ಜಿಲ್ಲೆ

ಮುಂದುವರಿದ ಎಸ್‌ಐಟಿ ತನಿಖೆ: ಶೋಧ ಕಾರ್ಯಕ್ಕೆ ಬ್ರೇಕ್: ಪರೀಕ್ಷಾ ವರದಿಗೆ ನಿರೀಕ್ಷೆ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತು ಹಾಕಲಾಗಿದೆ ಎನ್ನುವ ಪ್ರಕರಣದಲ್ಲಿ ಸದ್ಯಕ್ಕೆ ಶೋಧ ಕಾರ್ಯ ನಿಲ್ಲಿಸಿರುವ ಎಸ್‌ಐಟಿ ಇನ್ನಿತರ ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದೆ.

ದೂರುದಾರ ಮಾಡಿದ ಆರೋಪಗಳು, ಅಗೆತ ಕಾರ್ಯದಲ್ಲಿ ಅರೆಬರೆ ಸತ್ಯ ಮುಂದಿಟ್ಟುಕೊಂಡು ಇಡೀ ಪ್ರಕರಣ ಭೇದಿಸಲು ಎಸ್‌ಐಟಿ ಕಳೆದ 3 ದಿನಗಳಿಂದ ಹಲವಾರು ತನಿಖೆ ನಡೆಸುತ್ತಿದೆ. ಅಗೆತ ಸ್ಥಳದಲ್ಲಿ ಯಾವುದೇ ಅಸ್ಥಿಪಂಜರ ಸಿಗದಿರುವ ಕಾರಣ ಅಲ್ಲಿಂದ ಸಂಗ್ರಹಿಸಿದ ಮಣ್ಣನ್ನು ಮುಂದಿಟ್ಟುಕೊಂಡು ತನಿಖೆ ಮಾಡಬೇಕಾದ ಅನಿವಾರ್ಯತೆ ಉಂಟಾಗಿದೆ.

ಸ್ಥಳ ಸಂಖ್ಯೆ 6ರಲ್ಲಿ ಸಿಕ್ಕಿದ ಎಲುಬುಗಳು, ಬಂಗ್ಲೆಗುಡ್ಡೆ ಕಾಡಿನಲ್ಲಿ ಸಿಕ್ಕಿದ ಅಸ್ಥಿಪಂಜರ, ದೂರುದಾರ ತಾನೇ ಅಗೆದು ಪೊಲೀಸರಿಗೆ ಒಪ್ಪಿಸಿದ ತಲೆಬುರುಡೆಯನ್ನು ಈಗಾಗಲೇ ಎ್ಎಸ್‌ಎಲ್ ತನಿಖೆಗೆ ಕಳಿಸಲಾಗಿದೆ. ಉಳಿದಂತೆ ಅಸ್ಥಿಪಂಜರ ಸಿಗದಿರುವ ಗುಂಡಿಗಳ ಮಣ್ಣನ್ನೂ ಎ್ಎಸ್‌ಎಲ್ ತನಿಖೆಗೆ ಕಳುಹಿಸಲಾಗಿದ್ದು, ಪರೀಕ್ಷಾ ವರದಿಗೆ ಎಸ್‌ಐಟಿ ಕಾಯುತ್ತಿದೆ.

ಎಸ್‌ಐಟಿ ಈಗ ದೂರುದಾರನನ್ನು ತೀವ್ರ ವಿಚಾರಣೆಗೆ ಒಳಪಡಿಸುವ ಮೂಲಕ ಆತನ ದೂರಿನಲ್ಲಿರುವ ಸಾಚಾತನವನ್ನು ಒರೆಗೆ ಹಚ್ಚಲು ಶ್ರಮಿಸುತ್ತಿದೆ.

ಸಾಕ್ಷಿಗಳನ್ನು ತಾಳೆ ಹಾಕುವ ಕಾರ್ಯ

ಧರ್ಮಸ್ಥಳ ಗ್ರಾಮ ಪಂಚಾಯಿತಿಯಲ್ಲಿ ಕೆಲಸ ಮಾಡಿದ್ದ ಸಿಬ್ಬಂದಿ, ಅಂದಿನ ಜನಪ್ರತಿನಿಧಿಗಳನ್ನು ಕರೆಸಿಕೊಂಡು ಹೇಳಿಕೆ ದಾಖಲು ಮಾಡಿಕೊಳ್ಳುತ್ತಿರುವ ಎಸ್‌ಐಟಿ, ಇದರೊಂದಿಗೆ ಅನಾಮಿಕ ದೂರುದಾರ ನೀಡಿದ ಮಾಹಿತಿ ತಾಳೆ ಹಾಕುತ್ತಿದೆ. ದೂರುದಾರ ತಾನು ಧರ್ಮಸ್ಥಳ ಗ್ರಾಮದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ನೂರಾರು ಶವಗಳನ್ನು ಬೇರೆಯವರ ಆದೇಶದಂತೆ ಹೂತು ಹಾಕಿದ್ದೇನೆ ಎಂದು ಹೇಳಿದ್ದಲ್ಲದೆ, ದನ ಮಾಡಿದ ಸ್ಥಳಗಳನ್ನು ತೋರಿಸಿದ್ದ. ಅಂಥ 17 ಸ್ಥಳಗಳಲ್ಲಿ ಅಗೆತ ಮಾಡಿದರೂ ಹೇಳಿಕೊಳ್ಳುವಂತಹ ಮಹತ್ವದ ಅಸ್ಥಿಪಂಜರಗಳು ಸಿಕ್ಕಿರಲಿಲ್ಲ. ಇದರಿಂದ ದೂರುದಾರನ ಮೇಲೆಯೇ ಅನುಮಾನಗಳು ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಮುಂದಾಗಿರುವ ಎಸ್‌ಐಟಿ ಸಾಕ್ಷಿಗಳನ್ನು ತಾಳೆ ಹಾಕುವ ಕಾರ್ಯದಲ್ಲಿ ತೊಡಗಿದೆ ಎನ್ನಲಾಗಿದೆ.