ಜಿಲ್ಲೆ

ರಾಮಕೃಷ್ಣ ಹೆಗಡೆ ಕಡವೆ ಬಳಗ ಜಯಭೇರಿ

ವಿರೂಪಾಕ್ಷಯ್ಯ ಗುದ್ನಯ್ಯನವರಮಠ

ಶಿರಸಿ: ರಾಜ್ಯದ ಪ್ರತಿಷ್ಠಿತ ಸಹಕಾರಿ ಸಂಸ್ಥೆಯಾಗಿರುವ ದಿ ತೋಟಗಾರ್ಸ್ ರೂರಲ್ ಕೋ-ಆಪರೇಟಿವ್ ಅಗ್ರಿಕಲ್ಚರಲ್ ಕ್ರೆಡಿಟ್ ಸೊಸೈಟಿ ಶಿರಸಿ (ಟಿಆರ್‌ಸಿ) ಆಡಳಿತ ಮಂಡಳಿಗೆ ಶನಿವಾರ ನಡೆದ ಚುನಾವಣೆಯಲ್ಲಿ ಸಂಸ್ಥೆ ಹಾಲಿ ಅಧ್ಯಕ್ಷ, ಹಿರಿಯ ಸಹಕಾರಿ ರಾಮಕೃಷ್ಣ ಹೆಗಡೆ ಕಡವೆ ಬಳಗಕ್ಕೆ ಮತದಾರರು ಪ್ರಚಂಡ ಬಹುಮತ ನೀಡಿ ಗೆಲುವು ದಾಖಲಿಸಿದ್ದಾರೆ. ಸಾಮಾನ್ಯ ಕ್ಷೇತ್ರದಿಂದ ಗರಿಷ್ಠ ಮತ ಪಡೆದು ರಾಮಕೃಷ್ಣ ಶ್ರೀಪಾದ ಹೆಗಡೆ ಕಡವೆ, ಗಣಪತಿ ಶೇಷಗಿರಿ ರಾಯ್ಸದ್, ರಮಾಕಾಂತ ವೆಂಕಟ್ರಮಣ ಹೆಗಡೆ ಚಿಪಗಿ, ವಿಘ್ನೇಶ್ವರ ರಾಮಚಂದ್ರ ಹೆಗಡೆ ಅಗಸಾಲ ಕಿಬ್ಬಳ್ಳಿ, ವಿಶ್ವನಾಥ ಗೋಪಾಲಕೃಷ್ಣ ಹೆಗಡೆ ಸೋಮ್ನಳ್ಳಿ, ವಿಶ್ವಾಸ ಪುಂಡಲೀಕ ಬಲ್ಸೆ ಚವತ್ತಿ, ಶಿವಾನಂದ ಗಣಪತಿ ಭಟ್ಟ ನಿಡಗೋಡ, ಸುಬ್ರಾಯ ನಾರಾಯಣ ಹೆಗಡೆ ಹಾವಳಿಮನೆ ವಿಜಯದ ನಗೆ ಬೀರಿದ್ದಾರೆ. ಹಿಂದುಳಿದ ಬ ವರ್ಗದಿಂದ ರಾಮಕೃಷ್ಣ ಹೆಗಡೆ ಕಡವೆ ಗುಂಪಿನಿಂದ ಸ್ಪರ್ಧಿಸಿದ್ದ ಸಂತೋಷಕುಮಾರ ಚಾಮರಾಜ ಗೌಡರ ತೋಟದ ಕಸಗೆ ಗೆಲುವು ಸಾಧಿಸಿದ್ದಾರೆ. ಒಟ್ಟು 2,087 ಅರ್ಹ ಷೇರು ಮತದಾರರಲ್ಲಿ 1,702 ಷೇರುದಾರರು ಮತ ಚಲಾಯಿಸಿದ್ದರು. ಇನ್ನುಳಿದಂತೆ ಹಿಂದುಳಿದ ಅ 1 ವರ್ಗದ ಸ್ಥಾನಕ್ಕೆ ಈರಾ ನಾರಾಯಣ ಗೌಡ ಕಳವೆ, ಸಾಮಾನ್ಯ ಮಹಿಳಾ ಅಭ್ಯರ್ಥಿಗಳ 2 ಸ್ಥಾನಗಳಿಗೆ ಹಾಲಿ ನಿರ್ದೇಶಕರಾಗಿದ್ದ ಇಂದಿರಾ ಹೆಗಡೆ ಮತ್ತು ಕಲ್ಪನಾ ಕೊಪ್ಪಳ ಅವಿರೋಧವಾಗಿ ಆಯ್ಕೆಯಾಗಿದ್ದರು. ಸಾಮಾನ್ಯ ಕ್ಷೇತ್ರದಿಂದ 8 ಜನರಿಗೆ ಅವಕಾಶವಿದ್ದು, 11 ಜನ ಉಮೇದುವಾರಿಕೆ ಸಲ್ಲಿಸಿದ್ದರು. ಹಿಂದುಳಿದ ವರ್ಗ ಬ 1 ಸ್ಥಾನವಿದ್ದು, 2 ಜನರು ಮಾತ್ರ ಉಮೇದುವಾರಿಕೆ ಸಲ್ಲಿಸಿದ್ದರು.