ಜಿಲ್ಲೆ

ಶಿರಸಿ ಜಾತ್ರೆ-ಬೆಳಗಿದ ಮೇಟಿ ದೀಪ

Uttara Kannada - Subash Hegde

ಶಿರಸಿ: ಮಾರಿಕಾಂಬಾ ದೇವಿಯ ಜಾತ್ರಾ ಸಂಪ್ರದಾಯದ ಕೊನೆಯ ಹಂತದ ಆಚರಣೆಯಾಗಿ ಬುಧವಾರ ಅಂಕೆ ಹಾಕುವ, ಕಂಕಣಕಟ್ಟುವ, ಮೇಟಿ ದೀಪ ಬೆಳಗಿದ ನಂತರ ಪಟ್ಟದ ಕೋಣನೊಡನೆ ಶ್ರೀದೇವಿಯ ಉತ್ಸವ ಮೂರ್ತಿಯನ್ನು ದೇವಸ್ಥಾನಕ್ಕೆ ತಂದು ಗರ್ಭಗುಡಿಯ ಬಾಗಿಲನ್ನು ಮುಚ್ಚುವ ಕಾರ್ಯ ಬುಧವಾರ ನಡೆಯಿತು.
ಅಂಕೆಯ ಹೊರಬೀಡು ಮುಗಿಸಿ ಬೆಳಿಗ್ಗೆ ಹಿಂತಿರುಗಿದ ಶ್ರೀದೇವಿಯ ಉತ್ಸವ ಮೂರ್ತಿಯೊಡನೆ, ಶ್ರೀದೇವಿಯ ಪಟ್ಟದ ಕೋಣವನ್ನು ದೇವಸ್ಥಾನದಿಂದ ಕರೆದುಕೊಂಡು ಜಾತ್ರಾ ಮಂಟಪಕ್ಕೆ ತರಲಾಯಿತು. ಅಲ್ಲಿನ ಜಾತ್ರಾ ಗದ್ದುಗೆಯಲ್ಲಿನ ಮಂಟಪದಲ್ಲಿ ಶ್ರೀದೇವಿಯ ಉತ್ಸವ ಮೂರ್ತಿಯ ಎದುರು ಬಾಬುದಾರ ಮನೆತನದ ಪ್ರಮುಖರಿಗೆ, ಆಡಳಿತ ಮಂಡಳಿ ಧರ್ಮದರ್ಶಿಗಳಿಗೆ ಶ್ರೀದೇವಿಯ ಗಂಡನ ಮನೆಯ ವಿಧಿವಿಧಾನ ನಡೆಸುವ ಅಸಾದಿ ಬಾಬುದಾರ ಮನೆತನದವರು ಜಾತ್ರಾ ಕಂಕಣ ಕಟ್ಟಿದರು. ನಂತರ ಜಾತ್ರಾ ಸಂಪ್ರದಾಯದಂತೆ ಎಲ್ಲ ಬಾಬುದಾರ ಕುಟುಂಬದವರು, ಆಡಳಿತ ಮಂಡಳಿ ಧರ್ಮದರ್ಶಿಗಳು ಮೇಟಿ ಬಾಬುದಾರ ಕುಟುಂಬದವರು ಜಾತ್ರಾ ಉತ್ಸವದ ತಮ್ಮ ಮನೆತನಾಗತ ಸೇವೆ ನೆರವೇರಿಸಿದರು. ಮಂಟಪದಲ್ಲಿ ಅಸಾದಿ ಬಾಬುದಾರ ಮನೆತನದವರಿಂದ ಬರೆಯಲಾದ ಅಂಕೆಯ ರಂಗ ಮಂಡಲಕ್ಕೆ ದೀಪ ಬೆಳಗಿ, ಪೂಜಿಸಿ, ಶ್ರೀ ದೇವಿಯ ಉತ್ಸವ ಮೂರ್ತಿಗೆ ಪೂಜೆಗೈದು, ಆರತಿ ಬೆಳಗಿ, ಆ ಆರತಿಯ ಜ್ಯೋತಿಯಿಂದಲೇ ಮೇಟಿ ದೀಪ ಹಚ್ಚಿದರು. ನಂತರ ಪಟ್ಟದ ಕೋಣನಿಗೆ ಜಾತ್ರಾ ಕಂಕಣವನ್ನು ಕಟ್ಟಲಾಯಿತು.
ಬುಧವಾರ ಬೆಳಗಿದ ಮೇಟಿ ದೀಪವನ್ನು ಜಾತ್ರೆಯ ಅಂತ್ಯದವರೆಗೆ ಜೋಪಾನ ಮಾಡುವ ಹೊಣೆ ಮೇಟಿ ಬಾಬದಾರರದ್ದಾಗಿರುತ್ತದೆ. ಮೇಟಿ ದೀಪವನ್ನು ಮೇಟಿ ಬಾಬುದಾರರು ಮಾರಿಕಾಂಬಾ ಕಲ್ಯಾಣ ಮಂಟಪಕ್ಕೆ ಸಂಪ್ರದಾಯದಂತೆ ತಲುಪಿಸಿದರು. ಅಂಕೆ ಹಾಕಿದ ನಂತರ ಶ್ರೀದೇವಿಯ ಉತ್ಸವ ಮೂರ್ತಿಯು ಪಟ್ಟದ ಕೋಣನೊಡನೆ ಹೊರಟು ಶ್ರೀ ಮಾರಿಕಾಂಬಾ ದೇವಿಯ ಸಹೋದರಿಯರಾದ ಶ್ರೀ ಮರ್ಕಿ- ದುರ್ಗಿ ದೇವಿಯರ ದೇವಸ್ಥಾನಕ್ಕೆ ತಲುಪಿ, ಅಲ್ಲಿಂದ ಶ್ರೀಮರ್ಕಿ- ದುರ್ಗಿ ದೇವಿಯರನ್ನು ಜೊತೆಗೂಡಿಸಿಕೊಂಡು ಶ್ರೀ ಮಾರಿಕಾಂಬಾ ದೇವಾಲಯಕ್ಕೆ ಮರಳುವ ದೇವಸ್ಥಾನದ ಜಾತ್ರಾ ಸಂಪ್ರದಾಯ ನಡೆಯಿತು. ಶ್ರೀ ಮಾರಿಕಾಂಬಾ ದೇವಿಯ ಉತ್ಸವ ಮೂರ್ತಿ ಹೊತ್ತ ಪಲ್ಲಕ್ಕಿ ನೇರವಾಗಿ ಗರ್ಭಗೃಹವನ್ನು ಪ್ರವೇಶಿಸುತ್ತಿದ್ದಂತೆಯೇ ಗರ್ಭಗೃಹದ ಬಾಗಿಲನ್ನು ಮುಚ್ಚಲಾಯಿತು.
ದೇವಸ್ಥಾನದ ಸಭಾಭವನದಲ್ಲಿ ಮಾ.19 ರಂದು ರಾತ್ರಿ ಜರುಗುವ ಶ್ರೀದೇವಿ ಮಾರಿಕಾಂಬೆಯ ಜಾತ್ರಾ ಕಲ್ಯಾಣೋತ್ಸವದಲ್ಲಿ ದೇವಿ ಮತ್ತೆ ದರ್ಶನ ನೀಡಲಿದ್ದಾಳೆ. ಮಾ.20 ರಂದು ರಥೋತ್ಸವದಲ್ಲಿ ಆಗಮಿಸಿ ಜಾತ್ರಾ ಗದ್ದುಗೆಯಲ್ಲಿ ಪ್ರತಿಷ್ಠಾಪನೆಗೊಳ್ಳಲಿದ್ದಾಳೆ. ಮಾ.21 ರಿಂದ 27 ರವರೆಗೆ 8 ದಿನಗಳ ಕಾಲ ಜಾತ್ರಾ ಗದ್ದುಗೆಯಲ್ಲಿ ಸಿಗಲಿದೆ.
ಜಾತ್ರೆಯ ಈ ವಿಧಿ ವಿಧಾನಗಳ ಆಚರಣೆಯಲ್ಲಿ ಶ್ರೀದೇವಿಯ ಧರ್ಮದರ್ಶಿ ಮಂಡಳದ ಸದಸ್ಯರು, ಬಾಬದಾರ ಪ್ರಮುಖರಾದ ಅಜಯ ನಾಡಿಗ, ವಿಜಯ ನಾಡಿಗ, ಜಗದೀಶ ಗೌಡ, ಬಸವರಾಜ ಚಕ್ರಸಾಲಿ, ಇತರ ಬಾಬದಾರ ಕುಟುಂಬದವರು, ಪರಿಚಾರಕರು, ನೌಕರರು ಹಾಗೂ ಇತರರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.