ಜಿಲ್ಲೆ

ಮಳೆ ಬಾರದಿದ್ದರೆ ಒಣಗಲಿದೆ ಭತ್ತ ಬೆಳೆ

ವಿರೂಪಾಕ್ಷಯ್ಯ ಗುದ್ನಯ್ಯನವರಮಠ

ಶಿರಸಿ: ಮಲೆನಾಡು ಹೆಬ್ಬಾಗಿಲು ಶಿರಸಿ ತಾಲೂಕಿನಲ್ಲಿ ಈ ವರ್ಷ ಮಳೆ ತೀರಾ ಕಡಿಮೆಯಾಗಿದ್ದರಿಂದ ರೈತರು ಚಿಂತಾಕ್ರಾಂತರಾಗಿದ್ದಾರೆ. ಪ್ರತಿ ವರ್ಷ ಜೂನ್ ಮೊದಲ ವಾರದಲ್ಲಿ ಮಳೆ ಪ್ರಾರಂಭವಾದರೆ ಸೆಪ್ಟೆಂಬರ್ ಅಂತ್ಯದವರೆಗೂ ಸುರಿಯುತ್ತಿತ್ತು. ಇದರಿಂದ ಕೃಷಿ ಚಟುವಟಿಕೆಗಳಿಗೆ ತುಂಬಾ ಅನುಕೂಲವಾಗುತ್ತಿತ್ತು. ಆದರೆ, ಈ ವರ್ಷ ಜೂನ್ ತಿಂಗಳ ಪ್ರಾರಂಭದಿಂದ ಹಿಡಿದು ಇದುವರೆಗೂ ಕೃಷಿ ಚಟುವಟಿಕೆಗಳಿಗೆ ಪೂರಕವಾಗುವಷ್ಟು ಮಳೆ ಬಂದಿಲ್ಲ.
ಶಿರಸಿ ತಾಲೂಕಿನಲ್ಲಿ ಒಟ್ಟು 6,215 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೀಜ ಬಿತ್ತನೆಯಾಗಿದೆ. 1,618 ಹೆಕ್ಟೇರ್ ಪ್ರದೇಶದಲ್ಲಿ ಬೀಜ ಬಿತ್ತನೆ ಯಾಗಿಲ್ಲ . ಹಲವು ಕಡೆ ರೈತರು ಬೋರ್‌ವೆಲ್ ನೀರು ಬಳಸಿ ಕೃಷಿ ಮಾಡುತ್ತಿದ್ದಾರೆ. ಆದರೆ, ಇನ್ನು ಕೆಲವೆಡೆ ಮಳೆಯ ನೀರೇ ಸಆಸರೆಯಾಗಿದೆ. ಮುಂದೆಯೂ ಮಳೆ ಬಾರದೇ ಹೋದರೆ ನಾಟಿ ಮಾಡಿದ ಭತ್ತದ ಗದ್ದೆಗಳು ಒಣಗುವುದರಲ್ಲಿ ಸಂಶಯವಿಲ್ಲ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ನಟರಾಜ ತಿಳಿಸಿದ್ದಾರೆ.
ಪ್ರತಿ ತಾಲೂಕಿನ ತಹಸೀಲ್ದಾರ್ ಖಾತೆಗಳಲ್ಲಿ ಮಳೆಗಾಲದ ಪೂರ್ವದಲ್ಲಿಯೇ ಪ್ರಕೃತಿ ವಿಕೋಪ ನಿಧಿ ಎಂದು 40 ರಿಂದ 50 ಲಕ್ಷ ರೂ. ಇಡಲಾಗುತ್ತದೆ. ಮಳೆಯಿಂದ ಹಾನಿ ಅಥವಾ ಇತರ ಬರಗಾಲದ ಸಮಯದಲ್ಲಿ ಇದನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಈಗಾಗಲೇ ಒಂದು ಬಾರಿ ಅಧಿಕಾರಿಗಳು ಬರ ಸಮೀಕ್ಷೆ ನಡೆಸಿದ್ದರು. ಈಗ ಮತ್ತೊಮ್ಮೆ ಬರ ಪರಿಶೀಲನೆ ನಡೆಸಲಾಗುತ್ತಿದೆ. ಆ. 11ರೊಳಗೆ ಮೇಲಧಿಕಾರಿಗಳಿಗೆ ಸಂಪೂರ್ಣ ಮಾಹಿತಿ ಸಲ್ಲಿಸಲಾಗುವುದು. ಬರಗಾಲ ಪ್ರದೇಶವೆಂದು ಅಧಿಕೃತ ಘೋಷಣೆಯಾದ ಮೇಲೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಅನುದಾನ ಬರುತ್ತದೆ. ಸಾರ್ವಜನಿಕರು ಹಾಗೂ ರೈತರಿಗೆ ತೊಂದರೆ ಆಗದ ರೀತಿಯಲ್ಲಿ ಕೆಲಸ ನಿರ್ವಹಿಸುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಶಿರಸಿ ಉಪವಿಭಾಗಾಧಿಕಾರಿ ದೇವರಾಜ್ ಆರ್. ತಿಳಿಸಿದ್ದಾರೆ.

ಈ ವರ್ಷ ಮಳೆ ಅಭಾವ ದಿಂದ ರೈತರಿಗೆ ಸಾಕಷ್ಟು ತೊಂದರೆಯಾಗಿದೆ. ನಾಟಿ ಮಾಡಿದ ಭತ್ತದ ಗದ್ದೆಗಳು ಕೆಲವೆಡೆ ಒಣಗುತ್ತಿದೆ. ಸಮೀಕ್ಷೆ ನಡೆಸಿ ವರದಿ ಸಲ್ಲಿಸಲಾಗುತ್ತಿದೆ.ನಟರಾಜ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶಿರಸಿ