ಶೃಂಗೇರಿ: ಸಹ್ಯಾದ್ರಿ ತಪ್ಪಲಿನ ರಮಣೀಯ ಪರಿಸರದಲ್ಲಿರುವ, ನಾಲ್ಕು ದಿಕ್ಕುಗಳಲ್ಲಿಯೂ ಅರಣ್ಯ, ಗಿರಿಗಳಿಂದ ಆವರಿಸಿರುವ ಮಳೆದೇವರು ಎಂದು ಖ್ಯಾತಿ ಹೊಂದಿರುವ ಋಷ್ಯಶೃಂಗರ ಪವಿತ್ರ ಕ್ಷೇತ್ರ ಕಿಗ್ಗಾ. ಇಲ್ಲಿಂದ ಸುಮಾರು 5 ಕಿ.ಮೀ. ದೂರದಲ್ಲಿರುವ ಸಿರಿಮನೆ ಜಲಪಾತ ಮೈದುಂಬುತ್ತಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.
ಹೆಸರಿಗೆ ತಕ್ಕಂತೆ ಸಿರಿಮನೆ ಜಲಪಾತ ನೋಡುಗರ ಪಾಲಿನ ಸೌಂದರ್ಯ ಲಹರಿ. ಸುಮಾರು 53 ಅಡಿ ಎತ್ತರದಿಂದ ಧುಮುಕ್ಕುವ ಜಲಧಾರೆ. ಮಳೆಗಾಲ ಪ್ರಾರಂಭವಾಗಿದ್ದು, ಸಿರಿಮನೆ ಜಲಪಾತದ ಪ್ರಾಕೃತಿಕ ಸೊಬಗನ್ನು ಕಣ್ಮನ ತುಂಬಿಸಿಕೊಳ್ಳಲು ನಾನಾ ಭಾಗಗಳಿಂದ ಪ್ರವಾಸಿಗರು ಆಗಮಿಸುತ್ತಿದ್ದಾರೆ.
ಜಲಪಾತ ವೀಕ್ಷಿಸಲು ಮೆಟ್ಟಲುಗಳನ್ನು ನಿರ್ಮಿಸಲಾಗಿದೆ. ದಟ್ಟವಾದ ಅರಣ್ಯಗಳ ನಡುವೆ ಮ್ಯೆತುಂಬಿ ಹರಿಯುವ ಜಲಪಾತ ವೀಕ್ಷಕರಿಗೆ ಮುದ ನೀಡುವ ತಾಣ. ಇಲ್ಲಿ ವಿದ್ಯುತ್ ಉತ್ಪಾದಿಸಿ ಗ್ರಾಮಸ್ಥರ ಉಪಯೋಗಕ್ಕೆ ನೀಡುತ್ತಿರುವುದು ಮತ್ತೊಂದು ವಿಶೇಷ.