ಸಿರಿಗೇರಿ: ಸುಮಾರು ವರ್ಷಗಳಿಂದ ಸಿರಿಗೇರಿ ಕ್ರಾಸ್ ಬಳಿ ಖಾಸಗಿ ಜಾಗದಲ್ಲಿ ಪ್ರತಿ ಶನಿವಾರ ಕುರಿ ಸಂತೆ ನಡೆಯುತ್ತದೆ. ಇದರಿಂದ ಸಂಚಾರ ಸಿಕ್ಕು ಆಗುತ್ತಿದ್ದು, ಜನರಿಗೆ ಕಿರಿಕಿರಿ ಆಗುತ್ತಿದೆ.
ಈ ಸಂತೆಗೆ ಸುತ್ತಲಿನ ತಾಲೂಕುಗಳಾದ ಸಿರುಗುಪ್ಪ, ಸಂಡೂರು, ಹೊಸಪೇಟೆ, ಕಂಪ್ಲಿ ಹಾಗೂ ನೆರೆ ರಾಜ್ಯವಾದ ಆಂಧ್ರಪ್ರದೇಶದ ಆದೋನಿ, ಹೊಳಗುಂದಿ, ಸುತ್ತಮುತ್ತ ಗ್ರಾಮಗಳಿಂದ ಜನರು ಬಂದು ಟಗರು, ಕುರಿಗಳ ಮಾರಾಟ, ಖರೀದಿ ಮಾಡುತ್ತಾರೆ. ಸಂತೆಗೆ ಬರುವ ವ್ಯಾಪಾರಸ್ಥರು ಬೈಕ್, ಆಟೋ, ಟಂಟಂಗಳನ್ನು ರಸ್ತೆ ಪಕ್ಕದಲ್ಲಿ ಎಲ್ಲೆಂದರಲ್ಲಿ ಬಿಡುತ್ತಿದ್ದಾರೆ.
ಇದರಿಂದ ಬೈಕ್, ಇತರ ವಾಹನಗಳ ಸಂಚಾರಕ್ಕೆ ಅಡಚಣೆ ಆಗುತ್ತಿದೆ.ಸರ್ಕಾರಿ ನೌಕರರು, ಶಾಲೆ-ಕಾಲೇಜ್ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ನಿಗದಿತ ಸ್ಥಳಕ್ಕೆ ತಲುಪುವುದಕ್ಕೆ ಆಗುತ್ತಿಲ್ಲ. ಶಾಲಾ ಮಕ್ಕಳಿಗೆ ಶನಿವಾರ ಬೆಳಗ್ಗೆ 8ಗಂಟೆಗೆ ಶಾಲೆ ಇರುವುದರಿಂದ ಪ್ರತಿವಾರ ತಡವಾಗಿ ತೆರಳಬೇಕಾಗುತ್ತದೆ. ಕೆಲವು ಬಾರಿ ಆಂಬುಲೆನ್ಸ್‌ಗೂ ದಾರಿ ಇಲ್ಲದಂತಾಗುತ್ತದೆ. ವಾಹನಗಳ ನಿಲುಗಡೆಗೆಗೆ ಸ್ಥಳ ನಿಗದಿ ಮಾಡಿದರೆ ಈ ಟ್ರಾಫಿಕ್ ಸಮಸ್ಯೆ ಉಂಟಾಗುವುದಿಲ್ಲ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಪ್ರತಿ ದಿನ ಬೆಳಗ್ಗೆ 6ಗಂಟೆಗೆ ಬಳ್ಳಾರಿ ಮೂಲಕ ಮೋಕಾ ಕಾಲೇಜ್‌ಗೆ ತೆರಳಬೇಕು. ಆದರೆ, ಪ್ರತಿ ಶನಿವಾರ ಸಂಚಾರ ಸಿಕ್ಕುವಿನಿಂದಾಗಿ ತಡವಾಗಿ ತೆರಳುತ್ತೇವೆ. ಇದರಿಂದ ಸಮಯ ಪಾಲನೆ ಮಾಡುವುದಕ್ಕೆ ಆಗುವುದಿಲ್ಲ. ಸುಮಾರು ಬಾರಿ ಪೊಲೀಸ್ ಇಲಾಖೆ ಗಮನಕ್ಕೆ ತಂದರೂ ಪ್ರಯೋಜನೆ ಆಗಿಲ್ಲ. ಈಗಲಾದರೂ ಸೂಕ್ತ ಕ್ರಮಕೈಗೊಳ್ಳಬೇಕಿದೆ. | ಬಕಾಡೆ ಪಂಪಾಪತಿ ಉಪನ್ಯಾಸಕ, ಸಿರಿಗೇರಿ
ಪೊಲೀಸ್ ಸಿಬ್ಬಂದಿಯನ್ನು ಸ್ಥಳಕ್ಕೆ ಕಳುಹಿಸಿ ಸುಮಾರು ಬಾರಿ ಸಂಚಾರ ಸಮಸ್ಯೆ ಇತ್ಯರ್ಥ ಮಾಡಿದ್ದೇವೆ. ಆದಾಗ್ಯೂ ರಸ್ತೆ ಮೇಲೆ ಅನವಶ್ಯವಾಗಿ ಸಾರ್ವಜನಿಕರಿಗೆ ತೊಂದರೆ ಮಾಡಿದರೆ ಅಂಥವರ ವಿರುದ್ಧ ಕ್ರಮ ವಹಿಸಲಾಗುವುದು. | ಸದ್ದಾಂ ಹುಸೇನ್ ಪಿಎಸ್‌ಐ, ಸಿರಿಗೇರಿ