ಅಫಜಲಪುರ: ಶಿರವಾಳ ಗ್ರಾಮದ ಶ್ರೀ ವೀರ ಸಂಗಮೇಶ್ವರ ಜಾತ್ರೋತ್ಸವ ನಿಮಿತ್ತ ಮಂಗಳವಾರ ಬೆಳಗ್ಗೆ ಅಗ್ನಿ ಪ್ರವೇಶ ಶ್ರದ್ಧಾ ಭಕ್ತಿಯಿಂದ ಭಕ್ತರ ಜಯಘೋಷಗಳ ಮಧ್ಯೆ ನಡೆಯಿತು. ಪುರವಂತರು ಹಾಗೂ ಪಲ್ಲಕ್ಕಿ ಹೊತ್ತ ಭಕ್ತರು ಅಗ್ನಿ ಪ್ರವೇಶ ಮಾಡಿದರು.
ಗೊಂಬೆ ಕುಣಿತ, ಡೊಳ್ಳು ಕುಣಿತ, ಚಿಟ್ಟ ಹಲಗಿ, ಭಜನಾ ಮಂಡಳಿಗಳ ಮೂಲಕ ಪಲ್ಲಕ್ಕಿ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಂತರ ದೇವಸ್ಥಾನಕ್ಕೆ ಬಂದು ತಲುಪಿತು.
ಸಂಜೆ ಭಕ್ತರ ಹರ್ಷೋದ್ಧಾರದ ಜತೆಗೆ ವೀರ ಸಂಗಮೇಶ್ವರ ಮಹಾರಾಜ ಕೀ ಜೈ ಎಂದು ಭಕ್ತರು ಸಂಭ್ರಮದಿಂದ ರಥವನ್ನು ಎಳೆದರು.
ಧರ್ಮಸಭೆಯ ಸಾನ್ನಿಧ್ಯ ವಹಿಸಿದ್ದ ಶ್ರೀ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು ಮಾತನಾಡಿ, ಗ್ರಾಮದ ಶ್ರೀ ವೀರ ಸಂಗಮೇಶ್ವರರು ಬೇಡಿದ ಭಕ್ತರಿಗೆ ಸಕಲವನ್ನು ಕರುಣಿಸುವ ಕಾಮಧೇನು ಕಲ್ಪವೃಕ್ಷರಾಗಿದ್ದಾರೆ. ಜೀವನದಲ್ಲಿ ಗುರಿಯನ್ನು ಸಾಧಿಸಲು ಗುರುವಿನ ಮಾರ್ಗದರ್ಶನವಿದ್ದಾಗ ಮಾತ್ರ ಸಾಧ್ಯವಾಗುತ್ತದೆ. ಇಂದಿನ ಯುವ ಸಮುದಾಯ ದೇಶದ ಭವ್ಯ ಭವಿಷ್ಯದ ರೂವಾರಿಗಳಾಗಿದ್ದು, ಯಾವುದೇ ದುಷ್ಚಟಗಳಿಗೆ ಬಲಿಯಾಗದೇ ಆರೋಗ್ಯಯುತ ಜೀವನ ನಿಮ್ಮದಾಗಿಸಿಕೊಳ್ಳಬೇಕೆಂದು ಹೇಳಿದರು.
ಶ್ರೀ ವೀರ ಮಹಾಂತ ಶಿವಾಚಾರ್ಯರು ಮಾತನಾಡಿ, ನದಿಯಲ್ಲಿ ಮಿಂದೆದಿದ್ದರೆ ಶರೀರದ ಕೊಳೆಯನ್ನು ಮಾತ್ರ ತೊಳೆಯುತ್ತದೆ. ಆದರೆ ಮನಸ್ಸಿನ ಕೊಳೆ ತೊಳೆಯಲು ದೇವರ ಧ್ಯಾನದ ಜತೆಗೆ ಸಂತರ ಶರಣರ ತತ್ವ, ಆದರ್ಶಗಳನ್ನು ಮೈಗೂಡಿಸಿಕೊಂಡು ನಡೆಯಬೇಕು ಎಂದು ಹೇಳಿದರು.
ಶ್ರೀ ಶಾಂತಲಿಂಗೇಶ್ವರ ಶಿವಾಚಾರ್ಯರು, ಶ್ರೀ ಪಾಂಡುರಂಗ ಮಹಾರಾಜರು, ಶ್ರೀ ರುದ್ರಮುನಿ ದೇವರು, ಶಂಕ್ರಯ್ಯ ಹಿರೇಮಠ, ಚನ್ನಯ್ಯ ಹಿರೇಮಠ. ಪ್ರಮುಖರಾದ ಚಂದ್ರಕಾಂತ ಇಬ್ರಾಹಿಂಪುರ, ಬಸವರಾಜ ಲಾಳಸಂಗಿ, ಶರಣು ಪ್ರಧಾನಿ, ಧರೇಶ ಅಂಜುಟಗಿ, ಮಳೆಪ್ಪ ಕರಜಗಿ, ಗಿರಿಮಲ್ಲ ದುಬಾರಿ, ಈರಣ್ಣ ಸುತಾರ, ಸಿದ್ದು ಶಿವೂರ, ಸೋಮನಾಥ ಕರಜಗಿ ಇತರರಿದ್ದರು.