ಕಲಬುರಗಿ: ಆಳಂದ ಕ್ಷೇತ್ರದಲ್ಲಿ ಮತ ಚೋರಿ ಪ್ರಕರಣದ ಎಸ್ಐಟಿ ತನಿಖೆಯೂ ವೇಗ ಪಡೆದಿದ್ದು, ಆಳಂದ ಕ್ಷೇತ್ರದ ಮಾಜಿ ಶಾಸಕ, ಬಿಜೆಪಿ ಮುಖಂಡ ಸುಭಾಷ ಗುತ್ತೇದಾರ್ ಮನೆ ಮೇಲೆ ಎಸ್ಐಟಿ ದಾಳಿ ನಡೆಸಿದೆ.
ನಗರದಲ್ಲಿ ಮೂರು ತಂಡಗಳಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದು, ನಗರದ ಸುಮಾರು 150 ಸಿಬ್ಬಂದಿಯೊಂದಿಗೆ ಸ್ಥಳಿಯ ಪೊಲೀಸ್ ಅಧಿಕಾರಿಗಳ ಸಹಕಾರದಲ್ಲಿ ಎಸ್ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ನಗರದ ಗುಬ್ಬಿ ಕಾಲನಿಯಲ್ಲಿರುವ ಮಾಜಿ ಶಾಸಕ ಸುಭಾಷ ಗುತ್ತೇದಾರ್, ಖೂಬಾ ಬಡಾವಣೆಯ ವಿವೇಕಾನಂದ ನಗರದಲ್ಲಿನ ಚಾರ್ಟೆಡ್ ಅಕೌಂಟೇಂಟ್ ಮನೆ ಮೇಲೆ ದಾಳಿ ನಡೆಸಲಾಗಿದೆ. ಗುತ್ತೇದಾರ್ ಖಾಸಗಿ ಅಂಗಡಿಗಳ ಮೇಲೂ ದಾಳಿ ನಡೆಸಿ, ಪರಿಶೀಲನೆ ನಡೆಸಲಾಗುತ್ತಿದೆ. ಎಸ್ಐಟಿ ಎಸ್ಪಿ ಶುಭನ್ವಿತಾ ನೇತೃತ್ವದಲ್ಲಿ ಅಧಿಕಾರಿಗಳು ಎಲ್ಲೆಡೆ ತನಿಖೆ ಚುರುಕುಗೊಳಿಸಿದ್ದು, ಹೊಸ ತಿರುವು ಪಡೆದುಕೊಳ್ಳುವ ಸಾಧ್ಯತೆ ಇದೆ.
2023ರ ವಿಧಾನಸಭೆ ಚುನಾವಣೆ ವೇಳೆ ಆಳಂದ ವಿಧಾನಸಭೆ ಕ್ಷೇತ್ರದಲ್ಲಿ ಮತಗಳ್ಳತನವಾಗಿದೆ ಎಂದು ಶಾಸಕ ಬಿ.ಆರ್.ಪಾಟೀಲ್ ಚುನಾವಣೆ ಆಯೋಗಕ್ಕೆ ದೂರು ನೀಡಿದ್ದರು. ಆ ಪ್ರಕರಣವನ್ನು ರಾಜ್ಯ ಸರ್ಕಾರ ಇತ್ತೀಚೆಗೆ ಎಸ್ಐಟಿ ತನಿಖೆಗೆ ವಹಿಸಿತ್ತು. ಕಳೆದ ಮೂರು ದಿನಗಳಿಂದ ನಗರದಲ್ಲಿ ಎಸ್ಐಟಿ ತಂಡ ಕಾರ್ಯಾಚರಣೆ ನಡೆಸುತ್ತಿದ್ದು, ಅಕ್ರಮ್ ಎಂಬಾತನ ಬಳಿ ಮಹತ್ವದ ದಾಖಲೆ ವಶಕ್ಕೆ ಪಡೆದಿತ್ತು. ಇದೀಗ ಮಾಜಿ ಶಾಸಕ ಸುಭಾಷ ಗುತ್ತೇದಾರ್ ಮನೆ ಮೇಲೆ ದಾಳಿ ನಡೆಸಿರುವುದು ಹೊಸ ರಾಜಕೀಯ ತಿರುವಿಗೆ ಕಾರಣವಾಗಿದೆ.