ಜಿಲ್ಲೆ

ರಾಖಿ ಕಟ್ಟಿ ಶುಭ ಕೋರಿದ ಸಹೋದರಿಯರು; ಸಹೋದರತೆಗೆ ಸಾಕ್ಷಿ ರಕ್ಷಾಬಂಧನ

ಬೆಂಗಳೂರು: ರಕ್ಷಾಬಂಧನದ ಹಿನ್ನೆಲೆಯಲ್ಲಿ ತಮ್ಮ ತಮ್ಮ ಅಣ್ಣ-ತಮ್ಮಂದಿರಿಗೆ, ಸಹೋದರ ಸಮಾನರಿಗೆ ರಾಖಿ ಕಟ್ಟಿದ ಸಹೋದರಿಯರು ಅವರಿಗೆ ಶುಭ ಹಾರೈಸಿದ್ದಾರೆ.

ಒಡಹುಟ್ಟಿದವರಿಗೆ ಜೀವನದಲ್ಲಿ ಎಂದು ಸೋಲಾಗದೆ ಎಲ್ಲ ಹಂತದಲ್ಲೂ ವಿಜಯವೇ ದೊರೆಯಬೇಕೆಂಬ ಸದಾಶಯದೊಂದಿಗೆ ರಾಖಿ ಕಟ್ಟಿ ಶುಭ ಕೋರುವ ಪರ್ವಕಾಲ ರಕ್ಷಾಬಂಧನ. ರಾಖಿ ಕೇವಲ ಒಂದು ದಾರ ಮಾತ್ರವಲ್ಲ. ಇದು ಶಕ್ತಿಯುಳ್ಳ ರಕ್ಷೆ. ರಾಖಿ ಕಟ್ಟುವುದರಿಂದ ಸೋದರ ಸಂಬಂಧ ಗಟ್ಟಿಯಾಗುವುದರ ಜೊತೆಗೆ ಪರಸ್ಪರ ಪ್ರೀತ-ಬಾಂಧವ್ಯವೂ ವೃದ್ಧಿಯಾಗುತ್ತದೆ. ಆ ಕಾರಣಕ್ಕೆ ತಮ್ಮ ಸೋದರರಿಗೆ ರಾಖಿ ಕಟ್ಟುವುದಕ್ಕಾಗಿಯೇ ದೂರದಿಂದ ಆಗಮಿಸುವ ಸೋದರಿಯರು ತಮ್ಮ ಸೋದರರಿಗೆ ರಾಖಿ ಕಟ್ಟಿ ಸಿಹಿ ತಿನ್ನಿಸಿ ಶುಭ ಕೋರುತ್ತಾರೆ.

ನಗರದ ವಿವಿಧ ಸೀ ಸಂಘಟನೆಗಳ ಸದಸ್ಯರು, ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಸ್ವಯಂ ಸೇವಕರು ಪುರುಷರಿಗೆ ರಕ್ಷಾ ಬಂಧನವನ್ನು ಕಟ್ಟಿ ಶುಭ ಕೋರಿದರು.

ವಿಶೇಷವಾಗಿ ಸೇನೆಯಲ್ಲಿ ಕೆಲಸ ಮಾಡುವ ಯೋಧರಿಗೆ ಶಾಲಾ ಮಕ್ಕಳು, ವಿವಿಧ ಸಂಘಟನೆಯ ಮಹಿಳೆಯರು ರಕ್ಷಾಬಂಧವನ್ನು ಕಟ್ಟಿ, ಆರತಿ ಬೆಳಗಿ ಶುಭ ಹಾರೈಸಿದರು. ವಿದ್ಯಾರ್ಥಿನಿಯರು ವಿವಿಧ ಶಾಲೆಗಳಲ್ಲಿ ಶಿಕ್ಷಕರಿಗೆ, ಸಹಪಾಠಿಗಳಿಗೆ ರಾಖಿ ಕಟ್ಟಿದರು. ಸಾರ್ವಜನಿಕ ಸಾರಿಗೆಯ ವಾಹನ ಚಾಲಕರಿಗೆ, ಕೆಲ ಠಾಣೆಯ ಪೊಲೀಸರಿಗೆ ಕೂಡಾ ಮಹಿಳೆಯರು ರಕ್ಷಾ ಬಂಧನ ಕಟ್ಟಿ ಸಿಹಿ ನೀಡಿ ಶುಭ ಕೋರಿದರು.