ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಸಿರಗುಪ್ಪದ ಗಾಂಧಿ ವೃತ್ತದಲ್ಲಿ ಬಿಜೆಪಿ ಮಂಡಲ ಘಟಕದಿಂದ ಪ್ರತಿಭಟನೆ ಮಾಡಲಾಯಿತು. ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ, ಮಂಡಲ ಘಟಕದ ಅಧ್ಯಕ್ಷ ಕುಂಟ್ನಾಳ್ ಮಲ್ಲಿಕಾರ್ಜುನ ಸ್ವಾಮಿ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಎಂ.ಎಸ್. ಸಿದ್ದಪ್ಪ, ಪ್ರಮುಖರು, ಕಾರ್ಯಕರ್ತರು ಇದ್ದರು. 
ಜಿಲ್ಲೆ

ಬಡವರ ಹೊಟ್ಟೆ ಮೇಲೆ ಬರೆ - ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ ಟೀಕೆ

ಶ್ರೀನಾಥ

ಸಿರಗುಪ್ಪ: ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ನಗರದ ಗಾಂಧಿ ವೃತ್ತದಲ್ಲಿ ಬಿಜೆಪಿ ಮಂಡಲ ಘಟಕದಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.

ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ ಮಾತನಾಡಿ, ಬೆಲೆ ಏರಿಕೆಯಿಂದ ಜನಸಾಮಾನ್ಯರ ಮೇಲೆ ಹೊರೆ ಬಿದ್ದಿದೆ. ಹಾಲಿನ ದರ, ವಿದ್ಯುತ್ ದರ, ಬಸ್ ಪ್ರಯಾಣ ದರ, ಮದ್ಯದ ದರ, ಸ್ಟಾಂಪ್ ಶುಲ್ಕ ಹಾಗೂ ವಿವಿಧ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದ ರಾಜ್ಯ ಸರ್ಕಾರವು ಬಡವರ ಹೊಟ್ಟೆ ಮೇಲೆ ಬರೆ ಎಳೆದಿದೆ. ದಿನೇದಿನೆ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿವೆ. ಗ್ಯಾರಂಟಿ ಯೋಜನೆಗಳಿಗೆ ಹಣ ಸರಿದೂಗಿಸಲು ಬೆಲೆ ಏರಿಕೆ ಮಾಡಿ, ಬಡ-ಮಧ್ಯಮ ವರ್ಗದವರ ಜೀವನ ದುಬಾರಿ ಮಾಡಿರುವುದು ಖಂಡನೀಯ ಎಂದು ಹೇಳಿದರು.

ಗಾಂಧಿ ವೃತ್ತದಲ್ಲಿ ಕಾಂಗ್ರೆಸ್ ನಾಯಕರ ಭಾವಚಿತ್ರ ಇರುವ ಪೋಸ್ಟರ್‌ಗಳನ್ನು ಬಿಜೆಪಿ ಕಾರ್ಯಕರ್ತರು ಸುಟ್ಟು ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ಎಂ.ಎಸ್ ಸಿದ್ದಪ್ಪ, ಪ್ರಮುಖರಾದ ದರಪ್ಪ ನಾಯಕ, ಮಹಾದೇವ, ಮೇಕಲಿ ವೀರೇಶ್, ಈರಣ್ಣ, ನಾಗೇಶಪ್ಪ, ಕಾರ್ಯಕರ್ತರು ಇದ್ದರು.