ಸಿರಗುಪ್ಪ ನಗರದ ಸದಾಶಿವ ನಗರದ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನದ ಪಕ್ಕದ ರಸ್ತೆಯಲ್ಲಿ ಒಳಚರಂಡಿಗೆ ಬೊಂಗಾ ಬಿದ್ದಿರುವುದು. 
ಜಿಲ್ಲೆ

ಅಪಾಯ ಆಹ್ವಾನಿಸುತ್ತಿರುವ ಚರಂಡಿಗಳು - ಸಿರಗುಪ್ಪ ರಸ್ತೆಯಲ್ಲಿ ಬೊಂಗಾ

ಶ್ರೀನಾಥ

ಸಿರಗುಪ್ಪ: ಪಟ್ಟಣದ ಪ್ರಮುಖ ರಸ್ತೆಯ ಮಧ್ಯೆ ಒಳಚರಂಡಿಗೆ ಬೊಂಗಾ ಬಿದ್ದಿದ್ದಲ್ಲದೇ ಹೂಳು ತುಂಬಿ ಸೊಳ್ಳೆ ಉತ್ಪತ್ತಿಯಾಗುತ್ತಿರುವುದು ಪಟ್ಟಣದ ನಿವಾಸಿಗಳಿಗೆ ನಿದ್ದೆಗೆಡೆಸಿದೆ.

ಸದಾಶಿವ ನಗರದ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನದ ಪಕ್ಕದ ರಸ್ತೆಯ ಮಧ್ಯಭಾಗದಲ್ಲಿ ನಿರ್ಮಿಸಿದ ಒಳಚರಂಡಿ ಬೊಂಗಾ ಬಿದ್ದು ನಾಲ್ಕು ತಿಂಗಳಾದರೂ ಸ್ಥಳೀಯ ಆಡಳಿತ ತಲೆಕೆಡಿಸಿಕೊಳ್ಳುವ ಗೋಜಿಗೆ ಹೋಗಿಲ್ಲ. ಅಲ್ಲದೇ ಪಾರ್ವತಿನಗರದ ಅಮೃತೇಶ್ವರ ದೇವಸ್ಥಾನಕ್ಕೆ ಹೋಗುವ ರಸ್ತೆ ಬದಿಯ ಚರಂಡಿಯ ಒಡೆದಿದ್ದು, ಹೂಳು ತುಂಬಿಕೊಂಡು ದುರ್ವಾಸನೆ ಬೀರುತ್ತಿದೆ. ಜನರಿಗೆ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ.

ಚರಂಡಿಗೆ ಬೊಂಗಾ ಬಿದ್ದಿರುವುದು ಕಳಪೆ ಕಾಮಗಾರಿಯಿಂದ ಎಂಬ ಆರೋಪಗಳು ಸಾರ್ವಜನಿಕರಿಂದ ಕೇಳಿಬಂದಿದೆ. ಪಾರ್ವತಿ ನಗರದ ರಸ್ತೆ ಬದಿಯ ಚರಂಡಿ ಛಾವಣಿ ಬಿದ್ದು, ದುರ್ವಾಸನೆ ಬೀರುತ್ತಿರುವುದರಿಂದ ಈ ರಸ್ತೆ ಮಾರ್ಗವಾಗಿ ಓಡಾಡುವ ವಿದ್ಯಾರ್ಥಿಗಳು, ಜನಸಾಮಾನ್ಯರು ಆತಂಕದಲ್ಲೇ ಓಡಾಡಬೇಕಾಗಿದೆ. ಅಪಘಾತಗಳು ಸಂಭವಿಸುವ ಮುನ್ನವೇ ಕ್ರಮ ಕೈಗೊಳ್ಳಬೇಕು ಎನ್ನುವುದು ಸ್ಥಳೀಯರ ಒತ್ತಾಯವಾಗಿದೆ.

ಕೋಟ್ : ಸದಾಶಿವ ನಗರದ ಅಮೃತೇಶ್ವರ ದೇವಸ್ಥಾನಕ್ಕೆ ಹೋಗುವ ದಾರಿಯ ಮಧ್ಯದಲ್ಲಿ ಈ ಬೊಂಗಾ ಬಿದ್ದು ನಾಲ್ಕೈದು ತಿಂಗಳು ಕಳೆದಿವೆ. ಈ ಕುರಿತು ಜನಪ್ರತಿನಿಧಿಗಳಿಗೆ ಹಾಗೂ ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಕ್ರಮಕೈಗೊಂಡಿಲ್ಲ. ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು ತ್ವರಿತವಾಗಿ ಸಮಸ್ಯೆ ಇತ್ಯರ್ಥಪಡಿಸಬೇಕಿದೆ.

> ಯಲ್ಲಪ್ಪ. ಕೆ.ಆರ್.ಎಸ್. ಪಕ್ಷದ ಮುಖಂಡ.

ಕೋಟ್: ರಸ್ತೆಯಲ್ಲಿ ಬೊಂಗಾ ಬಿದ್ದಿರುವುದು ಗಮನಕ್ಕೆ ಬಂದಿಲ್ಲ. ಕಚೇರಿಯ ಎಇಇ ಅವರನ್ನು ಸ್ಥಳಕ್ಕೆ ಕಳುಹಿಸಿ, ಮಾಹಿತಿ ಪಡೆದು ಕ್ರಮ ಕೈಗೊಳ್ಳಲಾಗುವುದು.

> ಗುರುಪ್ರಸಾದ್, ಪೌರಾಯುಕ್ತ, ನಗರಸಭೆ, ಸಿರಗುಪ್ಪ.