ರಕ್ಷಾ ಬಂಧನ ಹಬ್ಬದ ಅಂಗವಾಗಿ ಎನ್.ಆರ್.ಪುರ ಪೊಲೀಸರಿಗೆ ಇನ್ನರ್‌ವ್ಹೀಲ್ ಕ್ಲಬ್ ಸದಸ್ಯರು ರಾಖಿ ಕಟ್ಟಿ ಆರತಿ ಬೆಳಗಿದರು. 
ಜಿಲ್ಲೆ

ಪೊಲೀಸರಿಗೆ ಆರತಿ ಬೆಳಗಿದ ಸಹೋದರಿಯರು

ಎಸ್.ಎನ್.ರವೀಂದ್ರ

ಎನ್.ಆರ್.ಪುರ: ದೇಶದ ಗಡಿ ಕಾಯುತ್ತಿರುವ ಸೈನಿಕರು ಹಾಗೂ ನಮ್ಮೆಲ್ಲರಿಗೆ ರಕ್ಷಣೆ ನೀಡುತ್ತಿರುವ ಪೊಲೀಸರು ಸಹೋದರರಂತೆ ರಕ್ಷಕರಾಗಿದ್ದಾರೆ ಎಂದು ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ರಶ್ಮಿ ದಯಾನಂದ್ ಹೇಳಿದರು.

ಬುಧವಾರ ತಾಲೂಕು ಬಿಜೆಪಿ ಮಹಿಳಾ ಮೋರ್ಚಾ ಹಾಗೂ ಇನ್ನರ್‌ವ್ಹೀಲ್ ಕ್ಲಬ್‌ನಿಂದ ಪೊಲೀಸರಿಗೆ ರಾಖಿ ಕಟ್ಟಿ ಮಾತನಾಡಿ, ನಾಲ್ಕು ವರ್ಷಗಳಿಂದಲೂ ಬಿಜೆಪಿ ಮಹಿಳಾ ಮೋರ್ಚಾದಿಂದ ರಕ್ಷಾಬಂಧನ ಆಚರಿಸಿ, ಪೊಲೀಸರಿಗೆ ರಾಖಿ ಕಟ್ಟುತ್ತಿದ್ದೆವು. ಈ ಬಾರಿ ಇನ್ನರ್ ವ್ಹೀಲ್ ಕ್ಲಬ್‌ನಿಂದ ರಕ್ಷಾಬಂಧನ ಆಚರಿಸುತ್ತಿದ್ದೇವೆ. ನಾವು ನೆಮ್ಮದಿಯಿಂದ ಇರಲು ಸೈನಿಕರು ಹಾಗೂ ಪೊಲೀಸರು ಕಾರಣ ಎಂದರು.
ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸರು, ದೇಶದ ಗಡಿಯಲ್ಲಿ ಜೀವದ ಹಂಗು ತೊರೆದು ಸೇವೆ ಸಲ್ಲಿಸುತ್ತಿರುವ ಸೈನಿಕರಿಗೆ ಚಿರಋಣಿಯಾಗಿದ್ದೇವೆ. ಅವರನ್ನು ಗೌರವಿಸುವುದು ಆದ್ಯ ಕರ್ತವ್ಯ ಎಂದು ತಿಳಿಸಿದರು.
ಪೊಲೀಸರು ಹಾಗೂ ಸಿಬ್ಬಂದಿಗೆ ಇನ್ನರ್‌ವ್ಹೀಲ್ ಕ್ಲಬ್ ಪದಾಧಿಕಾರಿಗಳು ರಾಖಿ ಕಟ್ಟಿ, ತಿಲಕವಿಟ್ಟು, ಆರತಿ ಬೆಳಗಿದರು. ಪಿಎಸ್‌ಐ ಶ್ರೀಗುರು ಸಜ್ಜನ್, ಎಎಸ್‌ಐ ತಮ್ಮಯ್ಯ, ಚಂದ್ರಪ್ಪ, ಸಿಬ್ಬಂದಿ ಶಂಕರ, ರಾಜುವಡ್ಡರ್, ಯೋಗೀಶ್‌ಬಾಬು, ಬಸವರಾಜ್, ಸುನಿಲ್, ಯುಗೇಂದ್ರ, ಇನ್ನರ್‌ವ್ಹೀಲ್ ಕ್ಲಬ್ ಕಾರ್ಯದರ್ಶಿ ಶ್ಯಾಮಲಾ ಸತೀಶ್, ಬಿಂದು ಟಿ.ವಿ.ವಿಜಯನ್, ಮೋಳಿ, ಟಿ.ವಿ.ವರ್ಗೀಸ್, ರೇಖಾ ಮಂಜುನಾಥ್, ನೀತಾ ಇತರರಿದ್ದರು.