ಶಿವಪ್ರಸಾದ ಹಿರೇಕೈ ಶಿರಸಿ
ಉತ್ತರ ಕನ್ನಡ ಜಿಲ್ಲೆಯ ಅತಿದೊಡ್ಡ ವಾಣಿಜ್ಯ ನಗರವೆಂದೇ ಖ್ಯಾತಿ ಪಡೆದ ಶಿರಸಿ ಪಟ್ಟಣದಲ್ಲಿ ಸಂಚಾರ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಗರ ವ್ಯಾಪ್ತಿಯಲ್ಲಿ ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಹಾಗೂ ಏಕಮುಖ ಸಂಚಾರ ವ್ಯವಸ್ಥೆಯಲ್ಲಿನ ದೋಷಗಳು ಸಂಚಾರ ದಟ್ಟಣೆಗೆ ಕಾರಣವಾಗಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಸಂಚಾರ ದಟ್ಟಣೆ ನಿಯಂತ್ರಿಸಲು ನಗರದ ಕೆಲ ರಸ್ತೆಗಳನ್ನು ಏಕಮುಖ ಸಂಚಾರ ರಸ್ತೆಯನ್ನಾಗಿ ಪೊಲೀಸ್ ಇಲಾಖೆ ಗುರುತು ಮಾಡಿತ್ತು. ಆದರೆ, ಅದು ಕೆಲವೇ ದಿನಗಳಿಗೆ ಮಾತ್ರ ಸೀಮಿತವಾಗಿ ಇದೀಗ ಯಥಾರೀತಿ ಮೊದಲಿನಂತೆ ಸಂಚಾರ ವ್ಯವಸ್ಥೆ ನಡೆದಿದೆ.
ಪ್ರತಿ ಮಂಗಳವಾರ ಶಿರಸಿಯಲ್ಲಿ ಸಂತೆ ನಡೆಯುತ್ತದೆ. ನಗರದ ಹೃದಯ ಭಾಗವಾದ ಹಳೇ ಬಸ್ ನಿಲ್ದಾಣ ವೃತ್ತದಿಂದ ಹಿಡಿದು ಡ್ರೈವರ್ ಕಟ್ಟೆ, ಶಿವಾಜಿ ಚೌಕದಲ್ಲಿ ವಾಹನ ದಟ್ಟಣೆ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಶಿರಸಿಯಲ್ಲಿ ಮೂರು ಪೊಲೀಸ್ ಠಾಣೆಗಳಿದ್ದು, ಕೆಲವೊಮ್ಮೆ ಸಂಚಾರ ದಟ್ಟಣೆ ನಿಯಂತ್ರಿಸಲು ಸಿಬ್ಬಂದಿ ಕೊರತೆ ಸಹ ಎದುರಾಗುತ್ತದೆ. ಈ ಹಿಂದೆ ಗೃಹ ಸಚಿವರಾಗಿದ್ದ ಅರಗ ಜ್ಞಾನೇಂದ್ರ ಅವರು ಶಿರಸಿಗೆ ಆಗಮಿಸಿದ ವೇಳೆ ಟ್ರಾಫಿಕ್ ಪೊಲೀಸ್ ಠಾಣೆ ಮುಂಜೂರು ಮಾಡುವ ಬಗ್ಗೆ ತಿಳಿಸಿದ್ದರು. ಶಿರಸಿಗೆ ಟ್ರಾಫಿಕ್ ಪೊಲೀಸ್ ಠಾಣೆ ಮಂಜೂರಾದರೆ ಸಂಚಾರ ದಟ್ಟಣೆ ನಿಯಂತ್ರಿಸಲು ಸಾಧ್ಯ ಎಂಬುದು ಶಿರಸಿ ನಗರದ ಜನರ ಅಭಿಪ್ರಾಯವಾಗಿದೆ.
ದ್ವಿಪಥ ರಸ್ತೆಯಾದರೂ ನಿಲ್ಲದ ಸಂಚಾರ ದಟ್ಟಣೆ: ಈ ಹಿಂದೆ ಇದ್ದ ರಸ್ತೆಯನ್ನು ಅಗಲೀಕರಣಗೊಳಿಸಿ ನಗರದ ಮುಖ್ಯ ರಸ್ತೆಗಳನ್ನು ದ್ವಿ ಪಥ ಮಾರ್ಗಗಳಾಗಿ ನಿರ್ಮಿಸಲಾಗಿದೆ. ಆದರೂ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಬರುತ್ತಿಲ್ಲ. ನಗರದಲ್ಲಿ ಸಂಚಾರ ದಟ್ಟಣೆ ನಿಯಂತ್ರಣವಾಗಬೇಕಾದರೆ ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಹಾಗೂ ಟ್ರಾಫಿಕ್ ಪೊಲೀಸ್ ಠಾಣೆ ನಿರ್ಮಾಣ ಆಗಬೇಕು ಎಂಬುದು ನಾಗರಿಕರ ಅಭಿಪ್ರಾಯವಾಗಿದೆ.
ಶಿರಸಿಯಲ್ಲಿ ಸಂಚಾರ ಪೊಲೀಸ್ ಠಾಣೆ ಮಂಜೂರಾಗಿದೆ. ಆದರೆ, ಇದುವರೆಗೂ ಅಧಿಕಾರಿ, ಸಿಬ್ಬಂದಿ ಎಷ್ಟು ಮುಂತಾದ ವಿವರಗಳು ಸರ್ಕಾರದಿಂದ ಬಂದಿಲ್ಲ. ಬಂದ ತಕ್ಷಣ ನಾವು ಸಂಚಾರ ಠಾಣೆಯನ್ನು ಪ್ರಾರಂಭಿಸುತ್ತೇವೆ.ಎನ್. ವಿಷ್ಣುವರ್ಧನ ಎಸ್‌ಪಿ, ಉತ್ತರ ಕನ್ನಡ
ಶಿರಸಿ ನಗರ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ. ವಾಹನಗಳ ಸಂಖ್ಯೆಯೂ ಮಿತಿಮೀರುತ್ತಿದೆ. ನಗರದಲ್ಲಿ ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಟ್ರಾಫಿಕ್ ಪೊಲೀಸ್ ಠಾಣೆ ಬಂದರೆ, ಸಂಚಾರ ದಟ್ಟಣೆಯನ್ನು ಕೊಂಚ ಮಟ್ಟಿಗೆ ನಿಯಂತ್ರಿಸಬಹುದು.ಎಂ.ಪಿ. ಮಹಾದೇವ ಸಾಮಾಜಿಕ ಕಾರ್ಯಕರ್ತ ಶಿರಸಿ