ಜಿಲ್ಲೆ

ಅಂಗನವಾಡಿ ರಜಿಸ್ಟರ್ ಖರೀದಿಗೆ ಕಾಸಿಲ್ಲ !

ವಿರೂಪಾಕ್ಷಯ್ಯ ಗುದ್ನಯ್ಯನವರಮಠ

ಶಿರಸಿ: ಬಾಣಂತಿ ದಾಖಲೆಗಳು, ಶಿಶುಗಳ ಆರೈಕೆ, ಆಹಾರ ವಿತರಣೆ ಹೀಗೇ 12 ವಿಧದ ಸೇವೆ ನೀಡುವ ಅಂಗನವಾಡಿ ಕಾರ್ಯಕರ್ತೆಯರಿಗೆ ಈಗ ದಾಖಲಿಸಿಕೊಳ್ಳಲು ರಜಿಸ್ಟರ್‌ಗಳೇ ಇಲ್ಲ. ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಹಿತಿಗಳನ್ನೆಲ್ಲ ಹಾಳೆಯಲ್ಲಿ ಬರೆದಿಟ್ಟುಕೊಳ್ಳಬೇಕಾದ ಸ್ಥಿತಿ ಬಂದೊದಗಿದೆ !
ಹೌದು. ಮೇ ರಜೆಯ ಬಳಿಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಎಲ್ಲ ಅಂಗನವಾಡಿಗಳ ಕಾರ್ಯಕರ್ತೆಯರಿಗೂ ರಜಿಸ್ಟರ್ ಪುಸ್ತಕಗಳನ್ನು ವಿತರಿಸಬೇಕಿತ್ತು. ಈಗ ಜೂನ್ ತಿಂಗಳ ಅರ್ಧ ಕಳೆದರೂ ರಜಿಸ್ಟರ್‌ಗಳ ಪೂರೈಕೆ ಯಾವ ಅಂಗನವಾಡಿಗೂ ಆಗಿಲ್ಲ. ಇದರಿಂದಾಗಿ ಕಾರ್ಯಕರ್ತೆಯರು ಅನಿವಾರ್ಯವಾಗಿ ಕೊಟ್ಟ ಆಹಾರ ಪ್ಯಾಕೆಟ್, ಜನಿಸಿದ ಮಕ್ಕಳ ಮಾಹಿತಿಯನ್ನೆಲ್ಲ ಹಾಳೆಗಳ ಮೇಲೆ ದಾಖಲೆಗಳನ್ನೆಲ್ಲ ಬರೆದಿಟ್ಟುಕೊಳ್ಳುತ್ತಿದ್ದು, ಇಲಾಖೆಯಿಂದ ರಜಿಸ್ಟರ್ ಬಂದ ಮೇಲೆ ಈ ದಾಖಲೆಗಳನ್ನೆಲ್ಲ ಬರೆಯಲು ನಿರ್ಧರಿಸಿದ್ದಾರೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಲವು ಇಲಾಖೆಗಳಿಗೆ ಮಾತೃ ಇಲಾಖೆ ಇದ್ದಂತೆ. ಗ್ರಾಮದಲ್ಲಿ ಗರ್ಭಿಣಿಯರಿದ್ದರೆ ಅವರಿಗೆ ನೀಡಬೇಕಾದ, ನೀಡಿದ ಚುಚ್ಚುಮದ್ದುಗಳ ದಾಖಲೆ ಮಾಡಿಟ್ಟುಕೊಳ್ಳಬೇಕಿದೆ. ಬಾಣಂತಿಯರಿಗೆ ಆಹಾರ ನೀಡುವಿಕೆ, ಶಿಶುಗಳ ಬಗ್ಗೆ ಮಾಹಿತಿ, ಭಾಗ್ಯಲಕ್ಷ್ಮೀ ಬಾಂಡ್ ದಾಖಲಾತಿ, ಕಿಶೋರಿಯರಿಗೆ ಒದಗಿಸಲಾದ ಆಹಾರ ಧಾನ್ಯ ಎಲ್ಲವನ್ನೂ ಕಾರ್ಯಕರ್ತೆಯರು ರಜಿಸ್ಟರ್‌ನಲ್ಲಿ ದಾಖಲಿಸಬೇಕು. ಗೌರವ ವೇತನದ ಆಧಾರದಲ್ಲಿ ಕಾರ್ಯಕರ್ತೆಯರು ಕೆಲಸ ಮಾಡುತ್ತಿದ್ದರೂ ಪ್ರತಿ ದಿನ 12 ರಜಿಸ್ಟರ್‌ಗಳ ದಾಖಲೀಕರಣ ಮಾಡಬೇಕು. ಹೀಗಾಗಿ, ಕಡಿಮೆ ವೇತನದಲ್ಲಿ ಜಾಸ್ತಿ ಕೆಲಸ ಮಾಡುವವರ ಪಟ್ಟಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರಿದ್ದಾರೆ. ಇಷ್ಟಾದರೂ ಚಾಚೂ ತಪ್ಪದೆ, ತಮ್ಮ ಕಾರ್ಯ ನಿರ್ವಹಿಸುವ ತಾಲೂಕಿನ ಕಾರ್ಯಕರ್ತೆಯರಿಗೆ ಈಗ ರಜಿಸ್ಟರ್ ಸಮಸ್ಯೆ ತಲೆದೋರಿದೆ.

ಏಕೆ ಹೀಗೆ ?: ಸರ್ಕಾರ ಈ ವರ್ಷ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ರಜಿಸ್ಟರ್ ಖರೀದಿಗೆ ಅನುದಾನ ಬಿಡುಗಡೆ ಮಾಡಿಲ್ಲ. ಪ್ರತಿ ಅಂಗನವಾಡಿಯಲ್ಲಿ 12 ರಜಿಸ್ಟರ್ ಖರೀದಿಗೆ 1 ಸಾವಿರ ರೂ. ಅಗತ್ಯವಿದೆ. ತಾಲೂಕಿನಲ್ಲಿ ಒಟ್ಟು 378 ಅಂಗನವಾಡಿಗಳಿದ್ದು, ರಜಿಸ್ಟರ್ ಸಲುವಾಗಿಯೇ ಸುಮಾರು 4 ಲಕ್ಷ ರೂ. ಅಗತ್ಯವಿದೆ. ಬೇರೆ ತಾಲೂಕುಗಳಲ್ಲಿ ಈ ಸಮಸ್ಯೆ ಇದೆಯಾದರೂ, ಕಳೆದ ವರ್ಷದ ಅನುದಾನದಲ್ಲಿ ಹೆಚ್ಚುಳಿದ ಮೊತ್ತ, ವಿವಿಧ ಸಾದಿಲ್ವಾರ ಹೆಚ್ಚುಳಿದ ಮೊತ್ತವನ್ನು ಬಳಸಿಕೊಂಡು ತ್ವರಿತವಾಗಿ ಬೇಕಾದ ರಜಿಸ್ಟರ್ ಖರೀದಿಸಿದ್ದಾರೆ. ಆದರೆ, ಶಿರಸಿ ತಾಲೂಕಿನಲ್ಲಿ ಅಂಗನವಾಡಿ ಸಂಖ್ಯೆ ಜಾಸ್ತಿ ಇರುವುದರಿಂದ ಅನುದಾನ ಉಳಿದಿಲ್ಲ. ಅಂಗನವಾಡಿ ಕಾರ್ಯಕರ್ತೆಯರ ಹಾಜರಾತಿ ರಜಿಸ್ಟರ್, ಆಹಾರ ವಿತರಣೆ, ದಾಸ್ತಾನು ಮಾಹಿತಿ, ಮಕ್ಕಳ ಹಾಜರಾತಿ ರಜಿಸ್ಟರ್ ತುರ್ತು ಅಗತ್ಯವಿದ್ದು, ಅದನ್ನಾದರೂ ಕೊಡುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ತಾಪಂಗೆ ವಿನಂತಿಸಿದ್ದಾರೆ.

13 ಅಂಗನವಾಡಿಗಳಲ್ಲಿ ಪಾತ್ರೆಗಳೇ ಇಲ್ಲ
ಶಿರಸಿ ತಾಲೂಕಿನಲ್ಲಿ ಕಳೆದ ವರ್ಷದಿಂದ 27 ಹೊಸ ಅಂಗನವಾಡಿಗಳನ್ನು ಆರಂಭಿಸಲಾಗಿದೆ. ಈ ಅಂಗನವಾಡಿಯಲ್ಲಿ ಮಕ್ಕಳಿಗೆ ಊಟ ತಯಾರಿಸಲು ಇಲಾಖೆಯಿಂದಲೇ ಪಾತ್ರೆಗಳು, ಮಕ್ಕಳ ವಿಶ್ರಾಂತಿಗೆ ಚಾಪೆಗಳನ್ನು ಪೂರೈಸಲಾಗುತ್ತದೆ. ಆದರೆ, ಹೊಸ ಅಂಗನವಾಡಿಗಳಲ್ಲಿ 8 ಅಂಗನವಾಡಿಗಳಿಗೆ ಮಾತ್ರ ಪಾತ್ರೆ, ಚಾಪೆಗಳನ್ನು ಪೂರೈಸಲಾಗಿದೆ. ಇನ್ನೂ 19 ಅಂಗನವಾಡಿಗಳಿಗೆ ಅಗತ್ಯ ವಸ್ತುಗಳ ಪೂರೈಕೆ ಆಗಬೇಕಿದೆ. ಸ್ಥಿತಿ ಅರಿತ 5 ಗ್ರಾಮಗಳಲ್ಲಿ ಗ್ರಾಮಸ್ಥರೇ ಪಾತ್ರೆ, ಚಾಪೆ ಖರೀದಿಸಿ ಅಂಗನವಾಡಿಗೆ ಪೂರೈಸಿದ್ದಾರೆ. ಬಾಕಿ ಉಳಿದ ಅಂಗನವಾಡಿಗಳಿಗೆ ಶೀಘ್ರವೇ ಪಾತ್ರೆ, ಅಗತ್ಯ ವಸ್ತುಗಳನ್ನು ಪೂರೈಸುತ್ತೇವೆ ಎನ್ನುತ್ತಾರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು.

ಪ್ರತಿ ಅಂಗನವಾಡಿ ಕಾರ್ಯಕರ್ತೆಯರಿಗೆ ಕನಿಷ್ಠ 4 ರಜಿಸ್ಟರ್ ಪುಸ್ತಕಗಳನ್ನು ಕೊಡುವಂತೆ ತಾಪಂ ತಿಳಿಸಿದ್ದೇವೆ. ಹೊಸ ಅಂಗನವಾಡಿಯ ಪಾತ್ರೆಗಳ ಖರೀದಿಗೆ ಹಂತ ಹಂತವಾಗಿ ಅನುದಾನ ಬಿಡುಗಡೆ ಆಗುತ್ತಿದೆ. ಈಗಾಗಲೇ 8 ಅಂಗನವಾಡಿಗಳಿಗೆ ಪೂರೈಸಿದ್ದೇವೆ.ವೀಣಾ ಶಿರ್ಸಿಕರ್ಸಿ ಡಿಪಿಒ ಶಿರಸಿ