ಗುತ್ತಲ: ಹಾವೇರಿ ಹಾಗೂ ಗುತ್ತಲ ಪಟ್ಟಣಕ್ಕೆ ನಿರಂತರ ಕುಡಿಯುವ ನೀರು ಪೂರೈಕೆ ಯೋಜನೆ ಜಾರಿಗೆ ಬಾಂದಾರ ನಿರ್ಮಾಣಕ್ಕೆ ಸ್ಥಳವನ್ನು ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ ಇತ್ತೀಚೆಗೆ ಪರಿಶೀಲಿಸಿದರು.
ಯೋಜನೆಗೆ ಈಗಾಗಲೇ 50 ಕೋಟಿ ರೂ. ಬಿಡುಗಡೆಯಾಗಿದ್ದು, ಬಾಕಿ 100 ಕೋಟಿ ರೂ. ಬಿಡುಗಡೆ ಆಗಬೇಕಿದೆ. ನದಿಯಲ್ಲಿ ನಿರಂತರ ನೀರು ಸಂಗ್ರಹಿಸುವ ನಿಟ್ಟಿನಲ್ಲಿ ಬಾಂದಾರ ಸಹ ನಿರ್ಮಿಸಬೇಕಿದೆ. ಇದರಿಂದ ಕೇವಲ ಹಾವೇರಿ-ಗುತ್ತಲ ಪಟ್ಟಣಕ್ಕಲ್ಲದೆ ಬ್ಯಾಡಗಿ- ರಾಣೆಬೆನ್ನೂರ ತಾಲೂಕಿನ ಬಹು ಗ್ರಾಮಗಳ ನಿರಂತರ ನೀರು ಪೂರೈಕೆ ಯೋಜನೆಗಳಿಗೆ (ಜೆಜೆಎಂ) ನೀರು ದೊರೆಯುವುದು. ಅಲ್ಲದೆ ರೈತರಿಗೂ ಸಹಾಯವಾಗುವುದು ಎಂದು ರುದ್ರಪ್ಪ ಲಮಾಣಿ ಹೇಳಿದರು.
ಸೇತುವೆ ಶಿಥಿಲಗೊಂಡಿದ್ದು, ದುರಸ್ತಿಗೆ ಸಂಬಂಧಿಸಿದಂತೆ ಲೋಕೋಪಯೋಗಿ ಸಚಿವರು, ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಮುಖ್ಯಮಂತ್ರಿ ಗಮನಕ್ಕೆ ತರಲಾಗುವುದು ಎಂದರು.
ಜಿಲ್ಲಾ ಯೋಜನಾ ನಿರ್ದೇಶಕ ಚಂದ್ರಪ್ಪ ಸಿ., ಹಾವೇರಿ ನಗರಸಭೆ ಆಯುಕ್ತ ಕಾಂತರಾಜ, ನಗರ ನೀರು ಸರಬರಾಜು ಹಾಗೂ ಒಳಚಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಎಸ್.ಎಸ್. ಗಂಗೋಟಿ, ತುಂಗಾ ಮೇಲ್ದಂಡೆಯ ಕಾರ್ಯಪಾಲಕ ಇಂಜಿನಿಯರ್ ಬಿ.ಬಸವರಾಜ ಇತರರಿದ್ದರು.