ಸಿರಿಗೇರಿ ಸಮೀಪ ಗುಂಡಿಗನೂರು ಗ್ರಾಮದ ಬಳಿ ಸಾರಿಗೆ ಬಸ್ ತಡೆದ ಕಾಲೇಜ್ ವಿದ್ಯಾರ್ಥಿಗಳು ಡಿಪೋ ವ್ಯವಸ್ಥಾಪಕ ಹರಿಕೃಷ್ಣಗೆ ಮನವಿ ಸಲ್ಲಿಸಿ, ಸಮಯಕ್ಕೆ ಸರಿಯಾಗಿ ಬಸ್ ಓಡಿಸುವಂತೆ ಒತ್ತಾಯಿಸಿದರು.  
ಜಿಲ್ಲೆ

ಸಾರಿಗೆ ಬಸ್ ತಡೆದ ಕಾಲೇಜು ವಿದ್ಯಾರ್ಥಿಗಳು

ಶಶಿಧರ ಎಲ್

ಸಿರಿಗೇರಿ: ಸಮಯಕ್ಕೆ ಸರಿಯಾಗಿ ಬಸ್ ಬರದೇ ಇರುವುದರಿಂದ ಆಕ್ರೋಶಗೊಂಡ ಕಾಲೇಜು ವಿದ್ಯಾರ್ಥಿಗಳು ಸಮೀಪದ ಗುಂಡಿಗನೂರು ಗ್ರಾಮದ ಬಳಿ ಸಾರಿಗೆ ಬಸ್ ತಡೆದು ಆಕ್ರೋಶ ವ್ಯಕ್ತಪಡಿಸಿದರು.

ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಜಿಲ್ಲಾ ರೈತ ಮೋರ್ಚಾ ಅದ್ಯಕ್ಷ ಗುಂಡಿಗನೂರ್ ಪ್ರಕಾಶ್‌ಗೌಡ, ವಿದ್ಯಾರ್ಥಿಗಳಿಂದ ಸಮಸ್ಯೆ ಆಲಿಸಿದರು. ಸಿರಿಗೇರಿ, ಕೊಂಚಿಗೇರಿ, ಮುದ್ದಟ್ಟನೂರು, ಮಾಳಾಪುರ ಸೇರಿ ಸುತ್ತಲಿನ 200ಕ್ಕೂ ಹೆಚ್ಚು ಶಾಲೆ, ಕಾಲೇಜು ವಿದ್ಯಾರ್ಥಿಗಳು ಬಳ್ಳಾರಿಗೆ ತೆರಳುತ್ತಾರೆ. ಸಮಯಕ್ಕೆ ಸರಿಯಾಗಿ ಬಸ್ ಬರುವುದಿಲ್ಲ. ಇದರಿಂದ ತೊಂದರೆಯಾಗಿದೆ ಎಂದು ವಿದ್ಯಾರ್ಥಿಗಳು ತಿಳಿಸಿದರು.

ನಂತರ ಕುರುಗೋಡು ಡಿಪೋ ವ್ಯವಸ್ಥಾಪಕ ಹರಿಕೃಷ್ಣಗೆ ದೂರವಾಣಿ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡು, ಸಮಸ್ಯೆ ಪರಿಹರಿಸಲು ಒತ್ತಾಯಿಸಿದರು. ನಂತರ ಸಿರುಗುಪ್ಪ ಶಾಸಕ ಸೋಮಲಿಂಗಪ್ಪಗೆ ಕರೆ ಮಾಡಿಯೂ ಸಮಸ್ಯೆ ತಿಳಿಸಿದರು. ಡಿಪೋ ವ್ಯವಸ್ಥಾಪಕ ಮಾತನಾಡಿ, ಕೋವಿಡ್ ನಂತರ ಬಸ್ ಸಂಖ್ಯೆಗಳು ಕಡಿಮೆಯಾಗಿವೆ. ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಹಂತ ಹಂತವಾಗಿ ಬಸ್‌ಗಳ ಸಂಖ್ಯೆ ಹೆಚ್ಚಿಸಲಾಗುವುದು. ವಿದ್ಯಾರ್ಥಿಗಳು, ಪಾಲಕರು, ಗ್ರಾಮಸ್ಥರು ಸಹಕರಿಸಬೇಕು ಎಂದು ಕೋಡಿದರು.