ಶಿವಪ್ರಸಾದ ಹಿರೇಕೈ ಶಿರಸಿ
ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಿದ್ದು ವಿದ್ಯಾದೇಗುಲಗಳಲ್ಲಿ ಮಕ್ಕಳ ಕಲರವ ಕೇಳಿಬರುತ್ತಿದೆ. ವಿದ್ಯಾರ್ಥಿಗಳು ಹೊಸ ಉಲ್ಲಾಸ, ಉತ್ಸಾಹದೊಂದಿಗೆ ಅಕ್ಷರ ಮಾತೆಯ ಮಡಿಲಲ್ಲಿ ಅಭ್ಯಾಸಕ್ಕಿಳಿದಿದ್ದಾರೆ. ಆದರೆ, ಶಿರಸಿ ಶೈಕ್ಷಣಿಕ ಜಿಲ್ಲೆಯ ಸಿದ್ದಾಪುರ, ಜೊಯಿಡಾ ಹಾಗೂ ಶಿರಸಿ ತಾಲೂಕಿನಲ್ಲಿ ನೀರಿನ ಸಮಸ್ಯೆ ಎದುರಾಗಿದ್ದು ಶಾಲಾರಂಭಕ್ಕೆ ಅಡ್ಡಿ ಉಂಟಾಗಿದೆ.
ಸಾಮಾನ್ಯವಾಗಿ ಪ್ರತಿವರ್ಷ ಫೆಬ್ರವರಿ, ಮಾರ್ಚ್‌ನಲ್ಲಿ ಅಡ್ಡ ಮಳೆಯಾಗುತ್ತಿತ್ತು. ಇದರಿಂದಾಗಿ ಬೇಸಿಗೆಯ ಕೊನೆಯಲ್ಲಿ ಬಿಸಿಲ ಝಳವಿದ್ದರೂ ಕುಡಿಯುವ ನೀರಿನ ಕೊರತೆ ಇಷ್ಟೊಂದು ಬಾಧಿಸುತ್ತಿರಲಿಲ್ಲ. ಈ ವರ್ಷದ ಮಳೆ ಕೊರತೆಯಿಂದಾಗಿ ಶಾಲಾ ಬಾವಿಗಳು ಬತ್ತಿವೆ. ಕುಡಿಯುವ ನೀರೇ ಇರದಿದ್ದಾಗ ಮಕ್ಕಳ ಬಿಸಿಯೂಟ ತಯಾರಿಕೆಗೆ ಸಮಸ್ಯೆಯಾಗಿದೆ.
ಶಿರಸಿ ಶೈಕ್ಷಣಿಕ ಜಿಲ್ಲೆಯ ಶಾಲೆಗಳ ಕುಡಿಯುವ ನೀರಿನ ಸ್ಥಿತಿಗತಿ ಬಗ್ಗೆ ಶಿಕ್ಷಣ ಇಲಾಖೆ ಅಧ್ಯಯನ ನಡೆಸಿದೆ. ಇದರನ್ವಯ 97 ಶಾಲೆಗಳ ಬಾವಿ ಸಂಪೂರ್ಣ ಬರಿದಾಗಿದೆ. ಉಳಿದ ಹಲವು ಶಾಲೆಗಳ ಬಾವಿಯಲ್ಲಿ ಅಲ್ಪಸ್ವಲ್ಪ ನೀರಿದ್ದು, ಮಳೆ ಆರಂಭವಾಗದಿದ್ದರೆ ಕೊರತೆ ಉಂಟಾಗಲಿದೆ.
ಶಿರಸಿ ತಾಲೂಕಿನ ಬನವಾಸಿ ಭಾಗದಲ್ಲಿ 7, ಬಂಡಲ ಭಾಗದಲ್ಲಿ 8 ಶಾಲೆಗಳಲ್ಲಿ ನೀರಿಲ್ಲ. ಉಳಿದ ಪಂಚಾಯಿತಿಗಳಲ್ಲಿ ತಲಾ ಒಂದೆರಡು ಶಾಲೆಗಳ ಬಾವಿಗಳು ಬತ್ತಿವೆ. ಯಲ್ಲಾಪುರ ತಾಲೂಕಿನ ಮಾವಿನಮನೆ, ವಜ್ರಳ್ಳಿ ಭಾಗದ ಶಾಲೆಗಳು, ಮುಂಡಗೋಡ ತಾಲೂಕಿನ ಚೌಡಳ್ಳಿ ಭಾಗದ ಶಾಲೆಗಳು, ಜೊಯಿಡಾ ತಾಲೂಕಿನ ಅಣಶಿ, ಕುಂಬಾರವಾಡಾ, ಪ್ರಧಾನಿ ಭಾಗದ ಶಾಲೆಗಳಲ್ಲಿ ನೀರಿನ ಸಮಸ್ಯೆ ಗಂಭೀರವಾಗಿದೆ. ಹೀಗಾಗಿ, ಶಿಕ್ಷಣ ಇಲಾಖೆ ಈ ಭಾಗದ ಶಾಲಾರಂಭಕ್ಕೆ ಹಿಂದೇಟು ಹಾಕುತ್ತಿದೆ.
ಕಳೆದ ಮೂರು ದಿನಗಳಿಂದ ಗ್ರಾಮೀಣ ಭಾಗದಲ್ಲಿ ಸಂಚರಿಸುತ್ತಿರುವ ಶಿಕ್ಷಣ ಸಂಯೋಜನಾಧಿಕಾರಿಗಳು ಆ ಭಾಗದ ಪ್ರಮುಖರು, ಗ್ರಾಮ ಪಂಚಾಯಿತಿ ಅಧಿಕಾರಿಗಳು, ಶಾಲಾ ಅಧ್ಯಕ್ಷರು, ಶಿಕ್ಷರೊಂದಿಗೆ ಚರ್ಚೆ ನಡೆಸಿ ವಿದ್ಯಾರ್ಥಿಗಳಿಗೆ ಅಗತ್ಯ ಪ್ರಮಾಣದ ನೀರು ಪೂರೈಸುವುದು ಹೇಗೆ ಎನ್ನುವುದರ ಬಗ್ಗೆ ಪಟ್ಟಿ ಮಾಡಿಕೊಂಡಿದೆ. ತಾತ್ಕಾಲಿಕವಾಗಿ ನೀರಿನ ವ್ಯವಸ್ಥೆ ಮಾಡಿದರೂ ಹಲವು ಶಾಲೆಗಳಲ್ಲಿ ಮಳೆ ಬಂದರಷ್ಟೇ ನೀರಿನ ಸಮಸ್ಯೆಗೆ ಪರಿಹಾರ ಸಿಗಲಿದೆ.
ಶಿರಸಿ ಶೈಕ್ಷಣಿಕ ಜಿಲ್ಲೆಯ ಸಿದ್ದಾಪುರ ಜೊಯಿಡಾ ಹಾಗೂ ಶಿರಸಿ ತಾಲೂಕಿನ ಹಲವು ಶಾಲೆಗಳಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ಸ್ಥಳೀಯ ಪಂಚಾಯಿತಿ ಅಧಿಕಾರಿಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸುವ ಕುರಿತು ಮನವಿ ಮಾಡಿದ್ದೇವೆ.ಬಸವರಾಜ, ಡಿಡಿಪಿಒ ಶಿರಸಿ ಶೈಕ್ಷಣಿಕ ಜಿಲ್ಲೆ