ಜಿಲ್ಲೆ

ಆರೋಗ್ಯ ರಕ್ಷಣೆಗೆ ನಮ್ಮೆಲ್ಲರ ಹೊಣೆ: ಗ್ರಾಪಂ ಅಧ್ಯಕ್ಷೆ ಲೀಲಾವತಿ ಬಸವರಾಜ್ ಗೌಡ ಅಭಿಮತ

ಸಿರಿಗೇರಿ: ಗ್ರಾಮದ ಜೆ.ಎಚ್.ವಿ. ಆಂಗ್ಲ ಮಾಧ್ಯಮ ಶಾಲಾವರಣದಲ್ಲಿ ಯಶಸ್ವಿನಿ ಚಾರಿಟೇಬಲ್ ಟ್ರಸ್ಟ್ ಹಾಗೂ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ಶಿಬಿರವನ್ನು ಗ್ರಾಪಂ ಅಧ್ಯಕ್ಷೆ ಲೀಲಾವತಿ ಬಸವರಾಜ್ ಗೌಡ ಬುಧವಾರ ಉದ್ಘಾಟಿಸಿದರು.

ವಿವೇಕಾನಂದ ಪ್ರೌಢಶಾಲೆ ಮುಖ್ಯಶಿಕ್ಷಕ ಎನ್.ಪಂಪಾಪತಿ ಮಾತನಾಡಿ, ಉಚಿತ ಹೃದಯ ರೋಗ, ನರರೋಗ, ಮೂತ್ರಪಿಂಡದಲ್ಲಿ ಕಲ್ಲು ಹಾಗೂ ಕ್ಯಾನ್ಸರ್ ತಪಾಸಣೆ ಶಿಬಿರಕ್ಕೆ ಟ್ರಸ್ಟ್ ಸಿರಿಗೇರಿಯನ್ನು ಆಯ್ಕೆ ಮಾಡಿಕೊಂಡಿರುವುದು ಸಂತಸ ತಂದಿದೆ. ನಿತ್ಯದ ಕಾಯಗದ ಜತೆ ಆರೋಗ್ಯಕ್ಕೂ ಮಹತ್ವ ನೀಡಬೇಕು. ಗಂಭೀರ ಕಾಯಿಲೆಗಳನ್ನು ಅಲಕ್ಷಿಸದೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ಇದ್ದೂರಲ್ಲೇ ಶಿಬಿರ ನಡೆಯುತ್ತಿದ್ದು ಸುತ್ತಮುತ್ತಲಿನ ಹಳ್ಳಿಯವರು ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.

ಟ್ರಸ್ಟ್ ಖಜಾಂಚಿ ರಮೇಶ್ ಶೆಟ್ಟಿ ಮಾತನಾಡಿ, ಸಪ್ತಗಿರಿ ಆಸ್ಪತ್ರೆಯು ಸದಾ ಕಾಲವೂ ನಮ್ಮ ಬೆಂಗಾವಲಿಗಿದೆ. ನಾವು ಯಾವುದೇ ಆರೋಗ್ಯ ಶಿಬಿರ ಹಮ್ಮಿಕೊಂಡರೂ ನಮ್ಮ ಸಹಯೋಗ ಬಯಸುತ್ತದೆ. ಬಡವರು ದೊಡ್ಡ ಕಾಯಿಲೆಗಳ ಚಿಕಿತ್ಸೆಗೆ ಪರದಾಡುತ್ತದ್ದಾರೆ. ಇಂತವರಿಗೆ ಉಚಿತವಾಗಿ ಆರೋಗ್ಯ ಮಾಹಿತಿಕೊಟ್ಟು, ಹೃದಯ ಸಮಸ್ಯೆ ಆಪರೇಷನ್‌ನನ್ನು ಉಚಿತವಾಗಿ ಮಾಡುತ್ತಿದೆ. ಇಂತಹ 40 ರಿಂದ 50 ರೋಗಿಗಳಿಗೆ ಚಿಕಿತ್ಸೆ ನೀಡಿದೆ ಎಂದು ತಿಳಿಸಿದರು.

ಜೆ.ಎಚ್.ವಿ. ಸಂಸ್ಥೆ ಕಾರ್ಯದರ್ಶಿ ದೊಡ್ಡನಗೌಡ, ಗ್ರಾಮದ ಹಿರಿಯ ಮುಖಂಡರಾದ ಮಾರುತಿಶೆಟ್ಟಿ, ವೆಂಕಟೇಶ್ ಶೆಟ್ಟಿ, ಸೂರ್ಯನಾರಾಯಣ ಶೆಟ್ಟಿ, ಯಶಸ್ವಿನಿ ಚಾರಿಟೇಬಲ್ ಅಧ್ಯಕ್ಷೆ ಪ್ರತಿಮಾ, ಕಾರ್ಯದರ್ಶಿ ಶ್ರೀನಿವಾಸ ಶೆಟ್ಟಿ, ಸದಸ್ಯೆ ಸ್ವರ್ಣಲತಾ, ವೈದ್ಯಾಧಿಕಾರಿಗಳಾದ ಡಾ. ಆನಂದ್,ಸಂದೀಪ್ ಸಿಬ್ಬಂದಿ ಇದ್ದರು.