ಜಿಲ್ಲೆ

ಗ್ಯಾರಂಟಿಗಾಗಿ ಇಂಧನ ದರ ಹೆಚ್ಚಳ

ವಿರೂಪಾಕ್ಷಯ್ಯ ಗುದ್ನಯ್ಯನವರಮಠ

ಶಿರಸಿ: ಗ್ಯಾರಂಟಿ ಯೋಜನೆಗೆ ಹಣ ಹೊಂದಾಣಿಕೆಗಾಗಿ ರಾಜ್ಯ ಸರ್ಕಾರ ಪೆಟ್ರೋಲ್ ದರವನ್ನು 3 ರೂ. ಹಾಗೂ ಡೀಸೆಲ್ 3.5 ರೂ. ಏರಿಕೆ ಮಾಡಿದೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ ಹರ್ತೆಬೈಲ್ ಹೇಳಿದರು.
ನಗರದ ಪಂಡಿತ್ ದೀನ ದಯಾಳ ಸಭಾಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಗತ್ಯ ವಸ್ತುಗಳ ದರ ಏರಿಕೆ ಮಾಡಿ, ಜನಸಾಮಾನ್ಯರ ಮೇಲೆ ಬರೆ ಎಳೆದಿದ್ದಾರೆ. ನನಗೂ ಫ್ರೀ, ನಿನಗೂ ಫ್ರೀ, ಕಾಕಾ ಪಾಟೀಲ್‌ಗೂ ಫ್ರೀ ಎಂದು ಹೇಳಿ ಕಟಾಕಟ್ ಗ್ಯಾಂಗ್ ಆರನೇ ಗ್ಯಾರಂಟಿಯಾಗಿ ಬೆಲೆ ಏರಿಕೆ ಮಾಡಿದೆ. ಇಂಧನ ಬೆಲೆ ಏರಿಕೆ ಹಿಂತೆಗೆದುಕೊಳ್ಳುವವರೆಗೂ ವಿವಿಧ ಹಂತದಲ್ಲಿ ಹೋರಾಟ, ಪ್ರತಿಭಟನೆ ನಡೆಸಲು ಬಿಜೆಪಿ ತೀರ್ಮಾನಿಸಿದೆ ಎಂದರು.
ಮೊದಲ ಹಂತದಲ್ಲಿ ನಗರದ ಹಳೇ ಬಸ್ ನಿಲ್ದಾಣದ ಸರ್ಕಲ್‌ನಲ್ಲಿ ಜೂ. 17ರಂದು ಬೆಳಿಗ್ಗೆ 10.30ಕ್ಕೆ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ಹಾಗೂ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಶಾಸಕರು, ಮಾಜಿ ಶಾಸಕರು, ಪಕ್ಷದ ಮುಖಂಡರು, ಮೋರ್ಚಾ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಆಟೋ, ಟ್ಯಾಕ್ಸಿ ಚಾಲಕ, ಮಾಲೀಕರ ಸಂಘಗಳು ಬೆಂಬಲ ನೀಡಿವೆ ಎಂದರು.
ಗ್ರಾಮೀಣ ಮಂಡಲ ಅಧ್ಯಕ್ಷೆ ಉಷಾ ಹೆಗಡೆ ಮಾತನಾಡಿ, ತೈಲ ಬೆಲೆ ಏರಿಕೆಯಿಂದ ಸಾರಿಗೆ, ಸರಕು ಸಾಗಾಟ ದುಬಾರಿಯಾಗುತ್ತದೆ. ಇದರಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತದೆ. ಜನಪರ ಆಡಳಿತ ನೀಡುತ್ತೇವೆ ಎಂದು ಹೇಳಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಅವರು ತೈಲ ಬೆಲೆ ಏರಿಕೆ ಮಾಡಿ ಗಾಯದ ಮೇಲೆ ಬರೆ ಎಳೆದಿದ್ದಾರೆ ಎಂದರು.
ನಗರ ಮಂಡಲಾಧ್ಯಕ್ಷ ಆನಂದ ಸಾಲೇರ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಶಾಂತ ನಾಯ್ಕ ಕುಮಟಾ, ನಗರ ಪ್ರಧಾನ ಕಾರ್ಯದರ್ಶಿ ನಾಗರಾಜ ನಾಯ್ಕ, ಸಾಮಾಜಿಕ ಜಾಲತಾಣದ ಜಿಲ್ಲಾ ಸಂಚಾಲಕ ರವಿಚಂದ್ರ ಶೆಟ್ಟಿ, ಆನಂದ ಗಾಂವ್ಕರ, ಸಂಜಯ ಸಜ್ಜನ ಮತ್ತಿತರರು ಇದ್ದರು.