ಸಿರವಾರ: ಭಾರತ ಎಂದರೆ ಹಾವಾಡಿಗರ ದೇಶ ಎಂದು ಹಿಯಾಳಿಸುತ್ತಿದ್ದ ದಿನಗಳಲ್ಲಿ ದೇಶದ ಕೀರ್ತಿಯನ್ನು ಉತ್ತುಂಗಕ್ಕೆ ಏರಿಸಿದ ಕೀರ್ತಿ ಸ್ವಾಮಿ ವಿವೇಕಾನಂದಗೆ ಸಲ್ಲುತ್ತದೆ. ಅವರ ಆದರ್ಶಗಳು ಸಾರ್ವಕಾಲಿಕ ಶ್ರೇಷ್ಠ ಎಂದು ಭಾರತ ಸೇವಾದಳದ ಜಿಲ್ಲಾ ಮುಖ್ಯಸ್ಥ ವಿದ್ಯಾಸಾಗರ ಚಿಮಣಗೇರಿ ಹೇಳಿದರು.
ಪಟ್ಟಣದ ಸರ್ಕಾರಿ ಪದವಿ ಕಾಲೇಜ್‌ನಲ್ಲಿ ನೆಹರು ಯುವ ಕೇಂದ್ರ, ನವ ಭಾರತ ನಿರ್ಮಾಣ ಯುವ ಸಂಘ, ಮಾತೃ ಮಡಿಲು ಮಹಿಳಾ ಸಂಘ, ಕಲ್ಯಾಣ ಕರ್ನಾಟಕ ಯುವಕ ಸಂಘ ಮತ್ತು ಆದಿ ಶಕ್ತಿ ಮಹಿಳಾ ಸಂಘ ಸಂಯುಕ್ತಾಶ್ರಯದಲ್ಲಿ ಬುಧವಾರ ಆಯೋಜಿಸಿದ್ದ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಸ್ವಾಮಿ ವಿವೇಕಾನಂದರು ವಿಶ್ವ ಧರ್ಮ ಸಮ್ಮೇಳನದಲ್ಲಿ ದೇಶದ ಆಚಾರ, ವಿಚಾರ, ಸಂಸ್ಕಾರ, ಮೌಲ್ಯಗಳನ್ನು ತಿಳಿಸುವ ಮೂಲಕ ವಿಶ್ವವೇ ಭಾರತದತ್ತ ನೋಡುವಂತೆ ಮಾಡಿದ್ದರು. ರಾಮಕೃಷ್ಣ ಪರಮಹಂಸರು ವಿವೇಕಾನಂದರ ಗುರುಗಳು ಎಂದು ಪ್ರಸಿದ್ಧಿ ಹೊಂದಿದರು. ಅಂತಹ ಶಿಷ್ಯ ಬಳಗ ಇಂದಿನ ಅವಶ್ಯವಾಗಿದೆ ಎಂದರು.
ಯುವ ಪೀಳಿಗೆ ಉತ್ತಮ ಆರೋಗ್ಯ ಹೊಂದಿದಾಗ ಸದೃಢ ದೇಶ ನಿರ್ಮಾಣ ಸಾಧ್ಯ. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು, ಕ್ರೀಡೆಗಳಿಂದ ದೇಹ ಸದೃಢವಾಗುತ್ತದೆ. ಆದರೆ, ಯುವಕರು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು. ಪ್ರತಿಯೊಬ್ಬರೂ ಕರೊನಾ ವ್ಯಾಕ್ಸಿನ್ ಹಾಕಿಸಿಕೊಳ್ಳಬೇಕು. ಇತರರಿಗೆ ವ್ಯಾಕ್ಸಿನ್ ಪಡೆಯುವಂತೆ ತಿಳಿ ಹೇಳಬೇಕು. ಕರೊನಾ ವಾರಿಯರ್‌ಗಳಾಗಿ ಕೆಲಸ ಮಾಡಬೇಕೆಂದು ವಿದ್ಯಾಸಾಗರ ಚಿಮಣಗೇರಿ ಸಲಹೆ ನೀಡಿದರು. ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿದ್ದು, ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.