ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಕೃಷಿ ಉತ್ಪನ್ನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರ ಬಳಕೆಯಾಗುತ್ತಿದ್ದು ನಾವು ಸೇವಿಸುವ ಅಹಾರ ವಿಷಯುಕ್ತವಾಗುತ್ತಿದೆ, ಈ ಹಿನ್ನೆಲೆಯಲ್ಲಿ ರೈತರು ಸಾವಯನ ಕೃಷಿ ಪದ್ಧತಿ ಕಡೆಗೆ ಗಮನ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಸಲಹೆ ನೀಡಿದರು.
ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ದೇವನಹಳ್ಳಿ ಟೌನ್ ಕ್ರೀಡಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಸಾವಯವ ಮತ್ತು ಸಿರಿಧಾನ್ಯಗಳ ಮೇಳದಲ್ಲಿ ಮಾತನಾಡಿದರು. ರಾಸಾಯನಿಕ ಗೊಬ್ಬರ ಬಳಸಿದರೆ ಆಹಾರ ಉತ್ಪನ್ನಗಳಲ್ಲಿ ಪೌಷ್ಟಿಕತೆ, ಗುಣಮಟ್ಟ ಇರುವುದಿಲ್ಲ. ಈ ಮೂಲಕ ಬೆಳೆದ ಆಹಾರ ಪದಾರ್ಥಗಳ ಸೇವನೆಯಿಂದ ಪರೋಕ್ಷವಾಗಿ ವಿಷಾಹಾರ ಮನುಷ್ಯನ ದೇಹ ಸೇರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಜನಸಂಖ್ಯೆಯ ಹೆಚ್ಚಳದಿಂದ ಆಹಾರದ ಬೇಡಿಕೆ ಹೆಚ್ಚಾಯಿತು. ಕೃಷಿಯಲ್ಲಿ ಇಳುವರಿ ಹೆಚ್ಚಿಸಲು ರಾಸಾಯನಿಕ ಗೊಬ್ಬರ ಬಳಕೆ ಅನಿವಾರ್ಯವಾಯಿತು, ಇದರ ಬಳಕೆಯಿಂದ ಜನರಲ್ಲಿ ಅನಾರೋಗ್ಯ ಸಮಸ್ಯೆಗಳು ಕಾಡುತ್ತಿವೆ ಎಂದರು.
ಸಿರಿಧಾನ್ಯದಿಂದ ಆರೋಗ್ಯ: ಸಿರಿಧಾನ್ಯ ಸೇವನೆಯಿಂದ ಆರೋಗ್ಯಯುತ ಜೀವನ ನಡೆಸಲು ಸಾಧ್ಯವಾಗುತ್ತದೆ ಪಾಸ್ಟ್‌ಪುಡ್ ಸಂಸ್ಕೃತಿಯಿಂದ ದೂರವಿದ್ದು ಸಾವಯವ ಆಹಾರ ಪದಾರ್ಥಗಳ ಸೇವೆಗೆ ಮುಂದಾಗಬೇಕು ಎಂದು ಕಿವಿಮಾತು ಹೇಳಿದರು. ಮುಂದಿನ ಪೀಳಿಗೆಗೆ ಗುಣಮಟ್ಟದ ಆಹಾರ ಒದಗಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ, ಆದ್ದರಿಂದ ರೈತರು ಸಾವಯವ ಕೃಷಿ ಪದ್ಧತಿಗೆ ಆದ್ಯತೆ ನೀಡಬೇಕು ಎಂದರು.
ಕೊಟ್ಟಿಗೆ ಗೊಬ್ಬರ, ಹಸಿರು ಎಲೆ ಗೊಬ್ಬರ, ಎರೆಹುಳು ಗೊಬ್ಬರ ಸೇರಿ ಸಾವಯವ ಗೊಬ್ಬರ ಬಳಸಿ ಆಹಾರ ಉತ್ಪನ್ನಗಳನ್ನು ಬೆಳೆಯಬೇಕು ಎಂದು ಸಚಿವರು ತಿಳಿಸಿದರು. ಸಾವಯವ ಗೊಬ್ಬರ ಬಳಸಿಕೊಂಡು ಉತ್ತಮ ಇಳುವರಿಯ ಬೆಳೆ ಹಾಗೂ ಸಿರಿಧಾನ್ಯಗಳನ್ನು ಬೆಳೆಯುವಂತೆ ಪ್ರೋತ್ಸಾಹಿಸುವ ಕೆಲಸವಾಗಬೇಕು. ಇದರಿಂದ ನಮಗೆ ಹಾಗೂ ಭವಿಷ್ಯದ ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಗುಣಮಟ್ಟದ ಆಹಾರ ಸಿಕ್ಕಂತಾಗುತ್ತದೆ ಎಂದರು.
ರಾಗಿ ಬೆಂಬಲ ಬೆಲೆ ಹೆಚ್ಚಳಕ್ಕೆ ಮಾಹಿತಿ: ರಾಗಿ ಲಾಭದಾಯಕ ಬೆಳೆ ಅಲ್ಲದಿದ್ದರೂ ಅದಕ್ಕೆ ಬೆಂಬಲ ಬೆಲೆ ಹೆಚ್ಚಿಸಬೇಕು ಎಂಬ ಉದ್ದೇಶವಿತ್ತು. ಹೀಗಾಗಿ ರಾಗಿಗೆ ಬೆಂಬಲ ಬೆಲೆ ಹೆಚ್ಚಳ ಮಾಡುವಂತೆ ಕೇಂದ್ರದ ಮಂತ್ರಿಯನ್ನು ಭೇಟಿಯಾಗಿ ದಾಖಲೆಗಳ ಸಮೇತ ರಾಗಿ ಬೆಳೆ ಬೆಳೆಯಲು ಆಗುವ ಖರ್ಚು ವೆಚ್ಚ, ಲಾಭ ನಷ್ಟದ ಬಗ್ಗೆ ತಿಳಿಸಲಾಯಿತು. ಇದಕ್ಕೆ ಕೇಂದ್ರ ಮಂತ್ರಿಗಳು ಸ್ಪಂದಿಸಿ ಪ್ರತಿ ಕ್ವಿಂಟಾಲ್ ರಾಗಿಗೆ 4290 ರೂ. ಬೆಂಬಲ ಬೆಲೆ ನಿಗದಿ ಪಡಿಸಲು ಸಹಕಾರಿಯಾಯಿತು ಎಂದು ಸಚಿವರು ಹೇಳಿದರು.
ರಾಸಾಯನಿಕ ಬಳಕೆ ನಿಲ್ಲಿಸಿ: ಕೃಷಿ ಇಲಾಖೆ ಸಾವಯವ ಪದ್ದತಿಯಲ್ಲಿ ಬೆಳೆ ಬೆಳೆಯಲು ಸಾಕಷ್ಟು ಜಾಗೃತಿ ಮೂಡಿಸುತ್ತಿದೆ. ಭೂಮಿಯ ಲವತ್ತತೆ ಕಾಪಾಡುವುದರಿಂದ ಆರೋಗ್ಯ ವೃದ್ಧಿಸಿಕೊಳ್ಳಲು ಸಾಧ್ಯ. ಆದ್ದರಿಂದ ರಾಸಾಯನಿಕ ರಸಗೊಬ್ಬರ ಬಳಕೆ ನಿಲ್ಲಿಸಿ, ಸಾವಯವ ಗೊಬ್ಬರ ಬಳಸಿ ಕೃಷಿಯಲ್ಲಿ ಸಾವಯವ ಬೆಳೆ ಬೆಳೆಯುವ ಕಡೆ ರೈತರು ಆಸಕ್ತಿ ತೋರಿಸಬೇಕು ಎಂದು ರಾಜ್ಯ 5ನೇ ಹಣಕಾಸು ಆಯೋಗದ ಅಧ್ಯಕ್ಷ ನಾರಾಯಣಸ್ವಾಮಿ ಮನವಿ ಮಾಡಿದರು.
ಪ್ರಶಸ್ತಿ ಪ್ರಧಾನ: ಕೃಷಿ, ತೋಟಗಾರಿಕೆ, ರೇಷ್ಮೆ, ಪಶು ಇಲಾಖೆಯ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಲಾಯಿತು. ಕೃಷಿ, ತೋಟಗಾರಿಕೆ, ರೇಷ್ಮೆ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ರೈತರಿಗೆ ಆತ್ಮಶ್ರೇಷ್ಠ ಕೃಷಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಮೇಳದಲ್ಲಿ ರೈತರಿಗೆ ಅವಶ್ಯವಿರುವ ಬೇಸಾಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ಕೃಷಿ ಇಲಾಖೆ ವತಿಯಿಂದ ನೀಡಲಾಯಿತು, ವಿವಿಧ ತಳಿಯ ಕೃಷಿ ಉತ್ಪನ್ನಗಳು, ಪರಿಕರ, ಯಂತ್ರೋಪಕರಣಗಳ ವಸ್ತು ಪ್ರದರ್ಶನ ಏರ್ಪಡಿಲಾಗಿತ್ತು.
------------------