ಸಿರಿಗೆರೆ: ಬುದ್ಧಿಜೀವಿ ಮನುಷ್ಯನ ಮನಸ್ಸಿನಲ್ಲಿ ಒಳ್ಳೆಯ ಮತ್ತು ಕೆಟ್ಟ ಆಲೋಚನೆಗಳನ್ನು ಕಾಣುತ್ತೇವೆ. ಇಲ್ಲಿ ಒಳ್ಳೆಯದನ್ನು ಆಯ್ಕೆ ಮಾಡಿಕೊಳ್ಳುವ ಸಾತ್ವಿಕ ಬುದ್ಧಿಶಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ತರಳಬಾಳು ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸಿರಿಗೆರೆಯ ಗುರುಶಾಂತೇಶ್ವರ ದಾಸೋಹ ಭವನದಲ್ಲಿ ಶನಿವಾರ ‘ಮರಣವೇ ಮಹಾನವಮಿ’ ನಾಟಕ ಪ್ರದರ್ಶನದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಸದಾ ಒಳ್ಳೆಯದನ್ನು ಚಿಂತಿಸುತ್ತ ಉತ್ತಮ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ನಿರ್ದೇಶಕ ಡಾ.ನಾಗತಿಹಳ್ಳಿ ಚಂದ್ರಶೇಖರ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಉತ್ತಮ ಪ್ರತಿಭೆಗಳಿರುತ್ತವೆ. ಅಂತಹವರನ್ನು ಗುರುತಿಸಿ ಮುಖ್ಯ ಭೂಮಿಕೆಗೆ ತರುವ ಕಾರ್ಯವನ್ನು ಶ್ರೀಮಠ ಮಾಡುತ್ತಿರುವುದು ಶ್ಲಾಘನೀಯ. ಬೃಹನ್ಮಠವು ಅಕ್ಷರ ದಾಸೋಹದ ಜತೆಗೆ ನಾಟಕ, ನೃತ್ಯ, ಸಂಗೀತ, ಕ್ರೀಡೆಗಳ ಮೂಲಕ ವ್ಯಕ್ತಿತ್ವ ವಿಕಸನಕ್ಕೆ ನಾಂದಿಯಾಗಿದೆ ಎಂದು ತಿಳಿಸಿದರು.
ಕಲಾವಿದ ಪ್ರಕಾಶ್ ಬೆಳವಾಡಿ ಮಾತನಾಡಿ, ಮಠದಲ್ಲಿ ನಡೆಯುವ ಸಾಂಸ್ಕೃತಿಕ ಚಟುವಟಿಕೆಗಳು ವಿದ್ಯಾರ್ಥಿಗಳಿಗೆ ರಂಗಭೂಮಿಯಲ್ಲಿ ತೊಡಗಿಕೊಳ್ಳುವಂತಹ ಧೈರ್ಯವನ್ನು ನೀಡುತ್ತಿವೆ. ಶಿಕ್ಷಣದಿಂದ ಉದ್ಯೋಗ ಪಡೆಯಬಹುದು. ಆದರೆ ಕಲೆ, ಸಾಹಿತ್ಯವು ವ್ಯಕ್ತಿತ್ವ ವಿಕಸನಕ್ಕೆ ಕಾರಣವಾಗುತ್ತದೆ ಎಂದರು.
ನೀಲಾಂಬಿಕಾ ಬಾಲಿಕಾ ಪ್ರೌಢಶಾಲೆಯ ವಿದ್ಯಾರ್ಥಿಗಳು ವಚನ ಗಾಯನ, ತರಳಬಾಳು ಸಿಬಿಎಸ್‌ಇ ವಿದ್ಯಾರ್ಥಿಗಳು ಭರತನಾಟ್ಯ ಪ್ರಸ್ತುತಪಡಿಸಿದರು. ತರಳಬಾಳು ಕಲಾಸಂಘದ ಮಕ್ಕಳು ಮಲ್ಲಕಂಭ ಪ್ರದರ್ಶನ ನೀಡಿದರು. ಕೊನೆಯಲ್ಲಿ ‘ಮರಣವೇ ಮಹಾನವಮಿ’ ನಾಟಕ ನಡೆಯಿತು.