ಜಿಲ್ಲೆ

ಶಿರಸಿ ಶೈಕ್ಷಣಿಕ ಜಿಲ್ಲೆಗೆ ಎಸ್‌ಎಸ್‌ಎಲ್‌ಸಿಯಲ್ಲಿ 7 ನೇ ಸ್ಥಾನ

Uttara Kannada - Subash Hegde

ಶಿರಸಿ: ಎಸ್‌ಎಸ್ ಎಲ್ ಸಿ ಫಲಿತಾಂಶದ್ಲಲಿ ಶಿರಸಿ ಶೈಕ್ಷಣಿಕ ಜಿಲ್ಲೆ ಕಳೆದ ವರ್ಷಕ್ಕಿಂತ ಒಂದು ಸ್ಥಾನ ಮೇಲೇರಿದೆ. ಶೇ. 80.47ರಷ್ಟು ಉತ್ತೀರ್ಣದೊಂದಿಗೆ ಈ ವರ್ಷ ರಾಜ್ಯದಲ್ಲಿ 7ನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ಆದರೆ, ವಿದ್ಯಾರ್ಥಿಗಳ ವಯಕ್ತಿಕ ಸಾಧನೆಯಲ್ಲಿ ಕುಸಿತವಾಗಿದೆ.

2024-25ನೇ ಸಾಲಿನಲ್ಲಿ ಶೈಕ್ಷಣಿಕ ಜಿಲ್ಲೆಯಿಂದ ಒಟ್ಟೂ 9368 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದರು. ಇವರಲ್ಲಿ 7538 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶಿರಸಿ, ಸಿದ್ದಾಪುರ ಮತ್ತು ಯಲ್ಲಾಪುರ ತಾಲೂಕಿನಲ್ಲಿ ವಿದ್ಯಾರ್ಥಿಗಳ ಉತ್ತೀರ್ಣದ ಪ್ರಮಾಣ ಸಮಾಧಾನಕರವಾಗಿದ್ದರೆ ಮುಂಡಗೋಡ ಮತ್ತು ಹಳಿಯಾಳ ತಾಲೂಕಿನ ವಿದ್ಯಾರ್ಥಿಗಳಿಂದ ನಿರೀಕ್ಷಿತ ಮಟ್ಟದ ಫಲಿತಾಂಶ ಬರದಿರುವುದು ಒಟ್ಟಾರೆ ಫಲಿತಾಂಶದ ಮೇಲೆ ಪರಿಣಾಮ ಬೀರಿದೆ. ಈ ವರ್ಷ ವಿದ್ಯಾರ್ಥಿಗಳ ಸಾಧನೆ ಜಾಸ್ತಿಗೊಳಿಸಬೇಕು, ಶಿರಸಿ ಶೈಕ್ಷಣಿಕ ಜಿಲ್ಲೆ ಮೊದಲ 5 ಸ್ಥಾನಗಳಲ್ಲಿ ಗುರುತಿಸಬೇಕು ಎಂಬ ಉದ್ದೇಶದೊಂದಿಗೆ ಅನೇಕ ವಿನೂತನ ಯತ್ನಗಳನ್ನು ನಡೆಸಲಾಗಿತ್ತು. ವಿವಿಧ ಹಂತಗಳಲ್ಲಿ ಪೂರ್ವ ಸಿದ್ಧತಾ ಪರೀಕ್ಷೆಗಳು ನಡೆದು ಫಲಿತಾಂಶ ಬಂದಾಗ ಅನುತ್ತೀರ್ಣವಾಗುವ ಸಾಧ್ಯತೆ ಇರುವ ವಿದ್ಯಾರ್ಥಿಗಳನ್ನು ಪಟ್ಟಿ ಮಾಡಿಟ್ಟುಕೊಂಡು ಅವರಿಗೆ ವಿಶೇಷ ತರಬೇತಿ ನೀಡಲಾಗಿತ್ತು. ಈ ಯತ್ನ ಮಲೆನಾಡಿನ ತಾಲೂಕುಗಳಲ್ಲಿ ಯಶ ಕಂಡರೂ ಅರೆಮಲೆನಾಡಿನ ತಾಲೂಕುಗಳಲ್ಲಿ ಕೈಕೊಟ್ಟಿವೆ.

ಸಿದ್ದಾಪುರ ತಾಲೂಕು 94.53ರ ಸಾಧನೆ ಮಾಡಿ ಜಿಲ್ಲೆಯಲ್ಲಿ ಮುಂಚೂಣಿಯಲ್ಲಿದೆ. ಇಲ್ಲಿ ಪರೀಕ್ಷೆ ಬರೆದ 1188 ವಿದ್ಯಾರ್ಥಿಗಳಲ್ಲಿ 1123 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶಿರಸಿ ತಾಲೂಕಿನಲ್ಲಿ 2642 ವಿದ್ಯಾರ್ಥಿಗಳಲ್ಲಿ 2336 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ. 88.42ರ ಸಾಧನೆ ಆಗಿದೆ. ಯಲ್ಲಾಪುರ ತಾಲೂಕು 87.38ರ ಉತ್ತೀರ್ಣದ ಸಾಧನೆ ಮಾಡಿದ್ದು, ಇಲ್ಲಿ 927 ವಿದ್ಯಾರ್ಥಿಗಳ ಪೈಕಿ 810 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಜೊಯಿಡಾ ತಾಲೂಕಿನಲ್ಲಿ 775 ವಿದ್ಯಾರ್ಥಿಗಳಲ್ಲಿ 589 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ. 76ರ ಸಾಧನೆಯಾಗಿದೆ. ಹಳಿಯಾಳ ತಾಲೂಕಿನಲ್ಲಿ 2590 ವಿದ್ಯಾರ್ಥಿಗಳಲ್ಲಿ 1863 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ 71.93ರ ಸಾಧನೆಯಾದರೆ ಮುಂಡಗೋಡ ತಾಲೂಕು ಕೊನೇಯ ಸ್ಥಾನದಲ್ಲಿದ್ದು, 1246 ವಿದ್ಯಾರ್ಥಿಗಳಲ್ಲಿ 816 ವಿದ್ಯಾರ್ಥಿಗಳು ಮಾತ್ರ ಉತ್ತೀರ್ಣರಾಗಿ ಶೇ. 65.57ರ ಸಾಧನೆಯಾಗಿದೆ.

ನಗರದ ಸರ್ಕಾರಿ ಉರ್ದು, ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿನಿ ಶುಗುಪ್ತಾ 625 ಅಂಕಗಳನ್ನು ಪಡೆದುಕೊಳ್ಳುವ ಮೂಲಕ ರಾಜ್ಯಕ್ಕೇ ಮೊದಲ ಸ್ಥಾನ ಪಡೆದಿದ್ದಾರೆ. ಶಿರಸಿಯ ಮಾರಿಕಾಂಬಾ ಪ್ರೌಢ ಶಾಲೆಯ ವಿದ್ಯಾರ್ಥಿನಿ ತನುಶ್ರೀ ನರಸಿಂಹ ಜೋಶಿ 624 ಅಂಕ ಪಡೆದುಕೊಂಡಿದ್ದಾರೆ. ಸಿದ್ದಾಪುರ ತಾಲೂಕು ಶ್ರೀ ಜಗದಂಬಾ ಪ್ರೌಢ ಶಾಲೆಯ ವಿದ್ಯಾರ್ಥಿನಿ ಶ್ರೇಯಾ ಹೆಗಡೆ 619 ಅಂಕ ಗಳಿಸಿ ರಾಜ್ಯಕ್ಕೆ 7ನೇ ಸ್ಥಾನ, ವರ್ಷಾ ಹೆಗಡೆ 616 ಅಂಕ ಗಳಿಸಿ ರಾಜ್ಯಕ್ಕೆ 10ನೇ ಸ್ಥಾನ, ಹರ್ಷಿತಾ ಹೆಗಡೆ ಮರ್ಲಮನೆ 614 ಅಂಕ ಗಳಿಸಿ ಸಾಧನೆ ಮಾಡಿದ್ದಾರೆ.

ಕೋಟ್: ಫಲಿತಾಂಶ ಸುಧಾರಣೆಗೆ ಈ ಬಾರಿ ನಾವು ಹೆಚ್ಚಿನ ಯತ್ನ ನಡೆಸಿದ್ದೆವು. ರಾಜ್ಯ ಮಟ್ಟದಲ್ಲಿ 7ನೇ ಸ್ಥಾನಕ್ಕೇರಿದರೂ ಕೆಲ ತಾಲೂಕುಗಳ ಫಲಿತಾಂಶ ಸಮಾಧಾನ ತಂದಿಲ್ಲ. ಮುಂದಿನ ವರ್ಷ ಇನ್ನೂ ಹೆಚ್ಚಿನ ಯತ್ನ ನಡೆಸಲಿದ್ದೇವೆ. - ಪಿ. ಬಸವರಾಜು ಡಿಡಿಪಿಐ ಶಿರಸಿ

ಈ ಪರೀಕ್ಷೆಯಲ್ಲಿ ನಿರೀಕ್ಷಿತ ಫಲಿತಾಂಶವನ್ನು ಪಡೆಯಲು ಸಾಧ್ಯವಾಗದ ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಧೃತಿಗೆಡಬಾರದು. ಆತ್ಮವಿಶ್ವಾಸವನ್ನು ಕಾಯ್ದುಕೊಂಡು ಮುನ್ನಡೆಯಿರಿ. ನಿಮಗೆ ಮರು ಪರೀಕ್ಷೆಯನ್ನು ಬರೆಯುವ ಅವಕಾಶವಿದೆ. ನಿಮ್ಮ ನಿರಂತರ ಪ್ರಯತ್ನ ಮತ್ತು ಪರಿಶ್ರಮದಿಂದ ಯಶಸ್ಸನ್ನು ಖಂಡಿತವಾಗಿಯೂ ಸಾಧಿಸಬಹುದು. ಉತ್ತರ ಕನ್ನಡ 3 ನೆ ಸ್ಥಾನ ಶಿರಸಿ ಶೈಕ್ಷಣಿಕ ಜಿಲ್ಲೆಯು ರಾಜ್ಯಕ್ಕೆ 7 ನೇ ಸ್ಥಾನವನ್ನು ಪಡೆದು ಉತ್ತಮ ಸಾಧನೆ ಮಾಡಿರುವುದು ಪ್ರಶಂಸನೀಯ. -ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದರು.