ಸಿರಗುಪ್ಪ ತಾಪಂ ಸಭಾಂಗಣದಲ್ಲಿ ಶಾಸಕ ಬಿ.ಎಂ.ನಾಗರಾಜ ಅಧ್ಯಕ್ಷತೆಯಲ್ಲಿ ತಾಪಂ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ತಹಸೀಲ್ದಾರ್ ನರಸಪ್ಪ, ತಾ.ಪಂ. ಇ.ಒ ಪವನಕುಮಾರ್ ಇದ್ದರು. 
ಜಿಲ್ಲೆ

ವನ್ಯಜೀವಿಗಳ ಬೇಟೆ ಕುರಿತು ಜಾಗೃತಿ ಮೂಡಿಸಿ

ಸಿರಗುಪ್ಪ: ಮುಂಗಾರು ಹಂಗಾಮಿಗೆ ಎಕರೆಗೆ 10 ಕ್ವಿಂಟಾಲ್ ಹಾಗೂ ಹಿಂಗಾರು ಹಂಗಾಮಿಗೆ 15 ಕ್ವಿಂಟಾಲ್ ಜೋಳ ಖರೀದಿಗೆ ಅನುಮತಿ ನೀಡಲಾಗಿದೆ. ಈ ಹಿಂದೆ ನಡೆದ ಅವ್ಯವಹಾರಗಳನ್ನು ತಡೆದು ರೈತರಿಗೆ ನ್ಯಾಯ ಒದಗಿಸಬೇಕೆಂದು ಶಾಸಕ ಬಿ.ಎಂ.ನಾಗರಾಜ ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಪರ್ಯಾಯ ಬೆಳೆಗಳು, ಹೊಸ ತಳಿಗಳು, ಡಿಎಪಿ ಬದಲಿಗೆ ಇತರ ರಸಗೊಬ್ಬರ ಬಳಸುವಂತೆ ರೈತರಲ್ಲಿ ಜಾಗೃತಿ ಮೂಡಿಸಬೇಕು ಎಂದು ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಕಾಯ್ದಿರಿಸಿದ ಅರಣ್ಯದಲ್ಲಿ ಬಹಳ ವರ್ಷದಿಂದ ಉಳುಮೆ ಮಾಡುವ ರೈತರ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ನೀಡಬೇಕು. ವಿಶೇಷ ಪಕ್ಷಿ ಹೆಬ್ಬಹಕ್ಕಿಯನ್ನು ಸಂರಕ್ಷಿಸುವ ಕ್ರಮಗಳನ್ನು ಕೈಗೊಂಡು, ಹಣ್ಣುಗಳ ಮರಗಳನ್ನು ಹೆಚ್ಚಾಗಿ ಬೆಳೆಸಬೇಕು. ನದಿ ದಡದಲ್ಲಿ ವನ್ಯ ಜೀವಿಗಳ ಬೇಟೆ ಮತ್ತು ಅದರಿಂದ ರೈತರಿಗೆ ಆಗುವ ತೊಂದರೆಗಳ ಕುರಿತು ಜಾಗೃತಿ ಫಲಕಗಳನ್ನು ಅಳವಡಿಸಬೇಕು ಎಂದು ತಿಳಿಸಿದರು.

ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ತಾಲೂಕು ಜಿಲ್ಲೆಗೆ ಪ್ರಥಮ ಸ್ಥಾನ ಬರುವಂತೆ ಕ್ರಮ ಕೈಗೊಳ್ಳಬೇಕು. ಗುಣಮಟ್ಟದ ಶಿಕ್ಷಣಕ್ಕೆ ಸಂಬಂಧಿಸಿದಂತೆ ತಯಾರಿ ನಡೆಸಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿಗೆ ತಾಕೀತು ಮಾಡಿದರು.

ಕೆಕೆಆರ್‌ಡಿಬಿ ಅನುದಾನದಲ್ಲಿ ನಗರದಲ್ಲಿ ವಿವಿಧ ಕಡೆ ಸಿಸಿ ಕ್ಯಾಮರಾ ಅಳವಡಿಸಲು ಸೂಚಿಸಿದರು. ಎಲ್ಲ ಇಲಾಖೆಯ ಅಧಿಕಾರಿಗಳು, ಸಹಾಯಕ ಸಿಬ್ಬಂದಿ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ತಪ್ಪಿದಲ್ಲಿ ಮೂರರಷ್ಟು ದಂಡ ಹಾಕಿ ಎಚ್ಚರಿಸಬೇಕೆಂದು ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದರು.

ಅನುದಾನಕ್ಕೆ ಅನುಗುಣವಾಗಿ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳದೆ 2.30 ಕೋಟಿ ರೂ.ಅನುದಾನ ವಾಪಸ್ ಮಾಡಿರುವುದು ಸರಿಯಲ್ಲ. ನಗರ ಪ್ರದೇಶದಲ್ಲಿ ಚರಂಡಿಗಳನ್ನು ಸ್ವಚ್ಛಗೊಳಿಸಬೇಕು. ಮೂರು ದಿನಗಳಿಗೊಮ್ಮೆ ನೀರು ಸರಬರಾಜು ಮಾಡಬೇಕು. ಜನವಸತಿ ಇಲ್ಲದ ಲೇಔಟ್‌ಗಳಲ್ಲಿ ನೀಡಿದ ಸೌಲಭ್ಯಗಳನ್ನು ತಡೆಯಲು ಕ್ರಮ ಕೈಗೊಳ್ಳಿ ಎಂದು ನಗರಸಭೆ ಪೌರಾಯುಕ್ತಗೆ ಸೂಚಿಸಿದರು.

ಸಭೆಗೆ ಗೈರಾಗಿದ್ದ ಅಧಿಕಾರಿಗಳು ಮತ್ತು ತಪ್ಪು ಮಾಹಿತಿ ನೀಡಿದ ಎಪಿಎಂಸಿ ಅಧಿಕಾರಿಗೆ ನೋಟಿಸ್ ನೀಡುವಂತೆ ತಾಪಂ ಇಒಗೆ ಸೂಚಿಸಿದರು. ತೆಕ್ಕಲಕೋಟೆ ಪಟ್ಟಣದಲ್ಲಿ ಕುಡಿವ ನೀರಿನ ಹೊಸ ಕೆರೆ ನಿರ್ಮಾಣಕ್ಕೆ ಮುಖ್ಯಾಧಿಕಾರಿ ಪರಶುರಾಮ ಪ್ರಸ್ತಾವನೆ ಸಲ್ಲಿಸಿದರು.

ಪ್ರತಿ ಶುಕ್ರವಾರ ಮತ್ತು ಸೋಮವಾರ ಪೊಲೀಸರು ಕವಾಯತು ಮಾಡಲು ಆರು ಎಕರೆ, ಡಿವೈಎಸ್ಪಿ ಮತ್ತು ಸಿಪಿಐಗಳಿಗೆ ಸ್ಥಳೀಯವಾಗಿ ವಸತಿ ನಿಲಯ ಬೇಕೆಂದು ಸಿಪಿಐ ಹನುಮಂತಪ್ಪ ಮನವಿ ಮಾಡಿದರು.

ತಹಸೀಲ್ದಾರ್ ನರಸಪ್ಪ, ತಾಪಂ ಇಒ ಪವನಕುಮಾರ್, ಪಂಚಗ್ಯಾರಂಟಿ ಯೋಜನೆಯ ತಾಲೂಕು ಅಧ್ಯಕ್ಷ ಮಾರುತಿ ವರಪ್ರಸಾದ್‌ರೆಡ್ಡಿ, ತಾಲೂಕು ಮಟ್ಟದ ಅಧಿಕಾರಿಗಳಿದ್ದರು.