ಸಿರಗುಪ್ಪ: ನಗರಸಭೆ, ತೆಕ್ಕಲಕೋಟೆ ಪಪಂ ಮತ್ತು ಕರೂರು ತಾಪಂ ಕ್ಷೇತ್ರಕ್ಕೆ ಫೆ.9ರಂದು ಚುನಾವಣೆ ನಡೆಯಲಿದ್ದು, ಮತದಾನಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಚುನಾವಣಾಧಿಕಾರಿ, ತಹಸೀಲ್ದಾರ್ ಎಸ್.ಬಿ.ಕೂಡಲಗಿ ತಿಳಿಸಿದರು.
ನಗರದ ವಿವೇಕಾನಂದ ಪಬ್ಲಿಕ್ ಶಾಲೆಯಲ್ಲಿ ಮತಗಟ್ಟೆಗೆ ತೆರಳುವ ಚುನಾವಣೆ ಸಿಬ್ಬಂದಿಗೆ ಶನಿವಾರ ಇವಿಎಂ ಸೇರಿ ಇತರ ಸಾಮಗ್ರಿ ವಿತರಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಸಿರಗುಪ್ಪ ನಗರಸಭೆ ವ್ಯಾಪ್ತಿಯಲ್ಲಿ 20,989 ಪುರುಷರು, 22,055 ಮಹಿಳೆಯರು ಹಾಗೂ 8 ಇತರೆ ಸೇರಿ ಒಟ್ಟು 43,052 ಮತದಾರರಿದ್ದಾರೆ. 13 ಅತಿಸೂಕ್ಷ್ಮ, 15 ಸೂಕ್ಷ್ಮ, 16 ಸಾಮಾನ್ಯ ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ಅದಂರತೆ ತೆಕ್ಕಲಕೋಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 9426 ಪುರುಷರು, 9946 ಮಹಿಳೆಯರು ಹಾಗೂ 4 ಇತರೆ ಸೇರಿ ಒಟ್ಟು 19376 ಮತದಾರರಿದ್ದು, 3 ಅತಿಸೂಕ್ಷ್ಮ, 2 ಸೂಕ್ಷ್ಮ, 15 ಸಾಮಾನ್ಯ ಬೂತ್‌ಗಳನ್ನು ಸ್ಥಾಪಿಸಲಾಗಿದೆ.
ತಾಲೂಕಿನ ಕರೂರು ತಾಪಂ ಕ್ಷೇತ್ರದ ವ್ಯಾಪ್ತಿಯಲ್ಲಿ 3718 ಮಹಿಳೆಯರು, 3613 ಪುರುಷರು, 1 ಇತರೆ ಸೇರಿ ಒಟ್ಟು 7332 ಮತದಾರಿದ್ದು, 8 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ಚುನಾವಣೆ ನಂತರ ಮತಯಂತ್ರಗಳನ್ನು ನಗರದ ವಿವೇಕಾನಂದ ಪಬ್ಲಿಕ್ ಶಾಲೆಯ ಭದ್ರತಾ ಕೊಠಡಿಯಲ್ಲಿ ಇಡಲಿದ್ದು, ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಲಾಗುವುದು. ಫೆ.11ರಂದು ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಹೇಳಿದರು.