ಶಿವಮೊಗ್ಗ: ಶೆಟ್ಟಿಹಳ್ಳಿ ವನ್ಯಜೀವಿ ವಿಭಾಗ ಮಲೇಶಂಕರ ವಲಯದ ಸಿರಿಗೆರೆ ಅರಣ್ಯ ಇಲಾಖೆಯಲ್ಲಿ ಡಿವೈಆರ್‌ಎಫ್‌ಒ ಒಬ್ಬರ ಬಂದೂಕನ್ನು ಕದ್ದು ಮಾರಾಟಕ್ಕೆ ಯತ್ನಿಸಿದ್ದು ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಕುಂಸಿ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿದೆ.
ಅರಣ್ಯ ರಕ್ಷಣೆಗಾಗಿ ಡಿವೈಆರ್‌ಎಫ್‌ಒಗೂ ಸರ್ಕಾರದಿಂದ ಬಂದೂಕು ನೀಡಲಾಗಿತ್ತು. ಕರ್ತವ್ಯ ಮುಗಿಸಿ ಎಂದಿನಂತೆ ಕಚೇರಿಯಲ್ಲಿಟ್ಟು ಹೋಗಿದ್ದು ಮರುದಿನ ಬಂದು ನೋಡಿದಾಗ ಬಂದೂಕು ಇಟ್ಟಿದ್ದ ಸ್ಥಳದಲ್ಲಿ ಇರಲಿಲ್ಲ. ಎಲ್ಲೆಡೆ ಹುಡುಕಾಟ ನಡೆಸಿದರೂ ಬಂದೂಕಿನ ಬಗ್ಗೆ ಮಾಹಿತಿಯೇ ಸಿಗಲಿಲ್ಲ. ಇದೀಗ ಎರಡು ತಿಂಗಳ ಬಳಿಕ ಬಂದೂಕು ಮರಳಿ ಅರಣ್ಯ ಇಲಾಖೆ ಕೈಸೇರಿದ್ದು ಕುತೂಹಲ ಮೂಡಿಸಿದೆ.
ಬಂದೂಕು ನಾಪತ್ತೆಯಾಗಿ ಅಥವಾ ಕಳುವಾಗಿ ಎರಡು ತಿಂಗಳು ಕಳೆದರೂ ದೂರು ನೀಡಲು ಹಿಂದೇಟು ಹಾಕಿದ್ದೇಕೆ ?, ವಿಷಯ ಗೊತ್ತಿದ್ದರೂ ಮೇಲಧಿಕಾರಿಗಳು ಏಕೆ ಸುಮ್ಮನಿದ್ದರು ಎಂಬುದು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಮೂಲಗಳ ಪ್ರಕಾರ ಹೊರಗುತ್ತಿಗೆ ನೌಕರನೊಬ್ಬ ಬಂದೂಕನ್ನು ಕಳ್ಳತನ ಮಾಡಿ ಹಣಗೆರೆ ಅರಣ್ಯ ಇಲಾಖೆಯ ಅಧಿಕಾರಗಳ ಮೂಲಕ ಮಾರಾಟಕ್ಕೂ ಯತ್ನಿಸಿದ್ದ ಎನ್ನಲಾಗಿದೆ. ಈ ವಿಷಯ ಮೇಲಧಿಕಾರಿಗಳ ಗಮನಕ್ಕೆ ಬಂದ ಬಳಿಕ ಬಂದೂಕನ್ನು ವಶಕ್ಕೆ ಪಡೆದಿದ್ದು ಅತನನ್ನು ವಜಾಗೊಳಿಸಿದ್ದಾರೆ. ಆತನಿಗೆ ಮತ್ತೊಬ್ಬ ಸಹಾಯ ಮಾಡಿದ್ದು ಕುಂಸಿ ಠಾಣೆ ಪೊಲೀಸರಿಗೆ ದೂರು ನೀಡಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ವನ್ಯಜೀವಿ ವಿಭಾಗದ ಡಿಎಫ್‌ಒ ಪ್ರಸನ್ನಕೃಷ್ಣ ಪಟಗಾರ, ಸಿರಿಗೆರೆ ಅರಣ್ಯ ಇಲಾಖೆಯಲ್ಲಿ ಬಂದೂಕು ಮಿಸ್ಸಿಂಗ್ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದ್ದು ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.