ಕನಕಗಿರಿ ತಾಲೂಕಿನ ಸಿರವಾರ ಗ್ರಾಮದಲ್ಲಿ ಉದ್ದೇಶಿತ ತೋಟಗಾರಿಕಾ ಪಾರ್ಕ್ ಸ್ಥಳಕ್ಕೆ ಡಿಸಿ ಸುರೇಶ ಬಿ. ಇಟ್ನಾಳ ಶನಿವಾರ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಕೃಷಿ ಇಲಾಖೆ ಜಂಟಿ ನಿರ್ದೇಶಕ ರುದ್ರೇಶಪ್ಪ, ತೋಟಗಾರಿಕಾ ಇಲಾಖೆ ಡಿಡಿ ಕೃಷ್ಣ ಉಕ್ಕುಂದ ಇತರರಿದ್ದರು.  
ಜಿಲ್ಲೆ

ತೋಟಗಾರಿಕಾ ಪಾರ್ಕ್ ಸ್ಥಳ ಪರಿಶೀಲನೆ, ಸಂಬಂಧಿಸಿದ ಅಧಿಕಾರಿಗಳಿಂದ ಮಾಹಿಸಿ ಸಂಗ್ರಹಿಸಿ ಡಿಸಿ

ಕನಕಗಿರಿ: ತಾಲೂಕಿನ ಸಿರವಾರ ಗ್ರಾಮದಲ್ಲಿ ನಿರ್ಮಿಸಲು ಉದ್ದೇಶಿರುವ ತೋಟಗಾರಿಕಾ ಪಾರ್ಕ್ ಸ್ಥಳವನ್ನು ಜಿಲ್ಲಾಧಿಕಾರಿ ಸುರೇಶ ಬಿ.ಇಟ್ನಾಳ ಶನಿವಾರ ಪರಿಶೀಲಿಸಿದರು.

ತೋಟಗಾರಿಕೆ ಬೆಳೆ ಹೆಚ್ಚು ಬೆಳೆಯುತ್ತಿರುವ ಕನಕಗಿರಿ ತಾಲೂಕಿನಲ್ಲಿ ರೈತರ ಅನುಕೂಲಕ್ಕಾಗಿ ಸಿರವಾರ ಗ್ರಾಮದ ತೋಟಗಾರಿಕಾ ತಂತ್ರಜ್ಞಾನ ಪಾರ್ಕ್‌ಗೆ 83.79 ಕೋಟಿ ರೂ.ಯೋಜನೆಗೆ ಜು.17ರಂದು ಸಂಪುಟ ಸಭೆ ಅಸ್ತು ಎಂದಿತ್ತು.

ಈ ಹಿನ್ನೆಲೆಯಲ್ಲಿ ತೋಟಗಾರಿಕಾ ತಂತ್ರಜ್ಞಾನ ಪಾರ್ಕ್‌ಗಾಗಿ ಗ್ರಾಮದ ಪರಂಪೋಕ ಜಮೀನು ಸರ್ವೇ ನಂ.124/1/ಪಿ2ರಲ್ಲಿ ಮೀಸಲಿರಿಸಿದ 194.33 ಎ-ಗುಂ ಪರಿಶೀಲಿಸಿದರು. ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಮಾದರಿಯಡಿ ಸ್ಥಾಪನೆ ಮಾಡಲು ಉದ್ದೇಶಿರುವ ಜಾಗದಲ್ಲಿ ಒದಗಿಸಬೇಕಾದ ಮೂಲ ಸೌಲಭ್ಯಗಳ ಕುರಿತು ತೋಟಗಾರಿಕಾ ಇಲಾಖೆಯ ಡಿಡಿ ಕೃಷ್ಣ ಉಕ್ಕುಂದ ಅವರಿಂದ ಜಿಲ್ಲಾಧಿಕಾರಿ ಮಾಹಿತಿ ಪಡೆದರು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾರ್ಕ್‌ನಲ್ಲಾಗಬೇಕಾದ ಸೌಲಭ್ಯಗಳ ರೂಪರೇಷೆಗಳು, ಟೆಂಡರ್ ಪ್ರಕ್ರಿಯೆ, ಸಂಪರ್ಕ ರಸ್ತೆಯ ಕುರಿತು ಅಧಿಕಾರಿಗಳು, ಡಿಪಿಆರ್ ತಯಾರಿಸಿದ ಎಸ್.ಇ. ಆ್ಯಂಡ್ ವೈ ಸಿಬ್ಬಂದಿ ಶಿವಪ್ರಕಾಶ ಅವರೊಂದಿಗೆ ಚರ್ಚಿಸಿದರು. ಕೃಷಿ ಇಲಾಖೆ ಜಂಟಿ ನಿರ್ದೇಶಕ ರುದ್ರೇಶಪ್ಪ, ತಹಸೀಲ್ದಾರ್ ವಿಶ್ವನಾಥ ಮುರುಡಿ ಇತರರಿದ್ದರು.