ಶಿರಸಿ: ನಗರದೆ ಮಾರಿಕಾಂಬಾ ದೇವಿ ಜಾತ್ರೆಯ ವಿದಿ ವಿಧಾನಂತೆ ರಥ ನಿರ್ಮಾಣಕ್ಕಾಗಿ ಮರದ ದಿಮ್ಮಿಗಳನ್ನು ದೇವಾಲಯದ ಬಾಗಿಲಿಗೆ ಮಂಗಳವಾರ ತರಲಾಯಿತು.
ಮಂಗಳವಾರ ಅಂಕೆಯ ಹೊರಬೀಡೂ ಸಹ ನಡೆದಿದ್ದು, ಬೆಳಿಗ್ಗೆ 10.12 ರಿಂದ 12.13 ಗಂಟೆಯ ಒಳಗಿನ ಮುಹೂರ್ತದಲ್ಲಿ ಅಲಂಕೃತ ಎತ್ತಿನ ಗಾಡಿಗಳಲ್ಲಿ ವಾದ್ಯ ಮೇಳಗಳೊಡನೆ ಮೆರವಣಿಗೆಯ ಮೂಲಕ ಮರದ ದಿಮ್ಮಿಗಳನ್ನು ತರಲಾಯಿತು. ದೇವಾಲಯದ ಬಾಬುದಾರ ಜಗದೀಶ ಗೌಡ, ಆಡಳಿತ ಮಂಡಳಿ ಅಧ್ಯಕ್ಷ ರವಿ ನಾಯ್ಕ, ಉಪಾಧ್ಯಕ್ಷ ಸುದೇಶ ಜೋಗಳೇಕರ್ ಹಾಗೂ ಧರ್ಮದರ್ಶಿಗಳು ಮರದ ದಿಮ್ಮಿಗಳನ್ನು ಸ್ವೀಕರಿಸಿದರು.
ತಾಲೂಕಿನ ಬಿಕ್ನಳ್ಳಿಯ ಪ್ರದೀಪ ಬಂಗಾರೇಶ್ವರ ಗೌಡ ಅವರ ಮಾಲ್ಕಿ ಜಮೀನಿನಲ್ಲಿ ಬೆಳೆದ ತಾರೆ ಮರವನ್ನು ದೇವಸ್ಥಾನದ ಆಚರಣೆಯಂತೆ ಗುರುತಿಸಿ, ಆಯುಧ ಸಹಿತವಾಗಿ ವೃಕ್ಷ ಪೂಜೆ ನಡೆಸಿ, ಪರಂಪರಾಗತ ಆಚರಣೆಯಂತೆ ಮರಗಳ ಕಡಿತದ ಸೇವಾ ಕೈಂಕರ್ಯ ನೆರವೇರಿಸಲಾಗಿತ್ತು. ಬಡಗಿ ಬಾಬುದಾರರಿಂದ ಕಚ್ಚು ಹಾಕುವ ಮೂಲಕ ರಥದ ಮರ ಕಡಿಯುವ ಕಾರ್ಯಕ್ಕೆ ಶುಕ್ರವಾರ ಮುಂಜಾನೆ ಚಾಲನೆ ನೀಡಲಾಗಿತ್ತು. ತದನಂತರ ಮರವನ್ನು ವಿಧಿವಿಧಾನ ಪೂರ್ವಕವಾಗಿ ಕಡಿದು, ನಿಗದಿತ ಅಳತೆಯಂತೆ ತುಂಡರಿಸಿದ್ದರು.
ಮAಗಳವಾರ ಅಲಂಕರಿಸಿದ ಎತ್ತಿನ ಗಾಡಿಗಳಲ್ಲಿ ತರಲಾದ ಮರದ ಬೃಹತ್ ತುಂಡುಗಳಿಗೆ ಮೊದಲು ಕೋಟೆಕೆರೆ ಬಳಿ ಪೂಜೆ, ಆರತಿ ನೆರವೇರಿಸಿದರು. ನಂತರ ಈ ಮರದ ತುಂಡುಗಳನ್ನು ದೇವಸ್ಥಾನದ ಎದುರು ತಂದು ನಿಲ್ಲಿಸಲಾಯಿತು.
ದೇವಾಲಯದ ಮಹಾದ್ವಾರದ ಬಳಿ ಸಾಲಾಗಿ ನಿಲ್ಲಿಸಲಾದ ಮರದ ತುಂಡುಗಳಿಗೆ ಪೂಜೆ, ಆರತಿ ನೆರವೇರಿಸಿದರು. ಧರ್ಮದರ್ಶಿಗಳ ಉಪಸ್ಥಿತಿಯಲ್ಲಿ ಅರ್ಚಕರು, ಬಾಬದಾರರು ಹಾಗೂ ಬಾಬದಾರರ ಕುಟುಂಬದ ಮಹಿಳೆಯರು ಮರದ ತುಂಡುಗಳಿಗೆ ಪೂಜೆ ಸಲ್ಲಿಸಿ, ಆರತಿ ಬೆಳಗಿದರು.
ಬಾಬದಾರ ಪ್ರಮುಖರಾದ ವಿಜಯ ನಾಡಿಗ, ಬಸವರಾಜ ಚಕ್ರಸಾಲಿ, ಇತರ ಬಾಬದಾರ ಪ್ರಮುಖರು, ಬಾಬದಾರ ಕುಟುಂಬದವರು, ಪಾರುಪತ್ಯೆಗಾರರು, ಸಿಬ್ಬಂದಿ, ನೌಕರರು ಉಪಸ್ಥಿತರಿದ್ದರು. ಮಾ.19 ಮಂಗಳವಾರ ರಾತ್ರಿ ಕಲ್ಯಾಣೋತ್ಸವ ನಡೆದು ಬುಧವಾರ ಮುಂಜಾನೆ ರಥಾರೂಢಳಾಗಿ ಜಾತ್ರಾ ಗದ್ದುಗೆಗೆ ರಥೋತ್ಸವದ ಮೂಲಕ ತೆರಳಿ ಜಾತ್ರಾ ಗದ್ದುಗೆ ಏರುವುದರೊಂದಿಗೆ ಜಾತ್ರಾ ವೈಭವ ಆರಂಭಗೊಳ್ಳುತ್ತದೆ.
ಇದನ್ನೂ ಓದಿ: ಲಂಚ ಪಡೆಯುವಾಗ ಸಿಕ್ಕಿ ಬಿದ್ದ ಎಫ್ಡಿಸಿಗೆ ಜೈಲು ಶಿಕ್ಷೆ