ಸಿರಿಗೇರಿ: ಗ್ರಾಮದಲ್ಲಿರುವ ಹುತಾತ್ಮ ವೀರಯೋಧ ಮಂಜುನಾಥ ಸ್ಮಾರಕವನ್ನು ಆಡಳಿತ ವರ್ಗ ಸಂಪೂರ್ಣ ಕಡೆಗಣಿಸಿದೆ. ಈಗಲೂ ಸೈನಿಕನ ಕುಟುಂಬವೇ ನಿರ್ವಹಣೆ ಮಾಡುತ್ತಿದ್ದು, ಅಧಿಕಾರಿಗಳ ನಿರ್ಲಕ್ಷೃಧೋರಣೆಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಬಾರಮುಲ್ಲಾ ಗಡಿ ಪ್ರದೇಶದಲ್ಲಿ 2004ರಲ್ಲಿ ಶತ್ರುಗಳನ್ನು ಹಿಮ್ಮೆಟ್ಟಿಸುವ ಸಮಯದಲ್ಲಿ ವೀರಮರಣ ಹೊಂದಿದ ಯೋಧ ಮಂಜುನಾಥ ಸ್ಮರಣಾರ್ಥ ಸಿರಿಗೇರಿಯಲ್ಲಿ ಸ್ಮಾರಕ ನಿರ್ಮಿಸಲಾಗಿದೆ. ಆದರೆ, ಸ್ಥಳೀಯ ಆಡಳಿತದಿಂದ ಯಾವುದೇ ಅಭಿವೃದ್ಧಿ ಕಾರ್ಯ ನಡೆದಿಲ್ಲ.
16 ವರ್ಷ ಕಳೆದರೂ ಧ್ವಜಸ್ತಂಭ ನಿರ್ಮಾಣ ಮಾಡಿಲ್ಲ. ಸ್ಮಾರಕದ ಒಳಗಡೆ ಟೈಲ್ಸ್‌ಗಳು, ಮೈದಾನಕ್ಕೆ ನೆಲಹಾಸು, ಶುದ್ಧ ಕುಡಿವ ನೀರು, ಮುಖ್ಯದ್ವಾರಕ್ಕೆ ಮೆಟ್ಟಲು, ಉದ್ಯಾನ ನಿರ್ಮಾಣ ಸೇರಿ ಇತರ ಸೌಲಭ್ಯ ಒದಗಿಸಿಲ್ಲ.
ಗ್ರಾಮದ ಜನತಾ ಕಾಲನಿಯಲ್ಲಿರುವ ಬಾಲಕಿಯರ ಪ್ರೌಢ ಶಾಲೆಯ ಆವರಣದಲ್ಲಿ ಸರ್ಕಾರ ನಿಗದಿ ಮಾಡಿದ ಸ್ಥಳದಲ್ಲಿ ಹುತಾತ್ಮ ಮಂಜುನಾಥ ಸ್ಮಾರಕ ನಿರ್ಮಾಣ ಮಾಡಲಾಗಿದೆ. ಸ್ಮಾರಕದ ಅಭಿವೃದ್ಧಿ ಕಾರ್ಯಕ್ಕೆ ಅಧಿಕಾರಿಗಳು ಮುಂದಾಗದ ಕಾರಣ ಹುತಾತ್ಮ ಸೈನಿಕನ ಕುಟುಂಬದವರು ಮತ್ತು ಹಿತೈಷಿಗಳೇ ನಿರ್ವಹಣೆ ಹೊಣೆ ಹೊರಬೇಕಾಗಿದೆ. ಈಗಾಗಲೆ ಮೂರ್ತಿ, ಕಟ್ಟಡವನ್ನೂ ಅವರೇ ಮಾಡಿಸಿದ್ದಾರೆ.
ಪ್ರತಿ ವರ್ಷ ಜ.26 ಹಾಗೂ ಆ.15ರಂದು ಸರ್ಕಾರ ನೀಡಿದ ರಾಷ್ಟ್ರಧ್ವಜವನ್ನು ಆರೋಹಣ ಮಾಡಲಾಗುತ್ತದೆ. ಆದರೆ, ಬಾವುಟ ಹಾರಿಸಲು ಸೂಕ್ತವಾದ ಧ್ವಜಸ್ತಂಭವನ್ನೂ ಒದಗಿಸಿಲ್ಲ. ಹೀಗಾಗಿ ಪೈಪ್‌ನಲ್ಲಿ ಪೋಲ್ ಹಾಕಿ ಧ್ವಜಾರೋಹಣ ಮಾಡಬೇಕಾಗಿದೆ.
ಅಣ್ಣನ ಮೂರ್ತಿ, ಕಟ್ಟಡವನ್ನು ನಾವೇ ನಿರ್ಮಾಣ ಮಾಡಿದ್ದೇವೆ. ಸರ್ಕಾರದ ಪರಿಹಾರಕ್ಕಾಗಿ ತಿಂಗಳಗಟ್ಟಲೆ ಅಲೆದಿದ್ದೇವೆ. ಉದ್ಯಾನ ನಿರ್ಮಾಣಕ್ಕಾಗಿ ಈಗಲೂ ಅಲೆದಾಡಬೇಕೆಂದರೆ ನಮ್ಮಿಂದ ಆಗದು.ಎಚ್.ನಾಗರಾಜ್ಹುತಾತ್ಮ ಸೈನಿಕನ ಸಹೋದರ, ಸಿರಿಗೇರಿ
ಇನ್ನೆರಡು ದಿನಗಳಲ್ಲಿ ಹುತಾತ್ಮ ಯೋಧ ಮಂಜುನಾಥ ಸ್ಮಾರಕ ಮುಂದೆ ಧ್ವಜಸ್ತಂಭ ನಿರ್ಮಾಣ ಮಾಡಲಾಗುವುದು. ಉದ್ಯಾನ, ಇತರ ಸೌಲಭ್ಯ ಕಲ್ಪಿಸಲು ಜಿಲ್ಲಾಡಳಿತದಿಂದ ಅನುದಾನ ಬರಬೇಕು. ಈ ಕುರಿತು ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗುವುದು.ಯು.ರಾಮಪ್ಪಪಿಡಿಒ, ಸಿರಿಗೇರಿ ಗ್ರಾಪಂ