ಸಿರಗುಪ್ಪ: ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿ ಗಳ ಕೇಂದ್ರಿತ ಕಾರ್ಯಕ್ರಮವಾಗಿದ್ದು, ಶಿಸ್ತಿನ ಶಿಕ್ಷಣಕ್ಕೆ ಸಹಕಾರಿಯಾಗಿದೆ ಎಂದು ಪ್ರಾಚಾರ್ಯ ಜಿನ್ನಿನ ಕೊಟ್ರಪ್ಪ ಹೇಳಿದರು.
ಪಟ್ಟಣದ ವಾಲ್ಮೀಕಿ ಭವನದಲ್ಲಿ ಹೊನ್ನೂರಮ್ಮ ಎಂ.ಸಿದ್ದಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಶನಿವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯುವಕರು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಲು ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಎನ್ನೆಸ್ಸೆಸ್ ಸಹಕಾರಿಯಾಗಿದೆ ಎಂದರು. ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜವಾಬ್ದಾರಿ, ನಾಗರಿಕ ಪ್ರಜ್ಞೆ ಬೆಳೆಸುವುದು, ಸಮುದಾಯದ ಸಮಸ್ಯೆಗಳನ್ನು ಅರ್ಥೈಸಿಕೊಂಡು ಪರಿಹರಿಸಲು ರಾಷ್ಟ್ರೀಯ ಸೇವಾ ಯೋಜನೆಯಿಂದ ಸಾಧ್ಯ. ನಿರಂತರ ಸಂವಹನದಿಂದ ವಿದ್ಯಾರ್ಥಿಗಳು ಮತ್ತು ಶಿಕ್ಷಕರಲ್ಲಿ ಸ್ವಯಂಪ್ರೇರಿತ ಸೇವಾ ಮನೋಭಾವ ಬೆಳೆಸುತ್ತದೆ. ಸ್ವಚ್ಛತಾ ಅಭಿಯಾನ, ರಕ್ತದಾನ ಶಿಬಿರ, ಪರಿಸರ ಸಂರಕ್ಷಣೆ, ಸಾಕ್ಷರತಾ ಅಭಿಯಾನ ಮತ್ತು ಸಾಮಾಜಿಕ ಅರಿವು ಮೂಡಿಸುವಲ್ಲಿ ಎನ್ನೆಸ್ಸೆಸ್ ಸಾಮಾಜಿಕ ಬದ್ಧತೆಯಿಂದ ಕರ್ತವ್ಯ ನಿರ್ವಹಿಸಲು ನೆರವಾಗುತ್ತದೆ ಎಂದು ಜಿನ್ನಿನ ಕೊಟ್ರಪ್ಪ ತಿಳಿಸಿದರು.
ಎನ್ನೆಸ್ಸೆಸ್ ಎ.ಘಟಕದ ಶಿಬಿರಾಧಿಕಾರಿ ಕೃಷ್ಣಪ್ಪ, ಬಿ.ಘಟಕದ ಶಿಬಿರಾಧಿಕಾರಿ ಕೆ.ಎಂ.ಚಂದ್ರಕಾಂತ, ಉಪನ್ಯಾಸಕ ಬಸಪ್ಪ, ಸರ್ಕಾರಿ ಪದವಿ ಕಾಲೇಜು ಅಥಿತಿ ಉಪನ್ಯಾಸಕರ ಸಂಘ ತಾಲೂಕು ಅಧ್ಯಕ್ಷ ಬಿ.ರುದ್ರಪ್ಪ ಇತರರಿದ್ದರು.