ಜಿಲ್ಲೆ

ನಗರದಲ್ಲಿ ಜಾಗ ಖರೀದಿಸಿದವರಿಗೆ ಸಂಕಷ್ಟ, ಉಡುಪಿಯಲ್ಲಿ ಸಂತ್ರಸ್ತರಿಂದ ಪ್ರತಿಭಟನೆ, ಸರ್ಕಾರಕ್ಕೆ ಮನವಿ

Udupi

ಉಡುಪಿ: ನಗರಸಭೆ ವ್ಯಾಪ್ತಿಯಲ್ಲಿ ಜಾಗ, ಮನೆಗಳನ್ನು ಖರೀದಿಸಿದವರು ಕಾನೂನು ತೊಡಕಿನಿಂದಾಗಿ ಸಂಕಷ್ಟ ಎದುರಿಸುತ್ತಿದ್ದಾರೆ. ಸರ್ಕಾರ ಕೂಡಲೇ ಮಧ್ಯಪ್ರವೇಶಿ ಪರಿಹಾರ ಕಲ್ಪಿಸಬೇಕು ಎಂದು ಸಂತ್ರಸ್ತ ದೇವು ಹನೆಹಳ್ಳಿ ಒತ್ತಾಯಿಸಿದರು.

ಶುಕ್ರವಾರ ಡಿಸಿ ಕಚೇರಿ ಮುಂಭಾಗ ನಗರಸಭೆ ಮತ್ತು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಮನೆ ನಿವೇಶನಗಳನ್ನು ಖರೀದಿಸಿ ಮನೆಯನ್ನು ಕಟ್ಟಲಾಗದೆ, ನಿವೇಶನ ಮಾರಾಟ ಮಾಡಲೂ ಆಗದ ಸಂತ್ರಸ್ತರ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನಗರಸಭೆ ಮತ್ತು ಪ್ರಾಧಿಕಾರದ ವ್ಯಾಪ್ತಿಯ ಗ್ರಾಮಗಳಲ್ಲಿ 1990 ಮತ್ತು 2000 ದಶಕದಲ್ಲಿ ಹಲವರು ಕೃಷಿಭೂಮಿ ಹಿಡುವಳಿ ಖರೀದಿಸಿ, ಭೂಪರಿವರ್ತನೆ ಮಾಡಿ, ವಸತಿ ಬಡಾವಣೆಗಳನ್ನಾಗಿ ಮಾರ್ಪಡಿಸಿದರು. ನಾವು ಆ ಸಮಯದಲ್ಲಿ ಅವರಿಂದ ನೇರವಾಗಿ ಅಥವಾ ಅವರಿಂದ ಖರೀದಿಸಿದವರಿಂದ ಜಾಗ ಪಡೆದವರು. ಅನಂತರವೇ ನಮಗೆ ಸಮಸ್ಯೆ ಅರಿವಾಗಿದೆ ಎಂದರು.

ತಾರಾನಾಥ ಹೆಗಡೆ ಎಂಬುವರು ಮಾತನಾಡಿ, ಭೂಪರಿವರ್ತನೆ ಮಾಡುವಾಗ ವಸತಿ ಬಡಾವಣೆಗಳಲ್ಲಿ ಸಮುದಾಯದ ಉಪಯೋಗಕ್ಕೆ ಎಷ್ಟೆಷ್ಟು ಜಾಗ ಹೇಗೆ ಮೀಸಲಿಡಬೇಕು ಎಂಬ ನಿಯಮಗಳು ಆ ಮೊದಲೇ ಇತ್ತು. ಅವುಗಳನ್ನು ರಾಜ್ಯ ಸರ್ಕಾರ 1984ರಲ್ಲಿ ಇಡೀ ರಾಜ್ಯಕ್ಕೆ ಅನ್ವಯವಾಗುವಂತೆ ಅಧಿಸೂಚನೆ ಹೊರಡಿಸಿದರೂ, ಉಡುಪಿಯಲ್ಲಿ ಅವುಗಳನ್ನು ಪಾಲಿಸದೆ ಬಡಾವಣೆಗಳನ್ನು ರೂಪಿಸಿ, ನಿವೇಶನಗಳನ್ನು ಮಾಡಿ ಮಾರಾಟ ಮಾಡಲು ಅನುವು ಮಾಡಿಕೊಡಲಾಯಿತು. ಯಾವ ತೊಡಕೂ ಇಲ್ಲದೆ ನಿವೇಶನಗಳು ನಮ್ಮ ಹೆಸರಿಗೆ ನೋಂದಣಿಯಾದ ಕಾರಣ ನಮಗೆ ಸಮಸ್ಯೆ ಇರುವುದು ಅರಿವಿಗೆ ಬರಲಿಲ್ಲ ಮತ್ತು ಬಡಾವಣೆಗಳು ನಿಯಮಬದ್ಧವಾಗಿವೆ ಎಂದು ತಿಳಿದುಕೊಂಡಿದ್ದೆವು. ಆದರೆ ಯಾವಾಗ ಮನೆಕಟ್ಟಲು ಯೋಜನೆ ರೂಪಿಸಿದೆವೋ, ಆಗ ಆ ಎಲ್ಲ ನಿಯಮಗಳು ನಮಗೆ ಅನ್ವಯವಾಗತೊಡಗಿದವು ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಯಾರ ಲಾಭಕ್ಕಾಗಿ ಕಂದಾಯ ಇಲಾಖೆ ಇಂತಹ ಕೆಲಸ ಮಾಡಿದೆ ಎಂಬುದು ಅರ್ಥವಾಗುತ್ತಿಲ್ಲ. ನಿಮ್ಮಿಂದ ಅಕ್ರಮವಾಗಿದೆ, ದಂಡಕಟ್ಟಿ ನಿಯಮಾನುಸಾರ ಸಮುದಾಯದ ಉಪಯೋಗಕ್ಕೆ ಜಾಗ ಒಪ್ಪಿಸಿ ಸಕ್ರಮ ಮಾಡಿಕೊಳ್ಳಿ ಎಂದು ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರವು ತಾಕೀತುಮಾಡುತ್ತಿದೆ. ನಮ್ಮಿಂದ ಅಕ್ರಮ- ಸಕ್ರಮಕ್ಕೆ ಅರ್ಜಿ ಸ್ವೀಕರಿಸಿದ್ದು, ನಾವು ಅಕ್ರಮ ನಡೆಸಿಲ್ಲವಾದರೂ ‘ಸಮಸ್ಯೆ ಬೇಗ ಮುಗಿಯಲಿ’ ಎಂಬ ದೃಷ್ಟಿಯಿಂದ ನಮ್ಮಲ್ಲಿ ಹಲವರು ಅಕ್ರಮ- ಸಕ್ರಮಕ್ಕೆ ಅರ್ಜಿ ಸಲ್ಲಿಸಿದ್ದೇವೆ. ಆದರೂ ಕಳೆದ 15-20 ವರ್ಷಗಳಿಂದ ಒಂದಲ್ಲ ಒಂದು ಕಾನೂನಿನ ತೊಡಕಿನಿಂದಾಗಿ ನಮಗೆ ನ್ಯಾಯ ಮರೀಚಿಕೆಯಾಗಿದೆ ಎಂದರು.

ಸಂತ್ರಸ್ತರು ಬಳಿಕ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಅವರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಡಾ.ಕಮಲೇಶ್, ವಾಸುದೇವ ಗಡಿಯಾರ್, ರಾಬರ್ಟ್ ಡಿ’ಸೋಜಾ, ಸುಂದರ್ ಶೆಟ್ಟಿ, ಸಂತೋಷ್ ಶೆಟ್ಟಿ, ಮೆಲ್ವಿನ್ ರೇಗೋ ಉಪಸ್ಥಿತರಿದ್ದರು.