ಕೆ.ಆರ್.ಸಾಗರ: ಹುಲಿಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸೇರಿದ ಸರ್ವೇ ನಂ. 101/16ರ 1 ಎಕರೆ ಜಾಗ ಖಾಸಗಿ ವ್ಯಕ್ತಿಗೆ ಖಾತೆ ಬದಲಾವಣೆ ಪ್ರಕರಣ ಕುರಿತು ಜಿಲ್ಲಾಧಿಕಾರಿ ಆದೇಶದಂತೆ ಇತ್ತೀಚೆಗೆೆ ಶ್ರೀರಂಗಪಟ್ಟಣ ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ನೇತೃತ್ವದಲ್ಲಿನ ತಂಡ ಸ್ಥಳ ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಿತು.
1956ರಲ್ಲಿ ಹುಲಿಕೆರೆ ಗ್ರಾಮದ ಪಟೇಲ್ ದಾಸೇಗೌಡ ಅವರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 1 ಎಕರೆ ಜಾಗವನ್ನು ಸರ್ವೇ ನಂ.101/16ರಲ್ಲಿ ನೀಡಿ ಖಾತೆ ಮಾಡಿಸಿದ್ದರು. 2022ರ ತನಕ ಈ ಜಾಗ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೆಸರಿನಲ್ಲಿ ಇತ್ತು. 2023ರಲ್ಲಿ ಏಕಾಏಕಿ ಖಾಸಗಿ ವ್ಯಕ್ತಿ ಹೆಸರಿಗೆ ಜಾಗ ಖಾತೆಯಾಗಿದೆ. ಈ ಕುರಿತು ಹುಲಿಕೆರೆ ಗ್ರಾಮಸ್ಥರು ಜಿಲ್ಲಾಧಿಕಾರಿಗೆ ದಾಖಲೆ ಸಮೇತ ದೂರು ನೀಡಿದ್ದರು. ದಾಖಲೆ ಪರಿಶೀಲಿಸಿದ ಜಿಲ್ಲಾಧಿಕಾರಿ ತನಿಖೆ ನಡೆಸಿ, ಸ್ಥಳ ಪರಿಶೀಲಿಸಿ ವರದಿ ನೀಡಲು ತಹಸೀಲ್ದಾರ್‌ಗೆ ಆದೇಶಿಸಿದ್ದರು.
ಈ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣ ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ನೇತೃತ್ವದಲ್ಲಿ ಭೂಪನ ಇಲಾಖೆಯ ಎಡಿಎಲ್‌ಆರ್ ಮೇಘಾ, ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕ ಪ್ರಸನ್ನ ಒಳಗೊಂಡ ತಂಡ ಇತ್ತೀಚೆಗೆ ಸ್ಥಳ ಪರಿಶೀಲನೆ ನಡೆಸಿ, ಸ್ಥಳಿಯರಿಂದ ಮಾಹಿತಿ ಸಂಗ್ರಹಿಸಿತು.
ಎಡಿಎಲ್‌ಆರ್ ಮೇಘಾ ಮಾತನಾಡಿ, ಈಗಲೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೆಸರಲ್ಲಿ ಒಂದು ಎಕರೆ ಜಾಗದ ಖಾತೆ ಇದೆ. ಆತಂಕ ಬೇಡ ಜಿಲ್ಲಾಧಿಕಾರಿ ಆದೇಶದಂತೆ ತಹಸೀಲ್ದಾರ್ ಮಾರ್ಗದರ್ಶನದಲ್ಲಿ ಸರ್ವೇ ನಡೆಸಿ ವರದಿ ನೀಡಲಾಗುತ್ತದೆ ಎಂದರು.
ಶ್ರೀರಂಗಪಟ್ಟಣ ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ಮಾತನಾಡಿ, ಶಾಲೆಗೆ ಸೇರಿದ ಜಾಗ ಸರ್ಕಾರದ ಆಸ್ತಿಯಾಗಿದೆ. ಅತಿಕ್ರಮಣ ಹಾಗೂ ವರ್ಗಾವಣೆ ಕಾನೂನುಬಾಹಿರವಾಗಿ ನಡೆಸಿದ್ದರೆ ಸರ್ವೇ ನಂತರ ತಿಳಿಯಲಿದೆ. ಈಗಿರುವ ಜಾಗದಲ್ಲಿ ಯಾರು ಅತಿಕ್ರಮ ಮಾಡದಂತೆ ಸೂಚಿಲಾಗುತ್ತದೆ ಎಂದರು.
ಹುಲಿಕರೆ ಗ್ರಾ.ಪಂ ಮಾಜಿ ಉಪಾಧ್ಯಕ್ಷ ಚೆಲವರಾಜು, ಮುಖಂಡ ಶ್ರೀನಿವಾಸ ಅಧಿಕಾರಿಗಳಿಗೆ ದಾಖಲೆ ಸಮೇತ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ರಾಜಸ್ಥವ ನೀರಿಕ್ಷಕ ಪ್ರಸನ್ನ, ಗ್ರಾಮ ಲೆಕ್ಕಾಧಿಕಾರಿ ರಘು ಸೇರಿದಂತೆ ಹುಲಿಕರೆ ಗ್ರಾಮಸ್ಥರು, ಮುಖಂಡರು ಇದ್ದರು.