ವಿಜಯವಾಣಿ ಸುದ್ದಿಜಾಲ ಧಾರವಾಡ
ಸುಮಾರು 130 ವರ್ಷಗಳ ಹಿಂದೆ ಬರೆದು ತಾವೇ ಆಡಿಸಿದ ಸೀತಾರಣ್ಯ ಪ್ರವೇಶದಂತಹ ನಾಟಕದಿಂದ ಕನ್ನಡ ಮತ್ತು ಕನ್ನಡಿಗರ ಅಸ್ಮಿತೆ ಜಾಗೃತಿಗೊಳಿಸಿದ ಶ್ರೇಯಸ್ಸು ಶಾಂತಕವಿ ಸಕ್ಕರಿ ಬಾಳಾಚಾರ್ಯರದ್ದು ಎಂದು ಪ್ರೊ. ದುಷ್ಯಂತ ನಾಡಗೌಡ ಅಭಿಪ್ರಾಯಪಟ್ಟರು.
ನಗರದ ಸೃಜನಾ ರಂಗಮಂದಿರದಲ್ಲಿ ಮೈಸೂರು ರಂಗಯಾನ ತಂಡದಿಂದ ಸೋಮವಾರ ಏರ್ಪಡಿಸಿದ್ದ ಸೀತಾರಣ್ಯ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಾಟಕದ ವಸ್ತು, ಆಶಯ, ರಚನೆಯ ಕಾಲ ಯಾವುದೇ ಇರಲಿ, ನೋಡುಗರ ಮನೋರಂಗಕ್ಕೆ, ಹೃದಯಕ್ಕೆ, ಬುದ್ಧಿಗೆ ರಂಜನೆ ಕೊಡುವಂತಿರಬೇಕು. ಶಾಂತಕವಿಗಳು ನೂರಾರು ವರ್ಷದ ಹಿಂದೆಯೇ ಕನ್ನಡ ರಂಗಭೂಮಿಯನ್ನು ಹುಟ್ಟುಹಾಕಿ, ಮರಾಠಿ ನಾಟಕಗಳಿಗಿಂತ ತಾವು ಶ್ರೇಷ್ಠರು ಎಂಬುದನ್ನು ತೋರಿಸಿದರು ಎಂದರು.
ಡಾ. ಪ್ರಕಾಶ ಗರುಡ ಮಾತನಾಡಿ, ನ. 14 ಆಧುನಿಕ ಕನ್ನಡ ರಂಗದಿನ ಎಂಬುದನ್ನು ನೆನಪಿಸಲು ಪ್ರಸ್ತುತ ಪ್ರಯೋಗವನ್ನು ಧಾರವಾಡದಲ್ಲಿ ಪ್ರದರ್ಶಿಸುತ್ತಿದ್ದು, ಹವ್ಯಾಸಿ ನಾಟಕಕಾರರಿಗೆ, ಕಡಿಮೆ ದರದಲ್ಲಿ ರಂಗಮಂದಿರ ಕಟ್ಟಿಕೊಡಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.
ರಂಗಕಲಾವಿದ ಬಂಡು ಕುಲಕರ್ಣಿ, ಭಾರತೀಯ ತಂತ್ರಜ್ಞಾನ ಸಂಸ್ಥೆ ನಿರ್ದೇಶಕ ಡಾ. ವೆಂಕಪ್ಪಯ್ಯ ದೇಸಾಯಿ ಮಾತನಾಡಿದರು. ಬಾಬುರಾವ್ ಸಕ್ಕರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿ ಕುಮಾರ ಬೆಕ್ಕೇರಿ, ಇತರರು ಇದ್ದರು.