ಸಿರವಾರ: ತುಂಗಭದ್ರಾ ಎಡದಂಡೆ ಕಾಲುವೆಯ ಕೊನೇ ಭಾಗಕ್ಕೆ ಸಮರ್ಪಕವಾಗಿ ನೀರು ಹರಿಸಬೇಕೆಂದು ಒತ್ತಾಯಿಸಿ ರೈತ ಸಂಘಟನೆ ಒಕ್ಕೂಟ ಗುರುವಾರ ಕರೆ ನೀಡಿದ್ದ ಸಿರವಾರ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಪಟ್ಟದ ರಾಯಚೂರು-ಲಿಂಗಸುಗೂರು ಮುಖ್ಯ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದರಿಂದ ಸುಮಾರು 4 ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿ, ಪ್ರಯಾಣಿಕರು ಪರದಾಡುವಂತಾಯಿತು. ಅಂಗಡಿ ಮುಂಗಟ್ಟುಗಳು ಸಂಜೆ 5 ಗಂಟೆವರೆಗೆ ಬಂದ್ ಮಾಡಿ ಬೆಂಬಲ ನೀಡಿದವು.
ಬಿಜೆಪಿ ಮಂಡಲ ಅಧ್ಯಕ್ಷ ಜೆ.ದೇವರಾಜಗೌಡ ಪಾಟೀಲ್ ಮಾತನಾಡಿ, ತುಂಗಭದ್ರಾ ಎಡದಂಡೆ ಕಾಲುವೆ ಕೊನೆಯ ಭಾಗಕ್ಕೆ ಸಮರ್ಪಕವಾಗಿ ನೀರು ಹರಿಸುವಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ. ಐಸಿಸಿ ಸಭೆಯ ನಿರ್ಣಯದಂತೆ ಕಾಲುವೆಗೆ ನೀರು ಹರಿಸಬೇಕು. ಆದರೆ ಕಳೆದ ತಿಂಗಳಿಂದ ನೀರು ಬರುತ್ತಿಲ್ಲ. ತುಂಗಭದ್ರಾ ಡ್ಯಾಂನಲ್ಲಿ ನೀರು ಇದೆ. ಎರಡನೇ ಬೆಳೆಗೆ ನೀರು ಹರಿಸುವ ಬಗ್ಗೆ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಆದರೆ ದೇವರು ವರ ಕೊಟ್ಟರು ಪೂಜಾರಿ ಕೊಡಲಿಲ್ಲ ಎನ್ನುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತ ಮುಖಂಡ ಹರವಿ ಶಂಕರಗೌಡ ಮಾತನಾಡಿ, ಸರ್ಕಾರ ವ್ಯವಸ್ಥೆಯನ್ನೇ ಹಾಳು ಮಾಡಿದೆ. ಇದರಿಂದಾಗಿ ಈ ಭಾಗಕ್ಕೆ ಯಾವುದೇ ಇಲಾಖೆಗೆ ಅಧಿಕಾರಿಗಳು ಬರುವುದಕ್ಕೆ ಹಿಂದೇಟು ಹಾಕುವಂತಾಗಿದೆ. ಎಲ್ಲದಕ್ಕೂ ಲಂಚ ನೀಡಬೇಕಾಗಿದೆ. ರಾಜಕೀಯ ಒತ್ತಡಕ್ಕೆ ಒಳಗಾಗಬೇಕಾಗಿದೆ. ಕೂಡಲೇ ನೀರು ಹರಿಸಬೇಕು. ಇಲ್ಲದಿದ್ದರೆ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ರವಿ ಎಸ್.ಅಂಗಡಿ, ನೀರಾವರಿ ಇಲಾಖೆ ಎಇಇ ವಿಜಯಲಕ್ಷ್ಮೀ ಪಾಟೀಲ್ ಅವರು ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರು. ಆದರೆ ಹೋರಾಟಗಾರರು ಪಟ್ಟು ಸಡಿಸಲಿಲ್ಲ. ತುಂಗಭದ್ರಾ ಎಡದಂಡೆಯ ಕಾಲುವೆ ವೃತ್ತ ನಿರೀಕ್ಷಕ ಸುಬ್ರಹ್ಮಣ್ಯ ಮಾತನಾಡಿ, ಶುಕ್ರವಾರ ಸಂಜೆಗೆ ಕೊನೇ ಭಾಗಕ್ಕೆ ಸಮರ್ಪಕವಾಗಿ ನೀರು ಹರಿಸುವ ಭರವಸೆ ನೀಡಿದ ನಂತರ ರೈತರು ಪ್ರತಿಭಟನೆ ಕೈಬಿಟ್ಟರು.
ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ, ಗಂಗಾಧರ ನಾಯಕ, ರೈತ ಮುಖಂಡರಾದ ಚಾಮರಸ ಮಾಲಿಪಾಟೀಲ್, ಎನ್.ಉದಯ ಕುಮಾರ, ಅಮರೇಶಗೌಡ ಚಾಗಬಾವಿ, ಜೆ.ಶರಣಪ್ಪಗೌಡ, ಲೋಕರೆಡ್ಡಿ, ಮಲ್ಲಿಕಾರ್ಜುನ ಗೌಡ ಬಲ್ಲಟಗಿ, ವಿಜಯ ಕುಮಾರ ಗುಡ್ಡದಮನಿ, ಮಲ್ಲಿಕಾರ್ಜುನ ಜಕ್ಕಲದಿನ್ನಿ, ಎಂ.ಪ್ರಕಾಶಪ್ಪ, ಶಿವಶರಣಗೌಡ ಬೆಳವಿನೂರು, ದಾನಪ್ಪ, ದೇವೇಂದ್ರಯ್ಯ ಸ್ವಾಮಿ, ಅರಕೇರಿ ಮಲ್ಲಪ್ಪ ಸಾಹುಕಾರ್, ಸಿದ್ದರಾಮಯ್ಯ ಸ್ವಾಮಿ, ಕಲ್ಲೂರು ಬಸವರಾಜ ನಾಯಕ, ಉದಯ ಕುಮಾರ ಸಾಹುಕಾರ ಚಾಗಬಾವಿ, ಮಲ್ಲಿಕಾರ್ಜುನ ಜೇಗರಕಲ್, ಪತ್ತಾರ ನಾಗಪ್ಪ ಸಾಹುಕಾರ, ಬಸವರಾಜ ನವಲಕಲ್ ಇತರರಿದ್ದರು.