ಜಿಲ್ಲೆ

ಮೈಲು ತುತ್ತಕ್ಕೆ ಸಹಾಯಧನ ಬಂದೀತೆ?

ವಿರೂಪಾಕ್ಷಯ್ಯ ಗುದ್ನಯ್ಯನವರಮಠ

ಶಿವಪ್ರಸಾದ ಹೆಗಡೆ ಶಿರಸಿ
ಮಲೆನಾಡಿನ ಮುಖ್ಯ ಬೆಳೆ ಅಡಕೆಗೆ ತಗುಲುವ ಕೊಳೆರೋಗ ನಿಯಂತ್ರಣಕ್ಕಾಗಿ ಬಳಸುವ ಮೈಲು ತುತ್ತಕ್ಕೆ ಸರ್ಕಾರ ನೀಡುವ ಸಹಾಯಧನ ಈ ವರ್ಷವೂ ರೈತರ ಕೈಗೆ ಸಿಗುವುದು ಅನುಮಾನವಾಗಿದೆ.
ಜೂನ್ ಕೊನೇ ವಾರ ಸಮೀಪಿಸಿದರೂ ಅನುದಾನ ಬಿಡುಗಡೆಯಾಗದಿರುವುದು ರೈತರಿಗೆ ನಿರಾಸೆ ಮೂಡಿಸಿದೆ.
ಅಡಕೆಗೆ ಉತ್ತಮ ದರವಿದ್ದರೂ ಕೊಳೆ ರೋಗ ಬಂದರೆ ರೈತರ ಪರಿಸ್ಥಿತಿ ಗಂಭೀರವಾಗುತ್ತದೆ. ಮಳೆಯ ಅಬ್ಬರಕ್ಕೆ ಒಮ್ಮೆ ಕೊಳೆ ರೋಗ ಆವರಿಸಿದರೆ ಮಳೆಗಾಲದ ಅಂತ್ಯದವರೆಗೂ ರೋಗ ಕಾಡುತ್ತದೆ. ಕೊಳೆ ರೋಗಕ್ಕೆ ಕಾರಣವಾಗುವ ಫೈಟಾಪ್ತೆರಾ ರೋಗಾಣುಗಳು ಬೇಸಿಗೆಯಲ್ಲಿ ಅಡಕೆ ಮರದ ಚಂಡೆಗಳಲ್ಲಿ ಅವಿತು ಮಾರನೇ ವರ್ಷ ಮಳೆಗಾಲದ ಆರಂಭದೊಂದಿಗೇ ಮತ್ತೆ ಕೊಳೆ ರೋಗಕ್ಕೆ ಕಾರಣವಾಗುತ್ತವೆ. ಕಳೆದ ವರ್ಷದ ಮಳೆಗೆ ತಾಲೂಕಿನ ಬಹುತೇಕ ಕಡೆ ಕೊಳೆ ರೋಗ ಕಾಣಿಸಿಕೊಂಡಿತ್ತಲ್ಲದೆ, ಈ ವರ್ಷವೂ ಮರುಕಳಿಸುವ ಸಾಧ್ಯತೆ ದಟ್ಟವಾಗಿವೆ.
ಒಂದು ಕೆಜಿ ಮೈಲು ತುತ್ತಕ್ಕೆ ಒಂದು ಕೆಜಿ ಸುಣ್ಣ ಸೇರಿಸಿ 100 ಲೀಟರ್‌ನಷ್ಟು ನೀರಿನಲ್ಲಿ ಈ ದ್ರಾವಣ ಸಿದ್ಧಪಡಿಸಲಾಗುತ್ತದೆ. ಅಡಕೆ ಗೊನೆಗಳಿಗೆ ಸಿಂಪಡಣೆ ಮಾಡುವ ಮೂಲಕ ಕೊಳೆ ರೋಗ ಬಾರದಂತೆ ತಡೆಯಲಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಎಲ್ಲ ದರಗಳೂ ಹೆಚ್ಚಾಗಿವೆ. ಮೈಲು ತುತ್ತ ಪ್ರತಿ ಕೆಜಿಗೆ 330 ರೂ.ಗೆ ಏರಿಕೆ ಆಗಿದ್ದರೆ ಸಿಂಪಡಣೆ ಮಾಡುವ ವಿಶೇಷ ಕಾರ್ಮಿಕರಿಗೆ ಪ್ರತಿ 100 ಲೀಟರ್‌ಗೆ 1800 ರೂ. ಕೂಲಿ ಇದೆ.
ಮೈಲು ತುತ್ತ ಖರೀದಿಸಿ ಪಹಣಿ ಪತ್ರಿಕೆ, ಅಗತ್ಯ ದಾಖಲಾತಿಗಳೊಂದಿಗೆ ತೋಟಗಾರಿಕೆ ಇಲಾಖೆಗೆ ಅರ್ಜಿ ಸಲ್ಲಿಸಿದರೆ ಪ್ರತಿ ಎಕರೆಗೆ ಸರ್ಕಾರದಿಂದ 2400 ರೂ. ಸಹಾಯಧನ ನೀಡಲಾಗುತ್ತಿತ್ತು. ಈ ವರ್ಷ ಈ ಸಹಾಯಧನಕ್ಕೆ ಕೊಕ್ಕೆ ಬೀಳುವ ಎಲ್ಲ ಲಕ್ಷಣಗಳು ಗೋಚರವಾಗುತ್ತಿವೆ.
ಉಳಿದಿದೆ ಬಾಕಿ: ರಾಜ್ಯ ಸರ್ಕಾರ ಈ ವರ್ಷ ಉಚಿತ ಭಾಗ್ಯಗಳ ಯೋಜನೆಗಳನ್ನು ಜಾರಿಗೆ ತಂದಿರುವುದರಿಂದ ಮೈಲು ತುತ್ತದ ಸಹಾಯಧನ ಮರೀಚಿಕೆ ಆಗುವ ಸಾಧ್ಯತೆಗಳೇ ದಟ್ಟವಾಗಿವೆ. ಕಳೆದ ವರ್ಷ ಸಹ ಮೈಲು ತುತ್ತ ಸಹಾಯಧನಕ್ಕೆ ನಿಗದಿತ ಅನುದಾನ ಬಿಡುಗಡೆ ಆಗಿರಲಿಲ್ಲ. 2021-22ನೇ ಸಾಲಿನಲ್ಲಿ ಮೈಲು ತುತ್ತ ಸಹಾಯಧನ ಕೋರಿ 152 ರೈತರು ಅರ್ಜಿ ಸಲ್ಲಿಸಿದ್ದರು. ಒಟ್ಟು 3.50 ಲಕ್ಷ ರೂ. ಸಹಾಯಧನ ರೈತರಿಗೆ ವಿತರಿಸಬೇಕಾಗಿತ್ತಾದರೂ ತಾಲೂಕಿಗೆ ಮಂಜೂರಾಗಿದ್ದು 1.02ಲಕ್ಷ ರೂ. ಮಾತ್ರ. ಹೀಗಾಗಿ, ಕಳೆದ ವರ್ಷ ಅರ್ಜಿ ಸಲ್ಲಿಸಿದವರಿಗೇ ಇನ್ನೂ 2.5 ಲಕ್ಷ ರೂ. ಬಾಕಿ ಉಳಿದುಕೊಂಡಿದೆ.
ಈ ಹಿಂದೆ ತಾಲೂಕು ಪಂಚಾಯಿತಿ ಯಿಂದ ಮೈಲು ತುತ್ತಕ್ಕೆ ಸಹಾಯಧನವಾಗಿ 70 ಸಾವಿರ ರೂ.ಗಳನ್ನು ತೋಟಗಾರಿಕೆ ಇಲಾಖೆಗೆ ನೀಡುತ್ತಿತ್ತು. ಜತೆಗೆ ರಾಷ್ಟ್ರೀಯ ತೋಟಗಾರಿಕೆ ಮಿಷನ್ ರಾಜ್ಯ ವಲಯದ ಅನುದಾನ ಬಳಕೆ ಮಾಡಿಕೊಂಡು ರೈತರಿಗೆ ಅನುದಾನ ನೀಡಲಾಗುತ್ತಿತ್ತು. ತಾಲೂಕು ಪಂಚಾಯಿತಿ ಈ ಅನುದಾನವನ್ನು ಕಳೆದ ಎರಡು ವರ್ಷಗಳಿಂದ ಸ್ಥಗಿತಗೊಳಿಸಿದೆ. ಈ ವರ್ಷ ಎನ್‌ಎಚ್‌ಎಂ ರಾಜ್ಯ ವಲಯದ ಅನುದಾನ ಬರುವುದೂ ಸಂಶಯ ಮೂಡಿಸಿದೆ.

ಶಿರಸಿ ತಾಲೂಕಿನ 9 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅಡಕೆ ಬೆಳೆ ಇದೆ. 15 ರಿಂದ 20 ಲಕ್ಷ ರೂ. ಮೈಲು ತುತ್ತದ ಸಹಾಯಧನಕ್ಕಾಗಿ ಅನುದಾನ ಬೇಕಾಗುತ್ತದೆ. ಈ ವರ್ಷ ಸಹಾಯಧನ ಮಂಜೂರಿಯ ನಿರೀಕ್ಷೆಯಲ್ಲಿದ್ದೇವೆ.ಸತೀಶ ಹೆಗಡೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ, ಶಿರಸಿ