ಜಿಲ್ಲೆ

5 ಪಾಲಿಕೆಗಳ ಆಯುಕ್ತರುಗಳಿಂದ ಸ್ಥಳ ಪರಿಶೀಲನೆ

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ 5 ಹೊಸ ಪಾಲಿಕೆಗಳ ಆಯುಕ್ತರು ನಗರ ಅಭಿವೃದ್ಧಿ ಮೊದಲ ಆದ್ಯತೆ ನೀಡುವಂತೆ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ (ಎಸಿಎಸ್) ಸೂಚಿಸಿದ ಮರುದಿನವೇ, ಐದೂ ಕಾರ್ಪೊರೇಷನ್‌ಗಳ ಆಯುಕ್ತರು ಶುಕ್ರವಾರ ತಮ್ಮ ಪಾಲಿಕೆಗಳಲ್ಲಿ ವಿವಿಧೆಡೆ ಸ್ಥಳಪರಿಶೀಲನೆ ನಡೆಸಿದರು.

ರಜಾದಿನವಾದರೂ ಬೆಳಗ್ಗೆಯೇ ಆಯಾ ಆಯುಕ್ತರು ತಮ್ಮ ಪಾಲಿಕೆ ವ್ಯಾಪ್ತಿಯಲ್ಲಿ ಅಧಿಕಾರಿಗಳ ತಮಡದೊಂದಿಗೆ ತೆರಳಿ ನಾಗರಿಕ ಸೌಲಭ್ಯಗಳನ್ನು ಪರಿವೀಕ್ಷಣೆ ಮಾಡಿದರು. ರಸ್ತೆಗುಂಡಿ, ಘನತ್ಯಾಜ್ಯ ವಿಲೇವಾರಿ, ರಸ್ತೆ ಅಗಲಿಕರಣ ಕಾಮಗಾರಿ, ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಬಗ್ಗೆ ತಪಾಸಣೆ ನಡೆಸಿದರು. ಇದೇ ವೇಳೆ ಅಧಿಕಾರಿಗಳಿಗೆ ಕೆಲ ಸೂಚನೆ ನೀಡಿ ನಾಗರಿಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವಂತೆ ಸೂಚನೆ ನೀಡಿದರು.

ಸ್ವಚ್ಛತೆ ಕಾಪಾಡದಿದ್ದಲ್ಲಿ ದಂಡ ವಿಧಿಸಿ:

ಉತ್ತರ ಪಾಲಿಕೆಯ ಆಯುಕ್ತ ಪಿ.ಸುನೀಲ್ ಕುಮಾರ್ ಅವರು ಬೆಳಿಗ್ಗೆ 6 ಗಂಟೆಗೆ ಯಲಹಂಕ ಉಪನಗರ ವಾರ್ಡ್‌ನಲ್ಲಿ ಆಟೋ ಟಿಪ್ಪರ್ ಮಸ್ಟರಿಂಗ್ ಕೇಂದ್ರ ಹಾಗೂ ತಿಂಡ್ಲು ವಾರ್ಡ್‌ನಲ್ಲಿ ಪೌರಕಾರ್ಮಿಕರ ಮಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಿ ತ್ಯಾಜ್ಯ ವಿಲೇ ಮಾಡುವುದನ್ನು ಪರಿಶೀಲಿಸಿದರು.

ಪೌರಕಾರ್ಮಿಕರು ರಸ್ತೆ ಬದಿ ಮಾತ್ರ ಕಸ ಗುಡಿಸುವುದಲ್ಲದೆ ಚರಂಡಿಗಳ ಶೋಲ್ಡರ್ ಡ್ರೈನ್ ಹಾಗೂ ಪಾದಚಾರಿ ಮಾರ್ಗಗಳಲ್ಲೂ ಕಸ ಹೆಕ್ಕಿ ಸ್ವಚ್ಛತೆ ಕಾಪಾಡಬೇಕು. ಬಲ್ಕ್ ಉತ್ಪಾದಕರಿಂದ ಸರಿಯಾಗಿ ತ್ಯಾಜ್ಯ ಸಂಗ್ರಹಿಸದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಅಂಗಡಿಗಳ ಮುಂಭಾಗ ಸ್ವಚ್ಛತೆ ಕಾಪಾಡದಿದ್ದಲ್ಲಿ ದಂಡ ವಿಧಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪಾದಚಾರಿ ಮಾರ್ಗ ದುರಸ್ತಿಗೊಳಿಸಿ:

ದಕ್ಷಿಣ ಪಾಲಿಕೆ ಆಯುಕ್ತ ಕೆ.ಎನ್.ರಮೇಶ್ ಅವರು ಜಯನಗರ ವಾರ್ಡ್‌ನಲ್ಲಿ ಮಸ್ಟರಿಂಗ್ ಕೇಂದ್ರ ಹಾಗೂ ಕಸ ಬಿಸಾಡುವ ಬ್ಲಾಕ್ ಸ್ಪಾಟ್‌ಗಳ ಪರಿಶೀಲಿಸಿದರು. ಹೆಚ್ಚು ಕಸ ಇರುವೆಡೆ ಸಾಮೂಹಿಕ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಬೇಕು. ಪಾದಚಾರಿ ಮಾರ್ಗಗಳನ್ನು ಸುಸ್ಥಿತಿಯಲ್ಲಿಡಲು ಅವುಗಳ ದುರಸ್ತಿ ಕಾರ್ಯವನ್ನು ನಿರಂತರವಾಗಿ ನಿಗಾ ವಹಿಸಬೇಕು. ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ಬಳಿ ಸ್ವಚ್ಛತೆ ಕಾಪಾಡಲು ಅಧಿಕಾರಿಗಳಿಗೆ ನಿರ್ದೇಶಿಸಿದರು.

ಓಎಫ್​​ಸಿ ಕೇಬಲ್‌ಗಳ ತೆರವುಗೊಳಿಸಿ

ಪಶ್ಚಿಮ ನಗರ ಪಾಲಿಕೆಯ ಆಯುಕ್ತ ಡಾ. ಕೆ.ವಿ.ರಾಜೇಂದ್ರ ಅವರು ಬಸವೇಶ್ವರನಗರ ಸುತ್ತಮುತ್ತಲಿನ ಸ್ಥಳಗಳಲ್ಲಿ ಭೇಟಿ ನೀಡಿ ಪರಿಶೀಲಿಸಿದರು. ರಾಜಾಜಿನಗರ ವಾರ್ಡ್‌ನಲ್ಲಿ ಮಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಿ ಸ್ವಚ್ಛತೆ ಪರಿಶೀಲಿಸಿದರು. ಇದೇ ವೇಳೆ ಸಮೀಪದ ನೇತಾಜಿ ಸುಭಾಷ್ ಚಂದ್ರ ಉದ್ಯಾನ, ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡಿ ಆಹಾರ ಗುಣಮಟ್ಟವನ್ನು ಪರೀಕ್ಷಿಸಿದರು. ರಸ್ತೆ ಬದಿ, ಮರಗಳಲ್ಲಿ ನೇತಾಡುವ ಓಎಫ್‌ಸಿ ಕೇಬಲ್‌ಗಳಿಂದ ಪಾದಚಾರಿಗಳಿಗೆ ಸಮಸ್ಯೆ ಆಗುತ್ತಿದ್ದು ಅಂತಹವುಗಳನ್ನು ತೆರವುಗೊಳಿಸಬೇಕು. ರಾಜಕಾಲುವೆ ಹಾಗೂ ಚರಂಡಿಗಳಲ್ಲಿ ನಿರಂತರವಾಗಿ ಹೂಳೆತ್ತಬೇಕು ಎಂದು ಸೂಚಿಸಿದರು.

ವಿವಿಧ ಕಾಮಗಾರಿ ಚುರುಕುಗೊಳಿಸಿ:

ಪೂರ್ವ ಪಾಲಿಕೆ ಆಯುಕ್ತ ಡಿ.ಎಸ್.ರಮೇಶ್ ಅವರು ಇಬ್ಬಲೂರು ಜಂಕ್ಷನ್ ಬಳಿ ರಾಜಕಾಲುವೆ ಸಮಸ್ಯೆ ಕುರಿತು ಪರಿಶೀಲಿಸಿ ಅಲ್ಲಿನ ಸ್ಥಳವು ಜಲಾವೃತ ಆಗದಂತೆ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಸೂಚಿಸಿದರು. ದೊಡ್ಡಕನ್ನಹಳ್ಳಿ ರಸ್ತೆ ಅಗಲೀಕರಣ ಕಾಮಗಾರಿ, ಸರ್ಜಾಪುರದಿಂದ ವರ್ತೂರು ರಾಜ್ಯ ಹೆದ್ದಾರಿಗೆ ಸಂಪರ್ಕಿಸುವ ರಸ್ತೆಯನ್ನು 45 ಮೀ. ಗೆ ವಿಸ್ತರಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಇದೇ ವೇಳೆ ಪಣತ್ತೂರು ರೈಲ್ವೆ ಕೆಳ ಸೇತುವೆ ಬಳಿ ಚರಂಡಿ ಕಾಮಗಾರಿ ಪರಿಶೀಲಿಸಿ ತ್ವರಿತವಾಗಿ ಪೂರ್ಣಗೊಳಿಸಬೇಕು. ಬಳಗೆರೆ ಬಳಿ ರಾಜಕಾಲುವೆಗೆ ಆರ್‌ಸಿಸಿ ಗೋಡೆ ನಿರ್ಮಿಸುವ ಕೆಲಸವನ್ನು ಚುರುಕುಗೊಳಿಸಬೇಕು. ಮಳೆನೀರಿನಿಂದ ಸಮಸ್ಯೆ ಎದುರಿಸುತ್ತಿರುವ ಸಾಯಿ ಲೇಔಟ್‌ಗೆ ಮತ್ತೆ ನೀರು ನುಗ್ಗದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಇಂಜಿನಿಯರ್‌ಗಳಿಗೆ ನಿರ್ದೇಶಿಸಿದರು.

ಅಧಿಕಾರಿಗಳ ಸಭೆ ನಡೆಸಿದ ಕೇಂದ್ರ ಪಾಲಿಕೆ ಆಯುಕ್ತ:

ಕೇಂದ್ರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್ ಅವರು ತಮ್ಮ ಕಚೇರಿಯಲ್ಲಿ ಅಭಿಯಂತರರು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚಾಲ್ತಿಯಲ್ಲಿರುವ ವಿವಿಧ ಕಾಮಗಾರಿಗಳನ್ನು ಚುರುಕುಗೊಳಿಸಿ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು. ತೆರಿಗೆ ಸಂಗ್ರಹ, ರಸ್ತೆ ಗುಂಡಿಗಳನ್ನು ಮುಚ್ಚುವುದು, ವಿದ್ಯುತ್ ದೀಪಗಳ ಸಮರ್ಪಕ ನಿರ್ವಹಣೆ, ಸ್ವಚ್ಛತಾ ಕಾರ್ಯ ಹಾಗೂ ಇತರ ಕೆಲಸಗಳನ್ನು ಜವಾಬ್ದಾರಿಯುತವಾಗಿ ನಿರ್ವಹಿಸುವಂತೆ ಮಾರ್ಗದರ್ಶನ ಮಾಡಿದರು.