ಸಿರವಾರ: ತಾಲೂಕು ಕೇಂದ್ರದಿಂದ ಜಿಲ್ಲಾ ಕೇಂದ್ರ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚಿನ ಬಸ್‌ಗಳ ವ್ಯವಸ್ಥೆ ಮಾಡಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರಡ್ಡಿ ಹೇಳಿದರು.
ಪಟ್ಟಣದಲ್ಲಿ ಕೆಕೆಆರ್‌ಡಿಬಿ ಅನುದಾನದಡಿ ನಿರ್ಮಿಸಿರುವ ನೂತನ ಬಸ್ ನಿಲ್ದಾಣವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದ ಅವರು, ಹೊಸ ಬಸ್ ನಿಲ್ದಾಣದಲ್ಲಿ ಸ್ವಚ್ಛತೆ ಕಾಪಾಡಬೇಕು. ಮೂಲ ಸೌಕರ್ಯಗಳಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಶಾಸಕ ಜಿ.ಹಂಪಯ್ಯ ನಾಯಕ ಅವರ ಬೇಡಿಕೆಯಂತೆ ಸಿರವಾರ ಮಾರ್ಗವಾಗಿ ಧಾರವಾಡ, ಹುಬ್ಬಳಿಗೆ ಹೊಸ, ಬೆಂಗಳೂರಿಗೆ ಹೆಚ್ಚಿನ ಬಸ್ ಹಾಗೂ ಸಿರವಾರದಿಂದ ರಾಯಚೂರಿಗೆ ರಾತ್ರಿ 9 ಗಂಟೆ ನಂತರ ಹೆಚ್ಚಿನ ಬಸ್‌ಗಳನ್ನು ಓಡಿಸಬೇಕೆಂದು ಸಾರಿಗೆ ಅಧಿಕಾರಿಗಳಿಗೆ ಸೂಚಿಸಿದರು.
ರಾಜ್ಯದಲ್ಲಿ ಶಕ್ತಿ ಯೋಜನೆಯಡಿ ನಿತ್ಯ 25 ಲಕ್ಷಕ್ಕೂ ಹೆಚ್ಚು ಮಹಿಳೆಯರು ಸಂಚರಿಸುತ್ತಿದ್ದಾರೆ. ವರ್ಷಕ್ಕೆ 429 ಕೋಟಿಗೂ ಅಧಿಕ ಮಹಿಳೆಯರು ಓಡಾಡುತ್ತಿದ್ದಾರೆ. ಸಾರಿಗೆ ನಿಗಮಕ್ಕೆ ಪ್ರತಿ ತಿಂಗಳು ಸರ್ಕಾರ ಶಕ್ತಿ ಯೋಜನೆ ಹಣ ಪಾವತಿಸಲಾಗುತ್ತಿದೆ. ಇನ್ನೂ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಸಮಸ್ಯೆಯಾಗದಂತೆ ಕ್ರಮವಹಿಸಲಾಗಿದೆ. ಜಾತ್ರೆ ಸೇರಿ ಪ್ರಮುಖ ಸಂದರ್ಭಗಳಲ್ಲಿ ಹೆಚ್ಚುವರಿ ಬಸ್‌ಗಳನ್ನು ಓಡಿಸಲಾಗುತ್ತಿದೆ. ಸಾರಿಗೆ ಸಂಸ್ಥೆಯಲ್ಲಿ ಹೊಸದಾಗಿ 10 ಸಾವಿರ ಹುದ್ದೆ ಭರ್ತಿಗೆ ಆದೇಶ ನೀಡಲಾಗಿದೆ. ಕರ್ತವ್ಯದಲ್ಲಿರುವಾಗ ಮೃತಪಟ್ಟರೆ ಒಂದು ಕೋಟಿ ರೂ. ಪರಿಹಾರ ನಿಗಮ ನೀಡುತ್ತದೆ. ಈ ವ್ಯವಸ್ಥೆ ದೇಶದಲ್ಲಿ ಯಾವ ರಾಜ್ಯದಲ್ಲೂ ಇಲ್ಲ. ನಮ್ಮ ಸರ್ಕಾರ ಮಾತ್ರ ನೀಡುತ್ತಿದೆ. ಬೆಂಗಳೂರು ಭಾಗದಲ್ಲಿ ಸಾರಿಗೆ ನೌಕರರು ಹಾಗೂ ಅವರ ಕುಟುಂಬದ ಹಿತದೃಷ್ಟಿಯಿಂದ ಉಚಿತವಾಗಿ ಆರೋಗ್ಯ ಚಿಕಿತ್ಸೆ ಯೋಜನೆ ಆರಂಭ ಮಾಡಲಾಗಿದೆ. ಈ ಸಂಬಂಧ ರಾಜ್ಯದ ಪ್ರತಿಷ್ಠಿತ ಆಸ್ಪತ್ರೆಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲೂ ಈ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಶಾಸಕ ಜಿ.ಹಂಪಯ್ಯ ನಾಯಕ, ಪಪಂ ಅಧ್ಯಕ್ಷ ವೈ.ಭೂಪನಗೌಡ, ಉಪಾಧ್ಯಕ್ಷೆ ಲಕ್ಷ್ಮೀ ಆದೆಪ್ಪ, ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಬಸವರಾಜ ಪಾಟೀಲ ಇಟಗಿ, ಗ್ಯಾರಂಟಿ ಯೋಜನೆ ತಾಲೂಕು ಘಟಕದ ಅಧ್ಯಕ್ಷ ಬ್ರಿಜೇಶ ಪಾಟೀಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚುಕ್ಕಿ ಶಿವಕುಮಾರ, ಮಾಹಿಳಾ ಕಾಂಗ್ರೆಸ್ ಸಿರವಾರ ಘಟಕ ಅಧ್ಯಕ್ಷೆ ರೇಣುಕಾ, ಮುಖಂಡರಾದ ಶರಣಯ್ಯ ಗುಡದಿನ್ನಿ, ಶರಣಪ್ಪ ಮೇಟಿ, ರಮೇಶ ದರ್ಶನಕರ್, ಚುಕ್ಕಿ ಉಮಾಪತಿ ಸಾಹುಕಾರ್, ಶಿವಶರಣ ಸಾಹುಕಾರ್ ಅರಿಕೇರಿ, ಗಣೇಕಲ್ ವೀರೇಶ ಸಾಹುಕಾರ್, ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಶೇಖರ ಇತರರಿದ್ದರು.
ಕಾಂಗ್ರೆಸ್ ಸರ್ಕಾರ ಬೆಲೆ ಏರಿಕೆ ಮಾಡಿದೆ ಎಂದು ರಾಜ್ಯದಲ್ಲಿ ವಿರೋಧ ಪಕ್ಷದವರು ಜನಾಕ್ರೋಶ ಯಾತ್ರೆ ನಡೆಸುತ್ತಿದ್ದಾರೆ. ಆದರೆ, ಕೇಂದ್ರದಲ್ಲಿ ಮೋದಿ ಸರ್ಕಾರ ಬಂದ ಮೇಲೆ 60 ರೂ. ಇದ್ದ ಲೀಟರ್ ಪೆಟ್ರೋಲ್ ಬೆಲೆ 100 ರೂ. ಹಾಗೂ 40 ರೂ. ಇದ್ದ ಡೀಸೆಲ್ ದರ 100 ರೂ. ಮಾಡಿದೆ. ಅದರ ಬಗ್ಗೆ ಬಿಜೆಪಿಯವರು ಮಾತನಾಡುತ್ತಿಲ್ಲ. ಇದೀಗ ಮನೆ ಬಳಕೆ ಎಲ್‌ಪಿಜಿ ಬೆಲೆ ಹೆಚ್ಚಿಸಿದ್ದು, ಕೇಂದ್ರದ ವಿರುದ್ಧ ರಾಜ್ಯದ ಬಿಜೆಪಿ ನಾಯಕರು ಹೋರಾಟ ಮಾಡಲಿ. | ರಾಮಲಿಂಗಾರಡ್ಡಿ ಸಾರಿಗೆ ಸಚಿವ