ಚನ್ನಪಟ್ಟಣದ ಪೊಲೀಸ್ ಭವನದಲ್ಲಿ ಉಪವಾಸ ಸತ್ಯಾಗ್ರಹ ನಿರತ ರೈತರನ್ನು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಭೇಟಿ ಸಮಾಲೋಚನೆ ನಡೆಸಿದರು. ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಮಾಜಿ ಶಾಸಕರಾದ ಬಂಡೆಪ್ಪ ಕಾಶಂಪೂರ್, ಎ.ಮಂಜುನಾಥ್ ಇತರರಿದ್ದರು.  
ಜಿಲ್ಲೆ

ಕ್ರಮ ಕೈಗೊಳ್ಳದಿದ್ದರೆ ಹೆದ್ದಾರಿಯಲ್ಲಿ ಧರಣಿ!

ಚನ್ನಪಟ್ಟಣ: ಬಿಡದಿ ಟೌನ್‌ಶಿಪ್ ವಿರೋಧಿಸಿ ಉಪವಾಸ ನಿರತ ರೈತರು, ಮಹಿಳೆಯರ ಮೇಲೆ ಪೊಲೀಸರು ಶುಕ್ರವಾರ ಅಮಾನವೀಯವಾಗಿ ನಡೆದುಕೊಂಡಿದ್ದು, ತಪ್ಪಿತಸ್ಥರ ಮೇಲೆ ಕ್ರಮ ತೆಗೆದುಕೊಳ್ಳದಿದ್ದರೆ ಸೋಮವಾರ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ 10 ಸಾವಿರ ಜನರನ್ನು ಸೇರಿಸಿ ಧರಣಿ ನಡೆಸುವುದಾಗಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಎಚ್ಚರಿಸಿದ್ದಾರೆ.

ಬಿಡದಿ ಟೌನ್‌ಶಿಪ್ ವಿರೋಧಿ ಹೋರಾಟ ತೀವ್ರಗೊಂಡಿರುವ ಬೆನ್ನಲ್ಲೇ, ಚನ್ನಪಟ್ಟಣದ ಪೊಲೀಸ್ ಭವನದಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ರೈತರನ್ನು ಶನಿವಾರ ಭೇಟಿ ಮಾಡಿ ಅವರು ಮಾತನಾಡಿದರು. ಸೋಮವಾರ ದೆಹಲಿಗೆ ಹೋಗದಿದ್ದರೂ ಪರವಾಗಿಲ್ಲ. ನನಗೆ ದೆಹಲಿಗಿಂತ ರೈತರ ಹಿತ ಮುಖ್ಯ. ನಾನೇ ಹೆದ್ದಾರಿಯಲ್ಲಿ ಧರಣಿ ಕೂರುತ್ತೇನೆ. ಎಷ್ಟು ಜನ ಪೊಲೀಸರನ್ನು ಕರೆಸುತ್ತೀರೋ ಕರೆಸಿ. ಇಲ್ಲಿಯವರೆಗೆ ರೈತರ ಹೋರಾಟದಲ್ಲಿ ರಾಜಕೀಯ ಬೆರೆಸಲು ಹೋಗಿಲ್ಲ. ಹೆಣ್ಣುಮಕ್ಕಳು ಕಣ್ಣೀರು ಹಾಕಿದರೆ ಈ ಸರ್ಕಾರಕ್ಕೆ ಒಳ್ಳೆಯದಾಗುತ್ತಾ? ಎಂದು ಎಚ್‌ಡಿಕೆ ತರಾಟೆ ತೆಗೆದುಕೊಂಡರು.

ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹಾಗೂ ಮಾಜಿ ಶಾಸಕರಾದ ಬಂಡೆಪ್ಪ ಕಾಶಂಪೂರ್ ಮತ್ತು ಎ.ಮಂಜುನಾಥ್ ಜತೆಗೆ ಸಚಿವರು ಸ್ಥಳಕ್ಕೆ ಬರುತ್ತಿದ್ದಂತೆ ರೈತ ಮಹಿಳೆಯರು ತಮ್ಮ ಅಹವಾಲುಗಳನ್ನು ಹೇಳಿಕೊಂಡು ಕುಮಾರಸ್ವಾಮಿ ಮುಂದೆ ಕಣ್ಣೀರಿಟ್ಟರು. ಪೊಲೀಸರು ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ, ಉಪವಾಸದಲ್ಲಿದ್ದವರನ್ನು ಬಲವಂತವಾಗಿ ಸ್ಥಳಾಂತರಿಸಿ, ನಮ್ಮೊಂದಿಗೆ ಅಮಾನವೀಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದರು. ಮಹಿಳೆಯರ ಆರೋಪಗಳನ್ನು ಆಲಿಸಿದ ಕುಮಾರಸ್ವಾಮಿ, ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಅವರನ್ನು ಕರೆಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಬಳಿಕ ಸ್ಥಳಕ್ಕಾಗಮಿಸಿದ ಎಸ್ಪಿಯಿಂದ ಘಟನೆ ಕುರಿತು ಮಾಹಿತಿ ಪಡೆದರು. ಕಳೆದ 565 ದಿನಗಳಿಂದ ರೈತರು ಶಾಂತಿಯುತವಾಗಿ ಹೋರಾಟ ನಡೆಸುತ್ತಿದ್ದಾರೆ. ಮಹಿಳೆಯರೊಂದಿಗೆ ಪೊಲೀಸರ ಅಮಾನವೀಯ ವರ್ತನೆ ಸರಿಯಲ್ಲ ಎಂದು ಕಿಡಿಕಾರಿದರು.

ಜಿಲ್ಲಾ ಜೆಡಿಎಸ್ ಅಧ್ಯಕ್ಷ ಜಯಮುತ್ತು, ತಾಲೂಕು ಅಧ್ಯಕ್ಷ ಗೋವಿಂದನಹಳ್ಳಿ ನಾಗರಾಜು, ರೈತಸಂಘದ ಮಲ್ಲಯ್ಯ, ಕುಮಾರಸ್ವಾಮಿ ಸೇರಿದಂತೆ ಹಲವರು ಇದ್ದರು.

ಐಜಿ ಗೆ ಕರೆ

ಬಳಿಕ ಐಜಿ ಗಿರೀಶ್ ಅವರಿಗೆ ದೂರವಾಣಿ ಕರೆ ಮಾಡಿದ ಕುಮಾರಸ್ವಾಮಿ, ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿ ಅಮಾನವೀಯವಾಗಿ ಅವರನ್ನು ಬಂಧಿಸಲಾಗಿದೆ. ಈ ವೇಳೆ ಅವರ ಬಟ್ಟೆಗಳನ್ನು ಸಹ ಹರಿಯಲಾಗಿದೆ. ಅಂತಹ ಪೊಲೀಸರನ್ನು ಕೂಡಲೇ ಸಸ್ಪೆಂಡ್ ಮಾಡಬೇಕು. ಟೌನ್‌ಶಿಪ್ ಪರ ಇರುವ ರೈತರನ್ನೂ ಪೊಲೀಸರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅವರ ವಿರುದ್ಧವೂ ಕ್ರಮ ಆಗಬೇಕು. ಇಲ್ಲವಾದರೆ ನಾನೇ ರಸ್ತೆಗಿಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕ್ರಮಕ್ಕೆ ಸೂಚನೆ

ರೈತರ ಮೇಲೆ ದಾಖಲಾಗಿದ್ದ ಕೇಸ್‌ಗೆ ಈಗಾಗಲೇ ಜಾಮೀನು ಕೊಡಿಸಿದ್ದು, ದಬ್ಬಾಳಿಕೆ ಮಾಡಿದ ಪೊಲೀಸರ ಮೇಲೂ ಕ್ರಮಕ್ಕೆ ಸೂಚಿಸಿದ್ದೇನೆ. ಮಹಿಳಾ ಆಯೋಗ, ಮಾನವ ಹಕ್ಕುಗಳ ಆಯೋಗಕ್ಕೂ ದೂರು ಕೊಡಬೇಕು. ರೈತರನ್ನು ದುರುಪಯೋಗ ಮಾಡಿಕೊಂಡು ನಾನು ರಾಜಕೀಯ ಮಾಡಲ್ಲ. ನಿಮ್ಮದು ನ್ಯಾಯಯುತವಾದ ಹೋರಾಟ. ಯಾವುದೇ ಕಾರಣಕ್ಕೂ ಈ ಯೋಜನೆ ಆಗಲ್ಲ. ಸಕಾರದ ಬಳಿ ಹಣವೂ ಇಲ್ಲ. ರೈತರು ಧೃತಿಗೆಡಬೇಡಿ, ನಿಮ್ಮ ಜತೆ ನಾವಿದ್ದೇವೆ ಎಂದು ಎಂದು ರೈತರಿಗೆ ಕುಮಾರಸ್ವಾಮಿ ಧೈರ್ಯ ತುಂಬಿದರು.

ಹೋರಾಟ ಬೈರಮಂಗಲಕ್ಕೆ ವಾಪಸ್

ಬಳಿಕ ರೈತರಿಗೆ ಬಾಳೆಹಣ್ಣು ತಿನ್ನಿಸಿ ಉಪವಾಸ ಸತ್ಯಾಗ್ರಹ ಕೈಬಿಡುವಂತೆ ಮನವಿ ಮಾಡಿದರು. ಕುಮಾರಸ್ವಾಮಿ ಅವರ ಮನವಿಗೆ ಸ್ಪಂದಿಸಿದ ರೈತರು ಚನ್ನಪಟ್ಟಣದಿಂದ ಬೈರಮಂಗಲದ ಧರಣಿ ಸ್ಥಳಕ್ಕೆ ತೆರಳಿ ಪ್ರತಿಭಟನೆ ಮುಂದುವರಿಸಲು ನಿರ್ಧರಿಸಿ, ಭೂಸ್ವಾಧೀನ ಪ್ರಕ್ರಿಯೆ ಕೈಬಿಡುವವರೆಗೂ ಹೋರಾಟ ಮುಂದುವರಿಸುವುದಾಗಿ ಸಚಿವರಿಗೆ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ ಅವರು, ರೈತ ಮಹಿಳೆಯರು ತಮ್ಮ ಮೇಲೆ ನಡೆದಿರುವ ದೌರ್ಜನ್ಯದ ಬಗ್ಗೆ ಕಣ್ಣೀರಿಟ್ಟು ಅಳಲು ತೋಡಿಕೊಂಡಿದ್ದಾರೆ. ಎಲ್ಲದಕ್ಕೂ ಮಾತನಾಡುವ ಗೃಹ ಸಚಿವರು ಈ ಘಟನೆ ಬಗ್ಗೆ ಯಾವ ಕ್ರಮ ಕೈಗೊಂಡಿದ್ದಾರೆ? ಇದು ಯಾವುದೇ ಪಕ್ಷದ ಹೋರಾಟವಲ್ಲ. ರೈತರ ಬದುಕಿಗಾಗಿ ನಡೆಯುತ್ತಿರುವ ಹೋರಾಟ. ಸರ್ಕಾರ ತನ್ನ ತಪ್ಪನ್ನು ತಿದ್ದಿಕೊಳ್ಳಬೇಕು. ಯೋಜನೆ ವಿಚಾರದಲ್ಲಿ ಯಾಕೆ ಮುಖ್ಯಮಂತ್ರಿಗೆ ಇಷ್ಟೊಂದು ಹಠ? ಎಂದು ವಾಗ್ದಾಳಿ ನಡೆಸಿದರು.