್ದು, ಬೇಸಾಯದ ಭೂಮಿ ವಾಣಿಜ್ಯ ಭೂಮಿಯಾಗಿ ಪರಿವರ್ತನೆಯಾಗುತ್ತಿದೆ, ಇದರಿಂದ ರೈತರು ಬೇಸಾಯದಿಂದ ಹಿಮ್ಮುಖವಾಗುತ್ತಿದ್ದಾರೆ, ಕೃಷಿ ಚಟುವಟಿಕೆಗೆ ಕೂಲಿ ಕಾರ್ಮಿಕರ ಕೊರತೆ ಜತೆಗೆ ಗ್ರಾಮೀಣ ಜನರಲ್ಲೂ ನಿರಾಸಕ್ತಿ ಹೆಚ್ಚಿದೆ, ಅಲ್ಲದೆ ಅತಿಯಾದ ಯಂತ್ರಗಳ ಬಳಕೆಯಿಂದ ರಾಸುಗಳ ಸಾಕಾಣೆ ತೀವ್ರವಾಗಿ ಕ್ಷೀಣಿಸಿದೆ. ಇದರಿಂದ ದನಗಳ ಜಾತ್ರೆಗೆ ಕರತರಲು ದನಗಳೇ ಇಲ್ಲದಂತಾಗಿವೆ.

ಕಾಲ ಬದಲಾದಂತೆ ಜಾತ್ರೆಗಳು ಸೊಗಡನ್ನು ಕಳೆದುಕೊಂಡು ನಾಮಕಾವಸ್ತೆಯಂತಾಗಿವೆ, ಈ ಹಿಂದೆ ಎಕರೆಗಟ್ಟಲೆ ಜಮೀನನ್ನು ಹೊಂದಿದ್ದ ರೈತಾಪಿ ಜನರು ಮನೆ ಮಂದಿಯೆಲ್ಲಾ ಸೇರಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು, ಅದೇ ರೀತಿ ಇದರಲ್ಲಿ ಜಾನುವಾರು ಬಳಕೆ ಮಹತ್ವದ್ದಾಗಿತ್ತು. ಬೆಳಿಗಿನಿಂದ ಸಾಯಂಕಾಲದವರೆಗೆ ತಮ್ಮ ಜಮೀನಿನಲ್ಲಿ ಕೃಷಿ ಚಟುವಟಿಕೆ ನಡೆಸುತ್ತಿದ್ದರು, ದಿನಗಳೆದಂತೆ ಪರಿಸ್ಥಿತಿ ಬದಲಾಯಿತು, ಕೃಷಿ ಜಮೀನುಗಳಲ್ಲಿ ನೀಲಗಿರಿ ಗಿಡಗಳು ಕಾಲಿಟ್ಟವು ವಾಣಿಜ್ಯ ಬೆಳೆಗೆ ಆಸೆ ಬಿದ್ದವರು ದವಸ ಧಾನ್ಯಗಳ ಬೆಳೆಯಿಂದ ವಿಮುಕ್ತವಾಗತೊಡಗಿದರು, ಇದರ ಜತೆಜತೆಗೆ ಯಂತ್ರೋಪಕರಣಗಳು ಕಾಲಿಟ್ಟವು ಪರಿಣಾಮವಾಗಿ ದನಗಳ ಅವಶ್ಯಕತೆ ತಗ್ಗಿತು. ಇದರ ಪರಿಣಾಮವಾಗಿ ದೊಡ್ಡ ಸದ್ದು ಮಾಡುತ್ತಿದ್ದ ದನಗಳ ಜಾತ್ರೆ ಪ್ರಸ್ತುತ ಸದ್ದಿಲ್ಲದಂತೆ ಆಗಿದೆ ಎಂದು ಹಿರಿಯರು ಹೇಳುತ್ತಾರೆ.

ಪ್ರತಿಷ್ಟೆಯೂ ಕಣ್ಮರೆ: ಯಂತ್ರೋಪಕರಣಗಳು ಲಗ್ಗೆ ಇಟ್ಟರೂ ಹಲವು ರೈತಾಪಿ ಜನರು ಪ್ರತಿಷ್ಟೆಗಾಗಿ ಮನೆಗಳಲ್ಲಿ ದನಗಳನ್ನು ಸಾಕುತ್ತಿದ್ದರು. ಆದರೆ ಇದೀಗ ಪ್ರತಿಷ್ಟೆಗಳಿಗೂ ಪೆಟ್ಟು ಬಿದ್ದಿದ್ದು, ಇಂದಿನ ಯುವಜನತೆ ದನಗಳ ಸಾಕುವ ಗೋಜಿಗೆ ಹೋಗುತ್ತಿಲ್ಲ ಎನ್ನುತ್ತಾರೆ ಹಿರಿಯ ರೈತರು.