ಜಿಲ್ಲೆ

ಗ್ರಾಮೀಣ ಮಹಿಳೆಯರ ಬದುಕು ಬೆಳಗಿದ ಸಿರಿ

ಮಹಾತ್ಮಗಾಂಧಿ ಅವರ ಗ್ರಾಮ ಸ್ವರಾಜ್ಯದ ಪರಿಕಲ್ಪನೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರ ಅಧ್ಯಕ್ಷತೆ ಹಾಗೂ ಹೇಮಾವತಿ ವಿ. ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ 2004ರಲ್ಲಿ ಆರಂಭಗೊಂಡ ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಗೆ ಈಗ 20ರ ಸಂಭ್ರಮ.

ಮಹಿಳೆಯರಿಂದ, ಮಹಿಳೆಯರಿಗಾಗಿ, ಮಹಿಳೆಯರಿಗೋಸ್ಕರ ಕಾರ್ಯನಿರ್ವಹಿಸು ತ್ತಿರುವ, ಗ್ರಾಮೀಣ ಮಹಿಳೆಯರ ಆರ್ಥಿಕ ಸ್ವಾವಲಂಬನೆಯೊಂದಿಗೆ ಸಶಕ್ತೀಕರಣ ಉದ್ದೇಶ ಇಟ್ಟುಕೊಂಡು ಸಾಗುತ್ತಿರುವ ಸಂಸ್ಥೆಯೇ ಸಿರಿ. ಮಹಿಳೆಯರನ್ನು ಮುಖ್ಯವಾಹಿನಿಗೆ ತರುವ ಉದ್ದೇಶದಿಂದ, ಸ್ವ-ಸಹಾಯ ಸಂಘಗಳಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿರುವ ಸಿರಿ ಸಂಸ್ಥೆಯ ಮೂಲಕ ಸಾವಿರಾರು ಮಹಿಳೆಯರು ಉದ್ಯಮಶೀಲತೆಯೊಂದಿಗೆ ಆರ್ಥಿಕವಾಗಿ ಬೆಳೆದಿದ್ದಾರೆ, ಇತರರನ್ನೂ ಬೆಳೆಸುತ್ತಿದ್ದಾರೆ. ಆ ಮೂಲಕ ಮಹಿಳೆಯರ ಆದಾಯವೂ ಹೆಚ್ಚಳವಾಗಿದೆ. ಸ್ವ-ಉದ್ಯೋಗ ಮಾಡುವವರಿಗೂ ಸಂಸ್ಥೆ ಬೆನ್ನೆಲುಬಾಗಿದೆ. ಸಂಸ್ಥೆಯಿಂದಾಗಿ ಸಹಸ್ರಾರು ಕುಟುಂಬಗಳು ಬದುಕು ಕಟ್ಟಿಕೊಂಡು ಸುಖೀ ಜೀವನ ಸಾಗಿಸುತ್ತಿವೆ.

ಬೆಳೆದು ಬಂದ ಹಾದಿ: ಲಾಭರಹಿತ ಉದ್ದೇಶಗಳಿಗಾಗಿ ದಕ್ಷಿಣ ಕನ್ನಡ ಜಿಲ್ಲೆಯ 2000 ಸ್ವ-ಸಹಾಯ ಗುಂಪುಗಳ ಮಾಲೀಕತ್ವ ಹೊಂದಿರುವ ಕಲಂ 8ರ ಕಂಪನಿ ಕಾಯ್ದೆ-2013ರ ಅಡಿ ನೋಂದಾವಣೆಗೊಂಡ ಸಿರಿ ಸಂಸ್ಥೆಯು ಲಾಭದ ಉದ್ದೇಶವಿಲ್ಲದೆ ಕಾರ್ಯನಿರ್ವಹಿಸುತ್ತಿರುವುದರಿಂದ ಆದಾಯ ತೆರಿಗೆ ಕಾಯ್ದೆ -1961ರ ಅಡಿ ವಿಶೇಷವಾಗಿ ಕೊಡಲ್ಪಡುವ ಕಲಂ 12ಎ ಮತ್ತು ಕಲಂ 80ಜಿ ಆದಾಯ ತೆರಿಗೆ ವಿನಾಯಿತಿ ಪಡೆದುಕೊಂಡಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಗ್ರಾಮೀಣಾಭಿವೃದ್ಧಿ ಇಲಾಖೆಗಳು ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಣಕಾಸಿನ ನೆರವಿನೊಂದಿಗೆ ಆರಂಭವಾದ ಸಂಸ್ಥೆಯು ಉತ್ಪನ್ನಗಳನ್ನು ರಾಜ್ಯಾದ್ಯಂತ ಸಿರಿ ಬ್ರಾ್ಯಂಡ್​ನಲ್ಲಿ ಮಾರಾಟ ಮಾಡುತ್ತಿದೆ.

ಬಡ ಮಹಿಳೆಯರಿಗೆ ಆಸರೆ: ವಿಶೇಷ ತಜ್ಞತೆಯಿಲ್ಲದ ಮಹಿಳೆಯರಿಗೆ ಕೌಶಲಾಭಿವೃದ್ಧಿ ತರಬೇತಿಗಳನ್ನು ನೀಡಿ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸುವಂತೆ ಮಾಡುವುದು ಸಿರಿಯ ವಿಶೇಷತೆ. ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ಸಮುದಾಯದ ಬಡ ಹೆಣ್ಣುಮಕ್ಕಳೇ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಂತಹ 1000ಕ್ಕೂ ಹೆಚ್ಚು ಸಿಬ್ಬಂದಿ ಹೊಂದಿರುವ ಸಂಸ್ಥೆಯು ಪ್ರತ್ಯಕ್ಷ /ಪರೋಕ್ಷವಾಗಿ 5000ಕ್ಕೂ ಹೆಚ್ಚು ಕುಟುಂಬಗಳಿಗೆ ಆಶ್ರಯ ನೀಡಿ ಅವರ ಬಾಳು ಹಸನಾಗಿಸುತ್ತಿದೆ.

ಬೆಂಗಳೂರಿನಲ್ಲಿ ಗೋದಾಮು: ಸಿರಿ ಸಂಸ್ಥೆಯಿಂದ ಗ್ರಾಮೀಣ ಗ್ರಾಹಕರಿಗೂ ಉತ್ಪನ್ನಗಳನ್ನು ಪೂರೈಸಲಾಗುತ್ತಿದೆ. ಉತ್ತರ ಕರ್ನಾಟಕದ ಗ್ರಾಹಕರಿಗೆ ಪೂರೈಸಲು ಧಾರವಾಡದ ರಾಯಪುರದಲ್ಲಿ ಗೋದಾಮು ಸ್ಥಾಪಿಸಲಾಗಿದೆ. ದಕ್ಷಿಣ ಕರ್ನಾಟಕ ಭಾಗದಲ್ಲಿ ಮಾರುಕಟ್ಟೆ ವಿಸ್ತರಿಸಲು ಬೆಂಗಳೂರು ವಲಯವನ್ನು ಕೇಂದ್ರೀಕರಿಸಿ, ಸೂಪರ್ ಸ್ಟಾಕಿಸ್ಟ್​ದಾರರು, ವಿತರಕರು ಹಾಗೂ ರಿಟೇಲ್ ಮಾರಾಟ ಮಳಿಗೆಗಳಿಗೆ ಬೇಡಿಕೆಗೆ ಅನುಗುಣವಾಗಿ ಕ್ಲಪ್ತ ಸಮಯದಲ್ಲಿ ಉತ್ಪನ್ನಗಳನ್ನು ಪೂರೈಸುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಗೋದಾಮು ತೆರೆಯಲು ಉದ್ದೇಶಿಸಲಾಗಿದೆ.

ಪ್ರಸ್ತುತ ಸಂಸ್ಥೆಯಲ್ಲಿ ವಾರ್ಷಿಕ 30 ಕೋಟಿ ರೂ. ಮೊತ್ತದ ವ್ಯವಹಾರ ನಡೆಯುತ್ತಿದೆ. ಎಸ್.ಕೆ.ಡಿ.ಆರ್.ಡಿ.ಪಿ. ಹಾಗೂ ಸಂಸ್ಥೆಯ ಸಹಯೋಗದಲ್ಲಿ ರಾಜ್ಯದೆಲ್ಲೆಡೆ ಮಾರುಕಟ್ಟೆ ವಿಸ್ತರಿಸುವ ಯೋಜನೆ ಹಾಕಿಕೊಳ್ಳಲಾಗಿದೆ.

ಸ್ವ-ಉದ್ಯೋಗಕ್ಕೆ ಉತ್ತೇಜನ: ಹಳ್ಳಿಗಳಲ್ಲಿ ನಿರುದ್ಯೋಗ ಸಮಸ್ಯೆ ಎದುರಿಸುತ್ತಿರುವ, ಪ್ರಮುಖವಾಗಿ ಯುವಕ-ಯುವತಿಯರಿಗೆ ತಮ್ಮದೇ ಆದ ಅಂಗಡಿ ಮಳಿಗೆಯನ್ನು ತೆರೆದು, ಉತ್ಪನ್ನಗಳನ್ನು ಮಾರಾಟ ಮಾಡಿ ಸ್ವ-ಉದ್ಯೋಗದಲ್ಲಿ ತೊಡಗಿಸಿಕೊಳ್ಳಲು ಸಂಸ್ಥೆ ಅವಕಾಶ ನೀಡುತ್ತಿದೆ. ಸಂಸ್ಥೆಯ ಉತ್ಪನ್ನಗಳು, ಸಿರಿಧಾನ್ಯಗಳಿಗೆ ರಾಜ್ಯಾದ್ಯಂತ ಬೇಡಿಕೆಯಿದೆ. ರಾಜ್ಯಾದ್ಯಂತ ಹಲವಾರು ಉತ್ಪನ್ನಗಳನ್ನು ಸಂಸ್ಥೆಯ ಘಟಕಗಳ ಮೂಲಕ ಉತ್ಪಾದಿಸಲಾಗುತ್ತಿದೆ.

ಆಹಾರ ಉತ್ಪನ್ನಗಳು: ಕೋಕಮ್ ಜ್ಯೂಸ್, ಅಕ್ಕಿರೊಟ್ಟಿ, ಪುಷಿ ್ಟಪೌಷ್ಟಿಕ ಆಹಾರ), ಮೆಣಸಿನಹುಡಿ, ಪುಳಿಯೋಗರೆ ಪುಡಿ, ಸಾಂಬಾರ್, ಗರಂ ಮಸಾಲ, ರಸಂ ಪುಡಿ, ಪಲಾವ್ ಮಸಾಲೆ, ಬಿಸಿಬೇಳೆ ಬಾತ್, ಉಪ್ಪಿಟ್ಟು ಮಿಕ್ಸ್, ರವೆ ಇಡ್ಲಿ ಮಿಕ್ಸ್, ಬಾದಾಮಿ ಹಾಲು ಮಿಕ್ಸ್, ಕೊಬ್ಬರಿ ಎಣ್ಣೆ, ಜೇನುತುಪ್ಪ ಹಾಗೂ ವಿವಿಧ ಬಗೆಯ ಉಪ್ಪಿನಕಾಯಿಗಳನ್ನು ತಯಾರಿಸಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಗುರುವಾಯನಕೆರೆ, ಬೆಳ್ತಂಗಡಿ ಮೊದಲಾದ ಕಡೆಗಳಲ್ಲಿ ಉತ್ಪಾದನಾ ಘಟಕಗಳನ್ನು ಹೊಂದಿದೆ.

ಶುಚಿಕಾರಕಗಳು: ವಿವಿಧ ಸುವಾಸನೆಯ ಫಿನಾಯಿಲ್​ಗಳು, ಲಿಕ್ವಿಡ್ ಸೋಪ್​ಗಳಾದ ಹ್ಯಾಂಡ್ ವಾಷ್, ಫ್ಲೇರ್ ವಾಷ್, ವೆಹಿಕಲ್ ವಾಷ್, ಡಿಶ್ ವಾಷ್​ಗಳು, ಬ್ಲೀಚಿಂಗ್ ಪೌಡರ್, ಡಿಶ್​ವಾಷ್ ಪೌಡರ್, ಡಿಟರ್ಜೆಂಟ್ ಸೋಪ್, ಪೌಡರ್​ಗಳನ್ನು ತಯಾರಿಸಲಾಗುತ್ತಿದೆ. ದ.ಕ. ಜಿಲ್ಲೆಯ ದೊಂಡೋಲೆ, ಬೆಳಾಲು, ಗೇರುಕಟ್ಟೆ ಸ್ಥಳಗಳಲ್ಲಿ ತಯಾರಿಕಾ ಘಟಕಗಳು ಕಾರ್ಯನಿರ್ವಹಿಸುತ್ತಿವೆ.

ಅಗರಬತ್ತಿಗಳು: ದ.ಕ.ಜಿಲ್ಲೆಯಲ್ಲಿ ಬೀಡಿ ಉದ್ಯಮವನ್ನೇ ನಂಬಿ ಜೀವನ ನಡೆಸುತ್ತಿದ್ದ ಮಹಿಳೆಯರಿಗೆ ಅದಕ್ಕೆ ಪೂರಕವಾಗಿ ಅಗರಬತ್ತಿ ತಯಾರಿಸುವ ಯೋಜನೆ ಪ್ರಾರಂಭಿಸಿದ ಕೀರ್ತಿ ಸಿರಿ ಸಂಸ್ಥೆಗೆ ಸಲ್ಲುತ್ತದೆ. ಬೆಳ್ತಂಗಡಿ, ಗರ್ಡಾಡಿ, ನೈನಾಡು, ಪೆರಿಯಡ್ಕ, ನಾವೂರು, ತುಂಬೆ ಮುಂತಾದ ಸ್ಥಳಗಳಲ್ಲಿ ಅಗರಬತ್ತಿ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಪ್ರಸ್ತುತ ರೋಸ್, ಶ್ರೀಗಂಧ, ಚಂಪಾ, ಮೋಗ್ರ, ಫ್ಯಾನ್ಸಿ ಇಂಟಿಮೇಟ್, ವಿಭೂತಿ ಸುವಾಸನೆಯ ಒಟ್ಟು 22 ಬಗೆಯ ಅಗರಬತ್ತಿಗಳನ್ನು ರೋಲ್, ಪೌಚ್, ಪ್ಯಾಕೆಟ್​ಗಳಲ್ಲಿ ಪೂರೈಸಲಾಗುತ್ತಿದೆ.

ಸಿದ್ಧ ಉಡುಪುಗಳು: ಪುರುಷರಿಗಾಗಿ ಫಾರ್ಮಲ್ ಶರ್ಟ್, ಕುರ್ತಾ, ಸಾಂಪ್ರದಾಯಿಕ ಉಡುಗೆಗಳು, ಬಮುಡಾ, ಜೀನ್ಸ್ ಪ್ಯಾಂಟ್, ಫಾರ್ಮಲ್ ಪ್ಯಾಂಟ್​ಗಳನ್ನು, ಮಹಿಳೆಯರಿಗಾಗಿ ಕುರ್ತಿಗಳು, ಟಾಪ್ಸ್, ನೈಟಿ, ಸೀರೆ, ಸ್ಕರ್ಟ್ ಮುಂತಾದವುಗಳನ್ನು ಉತ್ಪಾದಿಸಲಾಗುತ್ತಿದೆ. ಹಾವೇರಿ ಜಿಲ್ಲೆಯ ಚಿಕ್ಕಾಂಶಿ, ಧಾರವಾಡ ಜಿಲ್ಲೆಯ ಪಶುಪತಿಹಾಳ, ಕಣವಿಹೊನ್ನಾಪುರ, ಗದಗ ಜಿಲ್ಲೆಯ ಸೊರಟೂರು ಮುಂತಾದ ಸ್ಥಳಗಳಲ್ಲಿ ಸಿದ್ಧ ಉಡುಪು ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಅಲ್ಲದೆ, ಸಿರಿ ಸಂಸ್ಥೆಯನ್ನು ಖಾದಿ ಉತ್ಪನ್ನಗಳಿಗೆ ರಾಯಭಾರಿಯಾಗಿ ನೇಮಿಸಲಾಗಿದ್ದು, ಸಿರಿ ಖಾದಿ ಉತ್ಪನ್ನಗಳಿಗೆ ಉತ್ತಮ ಬೇಡಿಕೆ ಬರುತ್ತಿದೆ.

ರೆಕ್ಸಿನ್ ಬ್ಯಾಗ್​ಗಳು: ಸ್ಕೂಲ್ ಬ್ಯಾಗ್, ಎಕ್ಸಿಕ್ಯೂಟಿಗ್ ಬ್ಯಾಗ್, ಫೈಲ್ ಬ್ಯಾಗ್, ಲಗೇಜ್, ಲ್ಯಾಪ್​ಟಾಪ್ ಬ್ಯಾಗುಗಳು ವಿವಿಧ ವಿನ್ಯಾಸದ ರೆಕ್ಸಿನ್ ಬ್ಯಾಗ್​ಗಳನ್ನು ಸಿರಿ ಸಂಸ್ಥೆಯಲ್ಲಿ ತಯಾರಿಸಿಕೊಡಲಾಗುತ್ತಿದೆ. ದ.ಕ. ಜಿಲ್ಲೆಯ ಉಜಿರೆ, ಹೊಸ್ಮಾರು, ಕೊಕ್ಕಡ, ಕೊಕ್ರಾಡಿ ಮುಂತಾದ ಸ್ಥಳಗಳಲ್ಲಿ ಬ್ಯಾಗ್ ತಯಾರಿಕಾ ಘಟಕಗಳಿವೆ.

ಸಿರಿಧಾನ್ಯ ಸಂಸ್ಕರಣಾ ಘಟಕ: ಧಾರವಾಡ ಜಿಲ್ಲೆಯ ರಾಯಪುರದಲ್ಲಿ ಸುಸಜ್ಜಿತ ಸಿರಿಧಾನ್ಯ ಘಟಕ ಆರಂಭಿಸಿದ್ದು, ಸಾಮೆ, ಕೊರಲೆ, ನವಣೆ, ರಾಗಿ, ಜೋಳ, ಊದಲು, ಸಜ್ಜೆ, ಹಾರಕ, ಬರಗು ಇತ್ಯಾದಿ ಸಿರಿಧಾನ್ಯಗಳನ್ನು ರಾಜ್ಯಾದ್ಯಂತ ಗ್ರಾಹಕರಿಗೆ 1 ಕೆ.ಜಿ ಹಾಗೂ ಬಲ್ಕ್ ಪ್ಯಾಕೆಟ್​ಗಳಲ್ಲಿ ತಲುಪಿಸಲಾಗುತ್ತಿದೆ.

ಸಿರಿಧಾನ್ಯಗಳ ಬೇಕರಿ ಉತ್ಪನ್ನಗಳು: ಧಾರವಾಡದ ರಾಯಪುರದಲ್ಲಿರುವ ಸಿರಿಧಾನ್ಯಗಳ ಸಂಸ್ಕರಣಾ ಘಟಕದಲ್ಲಿ ರಸ್ಕ್, ಬ್ರೆಡ್, ಕುಕ್ಕೀಸ್ ಸೇರಿ ಕೊಲೆಸ್ಟ್ರಾಲ್, ಮಧುಮೇಹ, ಬೊಜ್ಜು ನಿವಾರಕ ಹಾಗೂ ಉತ್ತಮ ಜೀರ್ಣಕ್ರಿಯೆಗೆ ಸಹಕಾರಿಯಾಗುವ, ಹೃದಯಸಂಬಂಧಿ ಕಾಯಿಲೆಗಳನ್ನು ನಿಯಂತ್ರಿಸುವ ಮಿಲ್ಲೆಟ್ ಮೌಲ್ಯವರ್ಧಿತ ಉತ್ಪನ್ನಗಳನ್ನು ಉತ್ಪಾದಿಸಲಾಗುತ್ತಿದೆ.

ಸಿರಿ ಮಿಲೆಟ್ ಕೆಫೆ: ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ಪ್ರಪ್ರಥಮವಾಗಿ ಆರಂಭಿಸಲಾದ ಸಿರಿಧಾನ್ಯದ ಉಪಾಹಾರ ಗೃಹ. ಇಲ್ಲಿ ಶುಚಿ-ರುಚಿಯಾದ ಆರೋಗ್ಯಕರ ಸಿರಿಧಾನ್ಯಗಳ ಭೋಜನ ಮತ್ತು ಖಾದ್ಯಗಳ ಜತೆಗೆ ಮಕ್ಕಳಿಗೆ ಆಟದ ಮೈದಾನದ ವ್ಯವಸ್ಥೆಯೂ ಇದೆ.

ಸಿರಿ ಮಾರಾಟ ಜಾಲಗಳು: ಸಿರಿ ಸಂಸ್ಥೆಯು ಸ್ವಂತ 14 ಮಳಿಗೆಗಳನ್ನು ಹೊಂದಿದೆ. ಈ ಮೂಲಕ ಹೆಚ್ಚಿನ ಗ್ರಾಹಕರಿಗೆ ಉತ್ಪನ್ನಗಳನ್ನು ತಲುಪಿಸುತ್ತಿದೆ. ಇವು ಧರ್ಮಸ್ಥಳ ಮತ್ತು ಧಾರವಾಡ, ಹಾಸನ, ಬೆಂಗಳೂರು, ಮಂಗಳೂರಿನಲ್ಲಿರುವ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಗಳ ವಠಾರದಲ್ಲಿ ಕಾರ್ಯನಿರ್ವಹಿಸುತ್ತಿವೆ.

ಸಿರಿ ಲೈನ್​ಸೇಲ್: ರಾಜ್ಯಾದ್ಯಂತ 11 ಸಿರಿ ವಾಹನಗಳ ಮೂಲಕ ರಿಟೈಲ್ ಮಳಿಗೆಗಳಿಗೆ ಉತ್ಪನ್ನಗಳನ್ನು ಲೈನ್​ಸೇಲ್ ಮೂಲಕ ಪೂರೈಸಲಾಗುತ್ತಿದೆ. ಸಿರಿ ಸಂಚಾರಿ ಮಾರಾಟ ವಾಹನದಲ್ಲಿಯೂ ಗ್ರಾಹಕರಿಗೆ ಸಿರಿ ಉತ್ಪನ್ನಗಳನ್ನು ಪೂರೈಸಲಾಗುತ್ತಿದೆ.

ಫ್ರಾಂಚೈಸಿ ಮಳಿಗೆಗಳು: ನಿರುದ್ಯೋಗ ಸಮಸ್ಯೆ ಎದುರಿಸುತ್ತಿರುವ ಯುವಕ- ಯುವತಿಯರಿಗಾಗಿ ನಗರ ಪ್ರದೇಶದಲ್ಲಿ ಸಿರಿ ಫ್ರಾಚೈಸಿ ಮಳಿಗೆ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಸಿರಿ ಮಳಿಗೆಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ.

ವಿತರಕರ ಜಾಲ: ಉತ್ಪನ್ನಗಳನ್ನು ಗ್ರಾಹಕರಿಗೆ ಸಕಾಲದಲ್ಲಿ ತಲುಪಿಸುವ ನಿಟ್ಟಿನಲ್ಲಿ ಸಿರಿ ಸಂಸ್ಥೆಯಿಂದ ವಿತರಕರ ಜಾಲ ವಿಸ್ತರಿಸಲಾಗಿದ್ದು, ಈಗಾಗಲೆ ರಾಜ್ಯಾದ್ಯಂತ 18 ಸೂಪರ್ ಸ್ಟಾಕಿಸ್ಟ್​ದಾರರು ಹಾಗೂ 160ಕ್ಕೂ ಅಧಿಕ ವಿತರಕರ ಮುಖಾಂತರ ಉತ್ಪನ್ನಗಳನ್ನು ಪೂರೈಕೆ ಮಾಡಲಾಗುತ್ತಿದೆ.

ಆಕರ್ಷಕ ಬೆಲೆಯಲ್ಲಿ ದೊರೆಯುವ ಸಿರಿ ಸಂಸ್ಥೆಯ ಉತ್ಕೃ್ಟ ಗುಣಮಟ್ಟದ ಉತ್ಪನ್ನಗಳನ್ನು ರಾಜ್ಯದ ಜನತೆ ಖರೀದಿಸಿ, ವಿಶೇಷತೆಯ ಬಗ್ಗೆ ತಿಳಿಸುವ ಮೂಲಕ ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ಕೈ ಜೋಡಿಸಬೇಕು. ಸಂಸ್ಥೆಯ ಏಳಿಗೆಗಾಗಿ ಸಂಪೂರ್ಣ ಸಹಕಾರ ನೀಡಬೇಕು.

| ಕೆ.ಎನ್. ಜನಾರ್ದನ ವ್ಯವಸ್ಥಾಪಕ ನಿರ್ದೇಶಕರು, ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ

ರಮೇಶ್ ಅರವಿಂದ್ ರಾಯಭಾರಿ

ನಟ ರಮೇಶ್ ಅರವಿಂದ್ ಅವರನ್ನು ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಉತ್ಪನ್ನಗಳ ರಾಯಭಾರಿಯಾಗಿ (ಬ್ರಾ್ಯಂಡ್ ಅಂಬಾಸಡರ್) ನೇಮಿಸಲಾಗಿದೆ. ಉತ್ಪನ್ನಗಳ ಬೇಡಿಕೆ ಹೆಚ್ಚಿಸಲು ಎಸ್.ಕೆ.ಡಿ.ಆರ್.ಡಿ.ಪಿ. ಬಿ.ಸಿ ಟ್ರಸ್ಟ್ ಸಹಯೋಗದೊಂದಿಗೆ ಸ್ಥಳೀಯ ಹಾಗೂ ಮುಖ್ಯ ದಿನಪತ್ರಿಕೆ, ವಾರ ಪತ್ರಿಕೆಗಳಲ್ಲಿ, ಟಿ.ವಿ.ಗಳಲ್ಲಿ, ಕೆ.ಎಸ್.ಆರ್.ಟಿ.ಸಿ. ಬಸ್ ಬ್ರಾ್ಯಂಡಿಂಗ್, ಆಟೋ ರಿಕ್ಷಾ ಬ್ರಾ್ಯಂಡಿಂಗ್ ಸೇರಿ ವಿವಿಧ ಪ್ರಚಾರ ಮಾಧ್ಯಮಗಳ ಮೂಲಕ ಸಿರಿ ಉತ್ಪನ್ನಗಳು, ಸಿರಿಧಾನ್ಯ ಮತ್ತು ಸಿರಿಧಾನ್ಯಗಳ ಸಂಸ್ಕರಿತ ಉತ್ಪನ್ನಗಳ ಕುರಿತು ಜಾಹೀರಾತುಗಳನ್ನು ಪ್ರದರ್ಶಿಸಲಾಗುತ್ತಿದೆ. ಸಿರಿ ಉತ್ಪನ್ನಗಳ ಆಕರ್ಷಕ ಜಾಹೀರಾತುಗಳ ಮೂಲಕ ಉತ್ಪನ್ನಗಳು ರಾಜ್ಯದೆಲ್ಲೆಡೆ ಗ್ರಾಹಕರನ್ನು ತಲುಪುವಲ್ಲಿ ಯಶಸ್ವಿಯಾಗಿವೆ.

ಬೆಳ್ತಂಗಡಿಯಲ್ಲಿ ಸಂಸ್ಥೆಯ ನೂತನ ಕಟ್ಟಡ

ಡಾ.ಡಿ.ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ವೀ. ಹೆಗ್ಗಡೆ ಅವರ ಆಶೀರ್ವಾದದೊಂದಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅನುದಾನದಲ್ಲಿ ಬೆಳ್ತಂಗಡಿಯಲ್ಲಿ ಖರೀದಿಸಿರುವ ಏಳು ಎಕರೆ ಜಮೀನಿನ ಒಟ್ಟು 1.50 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ಸಿರಿ ಸಂಸ್ಥೆಯ ನೂತನ ಕಟ್ಟಡ ನಿರ್ವಣಗೊಳ್ಳುತಿದೆ. ಇಲ್ಲಿ ಸಿರಿಯ ಎಲ್ಲ ಉತ್ಪನ್ನಗಳ ಉತ್ಪಾದನಾ ಘಟಕಗಳನ್ನು ಸ್ಥಾಪಿಸಿ, ಕಡಿಮೆ ಬೆಲೆ, ಉತ್ತಮ ಗುಣಮಟ್ಟ ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಉತ್ಪನ್ನಗಳನ್ನು ಉತ್ಪಾದಿಸಲು ಯೋಜನೆ ರೂಪಿಸಲಾಗಿದೆ. ಕಟ್ಟಡ ಉದ್ಘಾಟನೆಯ ನಂತರ ಇಲ್ಲಿ ಮತ್ತೆ ಸಾವಿರಕ್ಕೂ ಅಧಿಕ ಬಡ ಹೆಣ್ಣು ಮಕ್ಕಳಿಗೆ ಉದ್ಯೋಗಾವಕಾಶ ನೀಡಲು ಸಾಧ್ಯವಾಗಲಿದೆ.