ಸಿರಿಗೇರಿ ಸಮೀಪದ ದಾಸಪುರದಲ್ಲಿ ಸಾಹಿತ್ಯ ಮತ್ತು ಸಿನೆಮಾ ಮಾಧ್ಯಮಗಳ ಸಂಬಂಧ ಒಂದು ಅವಲೋಕನ ಕಾರ್ಯಕ್ರಮವನ್ನು ಸಾಹಿತಿ, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ ಉದ್ಘಾಟಿಸಿದರು. ಪ್ರಮುಖರಾದ ಹಳ್ಳಿ ಬಸವರಾಜ, ಸಿರಿಗೇರಿ ಯರ‌್ರಿಸ್ವಾಮಿ ಇತರರಿದ್ದರು. 
ಜಿಲ್ಲೆ

ಮಹಿಳೆಯರಿಗಿದೆ ಪ್ರಾಮುಖ್ಯ ; ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ ಆಶಯ

ಸಿರಿಗೇರಿ: ಮಹಿಳೆಯರ ಸ್ವಾತಂತ್ರ್ಯ, ಅಭಿವ್ಯಕ್ತಿಗೆ ಮನ್ನಣೆ ನೀಡಿ, ಸಾಮಾಜಿಕ ಅವಕಾಶ ಕಲ್ಪಿಸಬೇಕಿದೆ ಎಂದು ಚಲನಚಿತ್ರ ನಿರ್ದೇಶಕ, ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ ಅಭಿಪ್ರಾಯಪಟ್ಟರು.

ದಾಸಪುರ ಗ್ರಾಮದಲ್ಲಿ ಅನ್ನಪೂರ್ಣ ಕ್ರಿಯೇಷನ್ಸ್‌ನಿಂದ ಗುರುವಾರ ಆಯೋಜಿಸಿದ್ದ ‘ಸಾಹಿತ್ಯ ಮತ್ತು ಸಿನೆಮಾ ಮಾಧ್ಯಮಗಳ ಸಂಬಂಧ ಒಂದು ಅವಲೋಕನ’ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ಯಾವುದೇ ಕಾರ್ಯಕ್ರಮದಲ್ಲಿ ಮಹಿಳೆಯರ ಪಾತ್ರ ಬಹುಮುಖ್ಯವಾಗಿದ್ದು, ಅವರನ್ನು ಪ್ರಮುಖ ರಂಗಕ್ಕೆ ಕರೆತರುವ ಕಾರ್ಯ ನಡೆಯಬೇಕು. ಅಭಿವ್ಯಕ್ತಿ ಮಹಿಳಾ ಸಂಸ್ಥೆಯನ್ನು ಕಟ್ಟಿ ಮಹಿಳೆಯರಿಗೆ ಡೇರಿ, ಸ್ವ-ಉದ್ಯೋಗಗಳಂಥ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿದ್ದೇವೆ ಎಂದರು.

ಗ್ರಾಮೀಣ ಸೊಗಡಿನ ಪರಿಸರ, ಭಾಷೆ ಬಹಳ ಸೊಗಸಾಗಿರುತ್ತದೆ. ಗ್ರಾಮೀಣ ಮಟ್ಟದಲ್ಲಿ ರಾಜಕೀಯ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವ ಯಾವುದೇ ಸಂಸ್ಥೆಗಳನ್ನು ಕಟ್ಟಬೇಡಿ, ಸಜ್ಜನರ ಸಂಘ ಮಾಡಿ, ಸ್ವಯಂ ಸೇವಕರಾಗಿ ಕರ್ತವ್ಯ ನಿರ್ವಹಿಸಿದಾಗ ಒಂದು ಉತ್ತಮ ವಾತಾವರಣ ನಿರ್ಮಾಣವಾಗಲಿದೆ. ಸಿನಿಮಾ ಮತ್ತು ಸಾಹಿತ್ಯಗಳ ಸಮನ್ವಯ ತೆಗೆದುಕೊಂಡು ಬಂದಿದ್ದು, ನನಗೆ ಇವರೆಡು ಕಣ್ಣುಗಳು ಇದ್ದಂತೆ ಎಂದರು.ಲೇಖಕ ಸಿರಿಗೇರಿ ಯರ‌್ರಿಸ್ವಾಮಿ ಮಾತನಾಡಿ, ನಾಗತಿಹಳ್ಳಿ ಚಂದ್ರಶೇಖರ್ ಸರಳ ಸಜ್ಜನಿಕೆಯ ಸಾಹಿತಿ ಮತ್ತು ನಿರ್ದೇಶಕರಾಗಿದ್ದಾರೆ. ಹಳ್ಳಿಗಳ ಸಾಮಾನ್ಯ ಸಂಗತಿಗಳನ್ನು ಅರಿತಿದ್ದಾರೆ. ಸಿರಿಗೇರಿ, ದಾಸಪುರ ಗ್ರಾಮಕ್ಕೆ ಬಂದಿರುವುದು ಸಂತಸ ವಿಚಾರ ಎಂದರು.

ಗ್ರಾಪಂ ಅಧ್ಯಕ್ಷ ಹಳ್ಳಿ ಬಸವರಾಜ, ಪ್ರಮುಖರಾದ ರುದ್ರಪ್ಪ, ಟಿ.ಹನುಮಂತಪ್ಪ, ಟಿ.ಚಂದ್ರಪ್ಪ, ವಿರುಪಾಕ್ಷಪ್ಪ, ಲಿಂಗಪ್ಪ, ಮಾಯಪ್ಪ, ಕೊನಪ್ಪ, ಸಣ್ಣ ಮುದುಕಪ್ಪ ಇತರರಿದ್ದರು.