ಜಿಲ್ಲೆ

ಶಿರಸಿ-ಹುಬ್ಬಳ್ಳಿ ಸಂಚಾರ ಹರೋಹರ!

ವಿರೂಪಾಕ್ಷಯ್ಯ ಗುದ್ನಯ್ಯನವರಮಠ

ಶಿರಸಿ: ಶಿರಸಿಯಿಂದ ಹುಬ್ಬಳ್ಳಿಗೆ ಹೊರಟಿದ್ದೀರಾ? ಅಥವಾ ಹಾವೇರಿಗೆ ಹೊರಟಿದ್ದೀರಾ? ತುಂಬ ಹುಷಾರಾಗಿ ತೆರಳಿ. ಏಕೆಂದರೆ ಈ ರಸ್ತೆಗಳಲ್ಲಿ ಸಾಗುವಾಗ ನಿಮ್ಮ ವಾಹನ ಹಾಳಾಗುವುದು, ಹೊಂಡ ಹಾರಿ ಬೀಳುವುದು ಸಾಮಾನ್ಯ!

ಹೌದು. ಕಳೆದ ಮೂರೂವರೆ ತಿಂಗಳ ಅಬ್ಬರದ ಮಳೆಗೆ ತಾಲೂಕಿನ ರಸ್ತೆಗಳೆಲ್ಲ ದೊಡ್ಡ ದೊಡ್ಡ ಬಾವಿಗಳಂತಾಗಿವೆ. ಗ್ರಾಮೀಣ ಪ್ರದೇಶದ ಲೋಕೋಪಯೋಗಿ ಇಲಾಖೆಗೆ ಸೇರಿದ ರಸ್ತೆಗಳು ಸಂಪೂರ್ಣ ಹಾಳಾಗಿರುವುದು ಒಂದೆಡೆಯಾದರೆ, ನಗರದೊಳಗಿನ ರಸ್ತೆಗಳೂ ಸಹ ಹೊಂಡಮಯವಾಗಿವೆ. ಇದು ಹಾಗಿರಲಿ, ತಾಲೂಕಿನಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಗಳ ಸ್ಥಿತಿಯಂತೂ ಗುತ್ತಿಗೆದಾರರಿಗೇ ಭೀತಿ ಮೂಡಿಸುವಂತಿದೆ.

ಕುಮಟಾದಿಂದ ಹಾವೇರಿವರೆಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 766ಇ ಶಿರಸಿ ಮೂಲಕ ಹಾದು ಹೋಗಿದೆ. ಶಿರಸಿಯ ನೀಲೇಕಣಿಯಿಂದ ಕುಮಟಾದ ದೀವಗಿಯವರೆಗೆ ರಸ್ತೆ ನಿರ್ವಣದ ಜವಾಬ್ದಾರಿಯನ್ನು ಆರ್​ಎನ್​ಎಸ್ ಸಂಸ್ಥೆ ವಹಿಸಿಕೊಂಡು ಕಳೆದ ನಾಲ್ಕು ವರ್ಷಗಳಿಂದ ಕಾಮಗಾರಿ ನಡೆಸುತ್ತಿದೆ. ಘಟ್ಟ ಪ್ರದೇಶ ಮತ್ತು ಕುಮಟಾ ತಾಲೂಕಿನ ಕೋಡಂಬಳೆ ಬಳಿ, ದೇವಿಮನೆ ಘಟ್ಟದಲ್ಲಿ ಇನ್ನೂ ಕಾಮಗಾರಿ ಆಗಬೇಕಿದೆ. ಇದನ್ನು ಹೊರತುಪಡಿಸಿದರೆ ಉಳೆದೆಲ್ಲ ಕಡೆ ರಸ್ತೆ ಉತ್ತಮ ಸ್ಥಿತಿಯಲ್ಲಿದೆ.

ಶಿರಸಿಯಿಂದ ಹುಬ್ಬಳ್ಳಿ ಮತ್ತು ಹಾವೇರಿಗೆ ಹೋಗುವ ಮಾರ್ಗ ಸಂಪೂರ್ಣ ಹದಗೆಟ್ಟಿದೆ. ಪ್ರತಿ ದಿನ ನಾಲ್ಕು ಸಾವಿರಕ್ಕೂ ಅಧಿಕ ವಾಹನಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ. ತಾಲೂಕಿನ ಬಿಸಲಕೊಪ್ಪದಿಂದ ಒಂದು ರಸ್ತೆ ಹಾವೇರಿಯತ್ತ ಸಾಗಿದರೆ ಇನ್ನೊಂದು ಮಾರ್ಗ ಹುಬ್ಬಳ್ಳಿ ಕಡೆಗೆ ಸಾಗುತ್ತದೆ. ಹುಬ್ಬಳ್ಳಿ ರಸ್ತೆಯಂತೂ ಹೊಂಡಗಳಿಂದಲೇ ತುಂಬಿ ವಾಹನಗಳು ಧಡಲ್ ಭಡಲ್ ಎನ್ನುತ್ತ ಸಾಗುತ್ತಿವೆ. ಮಳೆ ಬಂದರೆ ರಸ್ತೆ ಯಾವುದೋ, ಹೊಂಡ ಯಾವುದೋ ಎಂದು ತಿಳಿಯದ ಸ್ಥಿತಿ. ಬಿಸಿಲು ಬಿದ್ದರೆ ಹಿಂದಿರುವ ವಾಹನಕ್ಕೆ ದಾರಿಯೇ ಕಾಣದಷ್ಟು ಧೂಳು ಆವರಿಸಿಕೊಳ್ಳುತ್ತಿದೆ. ಶಿರಸಿ-ಹುಬ್ಬಳ್ಳಿ ಮಾರ್ಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತವೆ. ವಾಹನಗಳು ಮಾರ್ಗ ಮಧ್ಯೆ ಕೆಟ್ಟು ನಿಲ್ಲುವ ಪ್ರಮಾಣ ಜಾಸ್ತಿಯಾಗುತ್ತಿದೆ.

ಸಮಸ್ಯೆ ಸುಳಿಯಾದ ಸಾಗರಮಾಲಾ !
ಕುಮಟಾದ ದೀವಗಿಯಿಂದ ಹಾವೇರಿವರೆಗಿನ ರಸ್ತೆಯನ್ನು ಕೇಂದ್ರ ಸರ್ಕಾರ ಸಾಗರಮಾಲಾ ಯೋಜನೆಯಡಿ ನಿರ್ಮಾಣ ಮಾಡುತ್ತಿದ್ದು, ರಾಷ್ಟ್ರೀಯ ಹೆದ್ದಾರಿ 766ಇ ಎಂದು ಮರು ನಾಮಕರಣವನ್ನೂ ಮಾಡಿದೆ. ಶಿರಸಿಯ ಅಗಸೇಬಾಗಿಲಿನ ಮೀನು ಮಾರುಕಟ್ಟೆಯಿಂದ ಹಾವೇರಿ ಜಿಲ್ಲೆ ನಾಲ್ಕರ ಕ್ರಾಸ್​ವರೆಗೆ ರಸ್ತೆ ನಿರ್ವಣದ ಜವಾಬ್ದಾರಿಯನ್ನು ಆಂಧ್ರಪ್ರದೇಶದ ಅಮ್ಮಾಪುರ ಕನ್​ಸ್ಟ್ರಕ್ಷನ್ ಕಂಪನಿ ಗುತ್ತಿಗೆ ಪಡೆದಿದೆ. ಆದರೆ, ಇದುವರೆಗೆ ಮಳಲಗಾಂವ ಬಳಿ ನಾಲ್ಕು ಸೇತುವೆ ನಿರ್ಮಾಣ ಮಾಡಿದ್ದರ ಹೊರತಾಗಿ ಈ ರಸ್ತೆಯ ಯಾವ ಕಾಮಗಾರಿಯೂ ಆಗಿಲ್ಲ.

ಶಾಸಕ ಭೀಮಣ್ಣ ನಾಯ್ಕ ಪ್ರತಿ ದಿನ ಓಡಾಡುವ ರಸ್ತೆ ಇದಾಗಿರುವುದರಿಂದ ಅವರಿಗೆ ಸಮಸ್ಯೆ ಸ್ವಯಂವೇದ್ಯವಾಗಿದೆ. ರಸ್ತೆ ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವ್ಯಾಪ್ತಿಗೆ ಒಳಪಟ್ಟಿರುವ ಕಾರಣ ಲೋಕೋಪಯೋಗಿ ಇಲಾಖೆ ಸಹ ಈ ಮಾರ್ಗದ ಹೊಂಡ ತುಂಬಿ ಸಂಚಾರಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳುತ್ತಿಲ್ಲ. ಇದರ ಪರಿಣಾಮವನ್ನು ಸಾರ್ವಜನಿಕರು ಎದುರಿಸಬೇಕಾಗಿದೆ.

ಇನ್ನೊಂದೆಡೆ ಗುತ್ತಿಗೆದಾರ ಅಮ್ಮಾಪುರ ಕನ್​ಸ್ಟ್ರಕ್ಷನ್ ಕಂಪನಿ ರಸ್ತೆ ಕಾಮಗಾರಿ ಆರಂಭಿಸಲು ರಸ್ತೆಯ ಇಕ್ಕೆಲಗಳಲ್ಲಿ ಅರಣ್ಯ ಇಲಾಖೆ ಮರಗಳನ್ನು ತೆರವುಗೊಳಿಸಿ ಕೊಡಲಿಲ್ಲ ಎನ್ನುತ್ತಿದೆ. ಅಲ್ಲದೆ, ರಸ್ತೆಯನ್ನು ಈಗಿರುವ ಎಂಟು ಮೀಟರ್​ನಿಂದ 16 ಮೀಟರ್​ಗೆ ವಿಸ್ತರಿಸಬೇಕಿದೆ. ಅರಣ್ಯ ಇಲಾಖೆ ಹೆಚ್ಚುವರಿ ಜಾಗವನ್ನು ನಿರ್ವನೀಕರಣ ಮಾಡಿ ನಮಗೆ ಹಸ್ತಾಂತರಿಸಿದ ಬಳಿಕವೇ ಕೆಲಸ ಆರಂಭಿಸಲು ಸಾಧ್ಯ ಎನ್ನುತ್ತಿದೆ. ಕಳೆದ ಮಾರ್ಚ್ ಅಂತ್ಯಕ್ಕೆ ರಸ್ತೆ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳ್ಳಬೇಕಿತ್ತು. ಆದರೆ, ಇದುವರೆಗೂ ಕೆಲಸವೇ ಶುರುವಾಗಿಲ್ಲ. ಹಳೆಯ ರಸ್ತೆಯ ಹೊಂಡಗಳೆಲ್ಲ ಬೃಹದಾಕಾರವಾಗಿ ಬೆಳೆಯುತ್ತಿದ್ದು, ವಾಹನ ಚಾಲಕರು ವಿಪರೀತ ತೊಂದರೆ ಅನುಭವಿಸುತ್ತಿದ್ದಾರೆ. ಗುತ್ತಿಗೆದಾರ ಕಂಪನಿ ಹೇಗೂ ಕೀಳಬೇಕಾದ ರಸ್ತೆ, ಹೊಂಡ ಏಕೆ ತುಂಬಿ ಹಣ ಹಾಳು ಮಾಡಬೇಕು ಎಂಬ ನಿರ್ಲಕ್ಷ್ಯ ತೋರಿದ್ದರೆ, ಲೋಕೋಪಯೋಗಿ ಇಲಾಖೆ ತನ್ನ ವ್ಯಾಪ್ತಿಯ ರಸ್ತೆಯಲ್ಲ ಎಂದು ಕೈ ಚೆಲ್ಲಿದೆ.

ಶಿರಸಿಯಿಂದ ಬಿಸಲಕೊಪ್ಪವರೆಗೂ ಹೆದ್ದಾರಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ರಸ್ತೆ ಇರುವುದರಿಂದ ಇಲ್ಲಿ ಬಿದ್ದಿರುವ ಹೊಂಡವನ್ನೂ ತುಂಬಲಾಗುತ್ತಿಲ್ಲ. ಇದೆಲ್ಲದರ ಪರಿಣಾಮ ಮಾತ್ರ ಸಾರ್ವಜನಿಕರು ಅನುಭವಿಸುತ್ತಿದ್ದಾರೆ. ಶಿರಸಿ-ಹಾವೇರಿ ರಸ್ತೆಯ ವಿಸ್ತರಣೆಯ ಅಗತ್ಯ ಜಾಗದ ನಿರ್ವನೀಕರಣಕ್ಕೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅರಣ್ಯ ಇಲಾಖೆಯೇ ಮುಂದಾಗಿ ನಿರ್ವನೀಕರಣಕ್ಕೆ ಅಗತ್ಯ ದಾಖಲೆಗಳನ್ನು ಸಲ್ಲಿಸಿದೆ. 15ರಿಂದ 20 ದಿನಗಳ ಒಳಗೆ ನಿರ್ವನೀಕರಣ ಆಗಬಹುದು ಎಂಬ ನಿರೀಕ್ಷೆ ಇದೆ.| ಡಾ. ಅಜ್ಜಯ್ಯ ಜೆ.ಆರ್., ಡಿಎಫ್​ಒ ಶಿರಸಿ